ಗ್ರಾಪಂ ಅಧ್ಯಕ್ಷೆಯಿಂದ ರಸ್ತೆಯಲ್ಲೇ ಕಟ್ಟಡ ನಿರ್ಮಾಣ

ನರೇಗಾ ಯೋಜನೆ ಕಾಮಗಾರಿಯಲ್ಲಿ ಅವ್ಯವಹಾರ • ಬಿ.ಹೊಸೂರು ಗ್ರಾಮ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಆಕ್ರೋಶ

Team Udayavani, Aug 3, 2019, 2:06 PM IST

ಬಿ.ಹೊಸೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಅಧ್ಯಕ್ಷೆ ನಿಶ್ಚಿತಾ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು.

ಮಂಡ್ಯ: ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ರಸ್ತೆಯಲ್ಲೇ ಅಕ್ರಮ ಕಟ್ಟಡ ನಿರ್ಮಾಣ, ನರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಸಿಗದ ಕೆಲಸ, ಜೆಸಿಬಿ, ಇಟಾಚಿ ಯಂತ್ರಗಳಿಂದ ಕೆಲಸ ನಡೆಸಿ ಹಣ ಲೂಟಿ, ಅರ್ಹ ಕೂಲಿ ಕಾರ್ಮಿಕರಿಗೆ ಸಿಗದ ಜಾಬ್‌ಕಾರ್ಡ್‌, ರಸ್ತೆ ಒತ್ತುವರಿ ಮಾಡಿಕೊಂಡಿರುವ ಹೋಟೆಲ್ ವಿರುದ್ಧ ಕ್ರಮವಿಲ್ಲ, ಸಮಸ್ಯೆ ಬಗ್ಗೆ ಹೇಳಿದರೂ ಜನಪ್ರತಿನಿಧಿಗಳು ಕಿವಿಗೊಡುತ್ತಿಲ್ಲ.

ಇದು ಶುಕ್ರವಾರ ನಗರದ ಬಿ.ಹೊಸೂರು ಕಾಲೋನಿಯಲ್ಲಿ ಬಿ.ಹೊಸೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ 2019- 20ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಒಂದನೇ ಹಂತದ ಸಾಮಾಜಿಕ ಪರಿಶೋದನೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಒತ್ತುವರಿ: ಬಿಳಿದೇಗಲು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಶ್ಚಿತಾ, ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ಕಟ್ಟಡದಲ್ಲಿ ಶ್ರೀನಿವಾಸ್‌ ಹಾಗೂ ವೆಂಕಟೇಶ್‌ ಮದ್ಯದಂಗಡಿ ನಡೆಸುತ್ತಿದ್ದಾರೆ. ಮದ್ಯದಂಗಡಿ ನಡೆಸಲು ಯಾವುದೇ ಪರವಾನಗಿಯನ್ನು ಪಡೆದುಕೊಳ್ಳದೆ ಅಕ್ರಮವಾಗಿ ನಡೆಸುತ್ತಿದ್ದಾರೆ. ಇದರ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಶಂಕರ್‌ ದೂರಿದರು.

ಕಟ್ಟಡ ತೆರವುಗೊಳಿಸಿ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸದಸ್ಯರು ಅಧ್ಯಕ್ಷೆ ಪತಿ ಜಗದೀಶ್‌ ಪ್ರಭಾವಕ್ಕೆ ಒಳಗಾಗಿ ಅದರ ಬಗ್ಗೆ ಚಕಾರ ಎತ್ತದೆ ಮೌನವಾಗಿದ್ದಾರೆ. ರಸ್ತೆಗೆ ಅಡ್ಡಲಾಗಿರುವ ಕಟ್ಟಡವನ್ನು ಮೊದಲು ತೆರವುಗೊಳಿಸಿ ನಂತರ ಇತರೆ ಕಾಮಗಾರಿಗಳ ಬಗ್ಗೆ ಮಾತನಾಡುವಂತೆ ಸಭೆಯಲ್ಲಿ ಆಗ್ರಹಿಸಿದರು. ಈ ವೇಳೆ ಅಧ್ಯಕ್ಷೆ ಬೆಂಬಲಿಗರು ಅದೆಲ್ಲವೂ ಈ ಸಭೆಯಲ್ಲಿ ಅಪ್ರಸ್ತುತವಾಗಿದೆ. ಅವುಗಳನ್ನು ಚರ್ಚೆಗೆ ತರದಂತೆ ಹೇಳಿದಾಗ ವಾಗ್ವಾದ ನಡೆಯಿತು.

