ರೈತರ ಸಾಲ ಮನ್ನಾ ಜನಕ ಕುಮಾರಸ್ವಾಮಿ ಅಲ್ಲ: ಎಂಎಲ್ಸಿ ಅನಿಲ್‌ಕುಮಾರ್
Team Udayavani, Nov 23, 2022, 3:20 PM IST
ಕೋಲಾರ: ರೈತರ ಸಾಲ ಬಡ್ಡಿ ಮನ್ನಾದ ಜನಕ ಕುಮಾರಸ್ವಾಮಿ ಅಲ್ಲಾ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಟೀಕಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಂಚರತ್ನ ಯಾತ್ರೆ ಜಿಲ್ಲೆಯಲ್ಲಿಐದು ದಿನಗಳ ಪ್ರವಾಸ ಮುಗಿಸಿದ ಸಂದರ್ಭದಲ್ಲಿ ಕುಮಾರಸ್ವಾಮಿ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.
ಹಿಂದೆ ಪ್ರಧಾನಮಂತ್ರಿಯಾಗಿದ್ದ ಮನಮೋಹನ್‌ಸಿಂಗ್ ದೇಶದ ರೈತರ ಬಡ್ಡಿ ಮನ್ನಾ ಮಾಡಿದ್ದರು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರೈತರ 50 ಸಾವಿರ ರೂ. ಸಾಲ ಮನ್ನಾ ಮಾಡಿದ್ದರು. ಆನಂತರ ಕಾಂಗ್ರೆಸ್ ಬೆಂಬಲದಿಂದ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಮಾಡಿರುವ ಬಡ್ಡಿ ಮನ್ನಾ ಯೋಜನೆಯಲ್ಲಿ ಕಾಂಗ್ರೆಸ್ ಪಕ್ಷದ ಪಾಲೂ ಇದೆ ಎಂದರು.
ಹಿಂದೆ ಅಧಿಕಾರದಲ್ಲಿದ್ದಾಗ ದಲಿತ, ಅಲ್ಪಸಂಖ್ಯಾತ ಹಿಂದುಳಿದವರಿಗೆ ಅಧಿಕಾರ ನೀಡದ್ದಕ್ಕೆ ಜೆಡಿಎಸ್ ಮತ್ತು ಕುಮಾರಸ್ವಾಮಿ ಈ ವರ್ಗಗಳ ಕ್ಷಮೆ ಕೇಳಬೇಕು. ಹಿಂದೆ ಮಾಡಿರುವ ಈ ತಪ್ಪಿಗೆ ಪಾಪಪ್ರಜ್ಞೆ ಈಗ ಕಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಮಿಷನ್ 123 ಎನ್ನುತ್ತಾ ಕೇವಲ 126 ಕ್ಷೇತ್ರಗಳಿಗೆ ಪಂಚರತ್ನ ಯಾತ್ರೆ ತೆಗೆದುಕೊಂಡು ಹೋಗುವ ಕುಮಾರಸ್ವಾಮಿ ಮತ್ತವರ ಕುಟುಂಬದ್ದು ಬಹುಮತ ತೆಗೆದುಕೊಳ್ಳುವ ಗುರಿಯಲ್ಲ, ಅವರ ಹೋಮ, ಹವನ, ಪೂಜೆಯೆಲ್ಲರೂ ಕಾಂಗ್ರೆಸ್ ಮತ್ತು ಬಿಜೆಪಿ 100 ಸೀಟುಗಳನ್ನು ಗೆಲ್ಲಬಾರದು ಎಂಬುದಷ್ಟೇ ಎಂದು, ಬಹುಮತ ಸರಕಾರ ಬಂದರೆ ಮಹಿಳೆ, ಅಲ್ಪಸಂಖ್ಯಾತ, ದಲಿತ ಉಪ ಮುಖ್ಯಮಂತ್ರಿ ಎಂಬುದು ಕೇವಲ ನಗೆಪಾಟಲಿನ ಹೇಳಿಕೆಯಾಗಿದೆ. ಕೋಲಾರ ಮೂರು ಸಾಮಾನ್ಯ ಮೀಸಲು ಕ್ಷೇತ್ರ ಮತ್ತು ಚಿಕ್ಕಬಳ್ಳಾಪುರದ ಕ್ಷೇತ್ರಗಳಲ್ಲಿ ಒಂದೇ ಜಾತಿಯವರಿಗೆ ಟಿಕೆಟ್ ನೀಡುವ ಮತ್ತು ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರನ್ನು ಒಂದೇ ಜಾತಿಯವರನ್ನಿಟ್ಟುಕೊಂಡು ಜಾತ್ಯತೀತ ಜನತಾದಳ ಎನ್ನುವುದು ಡೋಂಗಿತನ ಎಂದು ಟೀಕಿಸಿದರು.
