ಅಂಜಿನಾದ್ರಿ ಬೆಟ್ಟದಲ್ಲಿ ಭಕ್ತ ಸಾಗರ; ಹನುಮ ಮಾಲೆ ವಿಸರ್ಜನೆಗೆ ಬೆಟ್ಟ ಹತ್ತಿದ ಮಾಲಾಧಾರಿಗಳು
Team Udayavani, Dec 5, 2022, 8:33 AM IST
ಕೊಪ್ಪಳ: ಐತಿಹಾಸಿಕ ಪ್ರಸಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜಿನಾದ್ರಿಯಲ್ಲಿ ಮಾಲೆ ವಿಸರ್ಜನೆಗೆ ಹನುಮ ಮಾಲಾಧಾರಿಗಳು ರಾತ್ರಿಯಿಂದ ಬೆಟ್ಟವನ್ನು ಹತ್ತುತ್ತಿದ್ದಾರೆ.
ರಾಜ್ಯ ಸೇರಿದಂತೆ ನಾನಾ ಭಾಗದಲ್ಲಿ ಪ್ರತಿ ವರ್ಷವೂ ಹನುಮ ಮಾಲಾಧಾರಿಗಳು ಭಕ್ತಿಯಿಂದಲೇ 41 ದಿನ, 21 ದಿನ, 11 ದಿನ, 5 ದಿನಗಳ ತಮ್ಮ ಭಕ್ತಿಯ ಅನುಸಾರ ಹನುಮ ನಾಮ ಪಠಣೆ ಮಾಡಿ ಮಾಲೆ ಧರಿಸಿರುತ್ತಾರೆ. ಇಂದು ಹನುಮ ವ್ರತ ಪ್ರಯುಕ್ತ ಮಾಲೆ ವಿಸರ್ಜನಾ ಕಾರ್ಯವು ಅಂಜಿನಾದ್ರಿ ಬೆಟ್ಟದಲ್ಲಿ ಪ್ರತಿ ವರ್ಷ ನಡೆಯುತ್ತದೆ.
ಅದರಂತೆ ಮಾಲೆ ವಿಸರ್ಜನಗೆ ನಾಡಿನ ಮೂಲೆಗಳಿಂದಲೂ ಹನುಮ ಮಾಲಾಧಾರಿಗಳು ಅಂಜಿನಾದ್ರಿ ಪುಣ್ಯ ಸ್ಥಳಕ್ಕೆ ನಿನ್ನೆಯಿಂದಲೇ ವಾಹನಗಳ ಮೂಲಕ, ಪಾದಯಾತ್ರೆಯ ಮೂಲಕ ಆಗಮಿಸಿದ್ದು, ಇಂದೂ ಸಹ ಸುತ್ತಲಿನ ಹನುಮ ಮಾಲಾಧಾರಿಗಳು ಬೆಟ್ಟದತ್ತ ಆಗಮಿಸುತ್ತಿದ್ದಾರೆ.
ನಿನ್ನೆ ರಾತ್ರಿಯೇ ಹನುಮ ಮಾಲಾಧಾರಿಗಳು ಶ್ರೀ ವಾಯು ಪುತ್ರನ ನಾಮ ಸ್ಮರಣೆ ಮಾಡುತ್ತ ಬೆಟ್ಟವನ್ನು ಹತ್ತಿದ್ದಾರೆ. ಇನ್ನೂ ಬೆಟ್ಟ ಹತ್ತುವ ಕಾರ್ಯವು ನಡೆದಿದೆ. ಬೆಳಂ ಬೆಳಗ್ಗೆ ಮಾಲಾಧಾರಿಗಳು ಬೆಟ್ಟವನ್ನು ಹತ್ತಿ ಶ್ರೀ ಆಂಜನೇಯನ ದರ್ಶನ ಪಡೆದರು.
ಅಂಜಿನಾದ್ರಿ ಗೆ 2 ಲಕ್ಷ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದ್ದು, ಕೊಪ್ಪಳ ಜಿಲ್ಲಾಡಳಿತ, ಗಂಗಾವತಿ ತಾಲೂಕಾಡಳಿತವು ಸಕಲ ವ್ಯವಸ್ಥೆ ಕೈಗೊಂಡಿದೆ. ವಿವಿಧ ಮಾರ್ಗಗಳಿಂದ ಆಗಮಿಸುವ ಹನುಮ ಮಾಲಾಧಾರಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಸ್ನಾನಗೃಹ, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಸಹಾಯವಾಣಿ ತೆರೆದಿದೆ. ವಿವಿಧೆಡೆ ನಾಮಫಲಕ ಹಾಕಿದ್ದು ಸಿಸಿ ಕ್ಯಾಮರಾ ಅಳವಡಿಕೆ ಮಾಡಿ ಸಕಲ ವ್ಯವಸ್ಥೆ ಮಾಡಿದೆ. ಅಂಜಿನಾದ್ರಿಯತ್ತ ಮಾಲಾಧಾರಿಗಳು ಆಗಮಿಸುತ್ತಿದ್ದಾರೆ.