ಸಮರ್ಪಕ ಉತ್ತರ ನೀಡದ ಅಧಿಕಾರಿಗಳು: ಬಿ.ಹೊಸೂರು ಪಶು ಆಸ್ಪತ್ರೆ ಎದುರು ರಸ್ತೆಯನ್ನು ಅತಿಕ್ರಮಿಸಿಕೊಂಡು ಶಿವಮೂರ್ತಿ ಎನ್ನುವವರು ಹೋಟೆಲ್ ನಡೆಸುತ್ತಿದ್ದಾರೆ. ಈ ಹೋಟೆಲ್ನ್ನು ತೆರವುಗೊಳಿಸುವಂತೆ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ, ನಾವು ಅವರಿಗೆ ಪರವಾನಗಿ ಕೊಟ್ಟಿಲ್ಲ. ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡಲಿದೆ. ಅಲ್ಲಿಗೆ ದೂರು ನೀಡುವಂತೆ ಪಂಚಾಯಿತಿ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಮೂರ್‍ನಾಲ್ಕು ವರ್ಷದ ಹಿಂದೆ ಜನರಲ್ ಲೈಸೆನ್ಸ್‌ನ್ನು ಹೋಟೆಲ್ ನಡೆಸಲು ನೀಡಲಾಗಿದೆ. ಹೋಟೆಲ್ ಜಾಗ ಪಿಡಬ್ಲ್ಯುಡಿಗೆ ಸೇರುವುದಾದರೆ ಪಂಚಾಯಿತಿಯವರು ಪರವಾನಗಿ ನೀಡಿದ್ದಾದರೂ ಹೇಗೆ ಎಂದು ಶಂಕರ್‌ ಸೇರಿದಂತೆ ಇತರರು ಪ್ರಶ್ನಿಸಿದಾಗ ಪಂಚಾಯಿತಿ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದರೇ ಹೊರತು ಸಮರ್ಪಕ ಉತ್ತರ ನೀಡಲಾಗದೆ ಮುಂದೆ ಸಾಗಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಕುರಿತಂತೆ ಜಿಪಂ ಸದಸ್ಯೆ ಅನುಪಮಾ ಯೋಗೇಶ್‌, ತಾಪಂ ಸದಸ್ಯ ಬೋರೇಗೌಡ ಅವರ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಅವರು ಗ್ರಾಮಸಭೆಗಳಿಗೆ ಬರುವುದೂ ಇಲ್ಲ. ಸಮಸ್ಯೆಗಳಿಗೆ ಸ್ಪಂದಿಸುವುದೂ ಇಲ್ಲವೆಂದು ಜನಪ್ರತಿನಿಧಿಗಳ ವಿರುದ್ಧವೂ ಸಾರ್ವಜನಿಕರು ಕಿಡಿಕಾರಿದರು.

ಗ್ರಾಮಸಭೆಯಲ್ಲಿ ಆರೋಪಗಳ ಸುರಿಮಳೆಗರೆದರೂ ಅಧ್ಯಕ್ಷೆ, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಸಮರ್ಪಕ ಉತ್ತರ ನೀಡಲಾಗದೆ ತಡಬಡಿಸಿದರು. ಕೆಲವೊಂದಕ್ಕೆ ಹಾರಿಕೆ ಉತ್ತರ ನೀಡುತ್ತಾ, ವಿರೋಧವಾಗಿ ಮಾತನಾಡುವವರಿಗೆ ಅವಕಾಶವನ್ನೂ ನೀಡದೆ ಗೊಂದಲದಲ್ಲೇ ಸಭೆ ನಡೆಯುವುದಕ್ಕೆ ಕಾರಣರಾದರು ಎಂದು ತಿಳಿದುಬಂದಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರು, ಕಾರ್ಯದರ್ಶಿ ಕೆಂಪರಾಜು ಮತ್ತಿರರಿದ್ದರು.

