ಗಂಗಾವತಿ: ಪ್ರವಾಸಕ್ಕೆ ಆಗಮಿಸಿದ್ದ ಸಿಂಗಪುರ್ ದೇಶದ ಪ್ರಜೆ ಹೃದಯಾಘಾತದಿಂದ ನಿಧನ
Team Udayavani, May 17, 2022, 2:18 PM IST
ಗಂಗಾವತಿ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ನವವೃಂದಾವನ ಗಡ್ಡಿ ಅಂಜನಾದ್ರಿ ಪಂಪಾ ಸರೋವರ ಸೇರಿದಂತೆ ಹಂಪಿ ವೀಕ್ಷಣೆಗೆ ಆಗಮಿಸಿದ್ದ ಸಿಂಗಪುರ್ ದೇಶದ ಪ್ರಜೆಯೊಬ್ಬ ಹೃದಯಾಘಾತದಿಂದ ನಿಧನರಾದ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ.
ಸಿಂಗಪುರ್ ದೇಶದ ಶೆಲ್ವ ನಾಥನ್ (77) ತಮ್ಮ ಕುಟುಂಬ ಸಮೇತರಾಗಿ ಅಂಜನಾದ್ರಿ ಕಿಷ್ಕಿಂದ,ನವವೃಂದಾವನ ಗಡ್ಡಿ ಹಾಗೂ ಹಂಪಿ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಆಗಮಿಸಿದ್ದರು. ಇಂದು ಬೆಳಿಗ್ಗೆ ನವವೃಂದಾವನ ಗಡ್ಡೆ ಸಂದರ್ಶನ ಮಾಡಲು ತೆರಳುತ್ತಿರುವ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು ಕೂಡಲೇ ಅವರನ್ನು ಆನೆಗುಂದಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆಲ್ವ ನಾಥನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ .
ಇತ್ತೀಚೆಗೆ ಅಂಜನಾದ್ರಿ ಮತ್ತು ಆನೆಗೊಂದಿ ಭಾಗದಲ್ಲಿ ಪ್ರವಾಸಕ್ಕೆ ಆಗಮಿಸುತ್ತಿರುವ ಪ್ರವಾಸಿಗರಲ್ಲಿ ಎರಡನೆಯ ಪ್ರವಾಸಿ ಹೃದಯಾಘಾತದಿಂದ ನಿಧನರಾಗಿದ್ದು ಕಳೆದ ದಿನಗಳ ಹಿಂದೆ ಉತ್ತರ ಭಾರತದ ವ್ಯಕ್ತಿಯೊಬ್ಬರು ಅಂಜನಾದ್ರಿ ಬೆಟ್ಟ ಹತ್ತುವಾಗ ಹೃದಯಾಘಾತಕ್ಕೊಳಗಾಗಿದ್ದರು. ಆನೆಗೊಂದಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅವರು ನಿಧನರಾಗಿದ್ದರು.
ಮಂಗಳವಾರ ಮತ್ತೆ ಇಂತಹ ಘಟನೆ ನಡೆದಿದ್ದು, ಆನೆಗೊಂದಿ ಭಾಗಕ್ಕೆ ಹೆಚ್ಚಿನ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಉನ್ನತೀಕರಿಸಿದ ಆಸ್ಪತ್ರೆ ಮತ್ತು ಹೃದಯಾಘಾತ ಸೇರಿದಂತೆ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ನೀಡುವಂತಹ ವ್ಯವಸ್ಥೆಯನ್ನು ಜಿಲ್ಲಾಡಳಿತ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.