ಅಧಿಕಾರ ಸಿಕ್ಕಾಗ ಈ ವರ್ಗಗಳ ಎಷ್ಟು ಮಂದಿಗೆ ಹುದ್ದೆ ನೀಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್, ಎಚ್.ಕೆ.ಕುಮಾರಸ್ವಾಮಿ, ಫಾರೂಕ್‌ರನ್ನು ಹೇಗೆ ನಡೆಸಿಕೊಂಡಿದ್ದಾರೆನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಛೇಡಿಸಿದರು.
ಸಿದ್ದರಾಮಯ್ಯ ಸರಕಾರದಲ್ಲಿ ಅನುಷ್ಠಾನಗೊಂಡ ಕೆಸಿ ವ್ಯಾಲಿ ಯೋಜನೆಗೆ ಕುಮಾರಸ್ವಾಮಿಯೇ ಎರಡನೇ ಹಂತದ ವಿಸ್ತರಣೆಗೆ ಅನುಮತಿ ಕೊಟ್ಟು ಈಗ ಕೊಳಚೆ ನೀರಿನ ಯೋಜನೆ, ಕ್ಯಾನ್ಸರ್ ತರಿಸುವ ಯೋಜನೆ ಎಂದು ಆರೋಪಿಸುವುದು ಸತ್ಯಕ್ಕೆ ದೂರವಾದುದು. ಅವರ ವ್ಯಕ್ತಿತ್ವ, ಘನತೆಗೆ ಶೋಭೆ ತರುವುದಲ್ಲ, ಜನರಲ್ಲಿ ಗೊಂದಲ ಮೂಡಿಸುವ ಹೇಳಿಕೆಯಾಗಿದೆಯೆಂದರು.
ಎತ್ತಿನ ಹೊಳೆ ವಿಳಂಬಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಭೂಸ್ವಾಧೀನ ಪ್ರಕ್ರಿಯೆ ನಡೆಸದಿರುವುದೇ ಕಾರಣ ಎಂದು ಟೀಕಿಸಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇರದ ಕುಮಾರಸ್ವಾಮಿ, ಈ ಜಿಲ್ಲೆಗಳಿಗೆ ಭೇಟಿ ನೀಡಿದಾಗೆಲ್ಲಾ ಮೊಸಳೆ ಕಣ್ಣೀರು ಸುರಿಸುತ್ತಾರೆಂದು ವ್ಯಂಗ್ಯವಾಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಮಾಡಿಕೊಂಡಿದ್ದು ಘಟಬಂಧನವಲ್ಲ, ಕಾಂಗ್ರೆಸ್‌ನ ಗಟ್ಟಿ ಬಂಧನ, ಬಿಜೆಪಿ ಪರ ಕೆಲಸ ಮಾಡಿರುವ ಒಂದೇ ಒಂದು ದಾಖಲೆ ಇದ್ದರೆ ಕುಮಾರಸ್ವಾಮಿಯ ಆರೋಪ ಬೇಕಿರಲಿಲ್ಲ, ಕಾಂಗ್ರೆಸ್ ಹೈಕಮಾಂಡೇ ಅಂತವರನ್ನು ಪಕ್ಷದಿಂದ ಉಚ್ಛಾಟಿಸುತ್ತಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಕ್ಕಲೇರಿ ರಾಜಪ್ಪ, ಅಂಬರೀಷ್, ವೈ.ಶಿವಕುಮಾರ್, ಚಂಜಿಮಲೆ ರಮೇಶ್, ಹನುಮೇಶ್, ವರದೇನಹಳ್ಳಿ ವೆಂಕಟೇಶ್, ಮೈಲಾಂಡಹಳ್ಳಿ ಮುರಳಿ, ಸುಗಟೂರು ಮಂಜುನಾಥ್, ತಿಪ್ಪೇನಹಳ್ಳಿ ನಾಗೇಶ್ ಹಾಜರಿದ್ದರು.