ನರೇಗಾ ಕೂಲಿ ಹಣ ನೀಡದೆ ವಂಚನೆ: ಆರೋಪ

ಗೌಡಗೆರೆ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡದೆ ಜೆಸಿಬಿ, ಇಟಾಚಿ ಯಂತ್ರಗಳಿಂದ ಕೆಲಸ ನಿರ್ವಹಿಸಲಾಗುತ್ತಿದೆ. ಕೂಲಿ ಕಾರ್ಮಿಕರಿಗೆ ಕೆಲಸ ನೀಡದೆ ಹಣವನ್ನು ಲಪಟಾಯಿಸಲಾಗಿದೆ. ಯೋಜನೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಅಧ್ಯಕ್ಷರು-ಸದಸ್ಯರು ಲಕ್ಷಾಂತರ ರೂ. ಹಣ ಕಬಳಿಸಿದ್ದಾರೆ. ಅರ್ಹ ಕೂಲಿಕಾರ್ಮಿಕರಿಗೆ ಉದ್ಯೋಗವನ್ನೂ ನೀಡದೆ ನಿರುದ್ಯೋಗಿಗಳಾಗಿಯೇ ಉಳಿಸುವ ಜೊತೆಗೆ ಅವರಿಗೆ ಸೇರಬೇಕಾದ ಕೂಲಿ ಹಣವನ್ನು ಲೂಟಿ ಮಾಡಿದ್ದಾರೆ. ನರೇಗಾ ಯೋಜನೆ ಸಂಪೂರ್ಣವಾಗಿ ದುರುಪಯೋಗವಾಗುತ್ತಿದೆ ಎಂಬ ಆರೋಪಗಳು ಸಭೆಯಲ್ಲಿ ಕೇಳಿ ಬಂದವು.
ಜಾಬ್‌ಕಾರ್ಡ್‌ ನೀಡದೆ ಕಿರುಕುಳ:

ಬಿ.ಹೊಸೂರಿನಲ್ಲಿಯೂ ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ಪಡೆಯಲು ಅರ್ಹರು ಜಾಬ್‌ಕಾರ್ಡ್‌ ಮಾಡಿಸಲು ಹೋದ ಸಂದರ್ಭದಲ್ಲಿ ಅವರ ಹೆಸರನ್ನು ನೋಂದಾಯಿಸಿಕೊಳ್ಳುತ್ತಿಲ್ಲ. ಪಂಚಾಯಿತಿ ಕಚೇರಿಗೆ ಬರುವ ಅರ್ಹ ಕೂಲಿ ಕಾರ್ಮಿಕರಿಗೆ ಸರ್ವರ್‌ ಇಲ್ಲವೆಂಬ ನೆಪ ಹೇಳಿ ವಾಪಸ್‌ ಕಳುಹಿಸಲಾಗುತ್ತಿದೆ. ನಿಜವಾದ ಫ‌ಲಾನುಭವಿಗಳನ್ನು ಗುರುತಿಸಿ ಅವರಿಗೆ ಜಾಬ್‌ಕಾರ್ಡ್‌ ನೀಡದೆ ತಮಗೆ ಬೇಕಾದವರಿಗೆ ಜಾಬ್‌ಕಾರ್ಡ್‌ಗಳನ್ನು ನೀಡುತ್ತಿದ್ದಾರೆ. ಇದರಿಂದ ಕೂಲಿ ಹಣ ದುರುಪಯೋಗವಾಗುತ್ತಿದೆ ಎಂದು ಸಭೆಯಲ್ಲಿ ಚಂದ್ರು, ಕುಮಾರ, ಅರುಣ ಸೇರಿದಂತೆ ಇತರರು ಆರೋಪಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