

Team Udayavani, May 13, 2019, 2:43 PM IST
ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಶಾಸಕ ನಾರಾಯಣಗೌಡ ಮಾತನಾಡಿದರು.
ಕೆ.ಆರ್.ಪೇಟೆ: ಪಟ್ಟಣದ ಎಲ್ಲಾ 23 ವಾರ್ಡ್‌ಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿದ್ದು ಕೆಲವೇ ತಿಂಗಳಲ್ಲಿ ಸರ್ಕಾರದಿಂದ ಪ್ರತಿ ವಾರ್ಡ್‌ಗೂ ತಲಾ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗು ತ್ತದೆ ಎಂದು ಶಾಸಕ ನಾರಾಯಣಗೌಡ ಹೇಳಿದರು.
ಪುರಸಭೆ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಪುರಸಭೆ ಚುನಾವಣೆಯ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದ ಬಡ ಕುಟುಂಬದ ನಿವಾಸಿಗಳಿಗೆ ನಿವೇಶನದ ಸಮಸ್ಯೆ ಇರುವುದನ್ನು ಮನಗಂಡಿರುವ ನಾನು, ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 1,500 ಮನೆ ಮಂಜೂರು ಮಾಡಿಸಿದ್ದೇನೆ. ನೆಲಮಹಡಿ ಸೇರಿದಂತೆ ಎರಡು ಅಂತಸ್ತಿನ ಮನೆಯನ್ನು ಒಂದೇ ನಿವೇಶನದಲ್ಲಿ ತಲಾ 5 ಲಕ್ಷ ರೂ.ಗಳ ವೆಚ್ಚದಲ್ಲಿ ಕಟ್ಟಿಸಿಕೊಡುವ ಯೋಜನೆ ಪುರಸಭೆಯ ಚುನಾವಣೆಯ ಬಳಿಕ ಜಾರಿಗೆ ತರಲಾಗುವುದು. ನನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಹೇಳಿದರು.
ಹೇಮಾವತಿ ಬಡಾವಣೆ ನಿವೇಶನಗಳಲ್ಲಿ ಮನೆಗಳ ನಿರ್ಮಾಣ ಮಾಡಲು ಪುರಸಭೆಯಿಂದ ಪರವಾನಗಿ ಕೊಡಿಸುವುದೂ ಸೇರಿದಂತೆ ಪಟ್ಟಣದ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟು ಜಿಲ್ಲೆಯಲ್ಲಿಯೇ ಕೆ.ಆರ್.ಪೇಟೆ ಪಟ್ಟಣ ವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿದ್ದೇನೆ. ಈ ವಿಷಯವನ್ನು ಜನರಿಗೆ ತಲುಪಿಸಿ ಜನರು ನಮಗೆ ಆಶಿರ್ವಾದ ಮಾಡಿ ಪುರಸಭಾ ಆಡಳಿತ ಜೆಡಿಎಸ್‌ಗೆ ಕೊಡಿಸುವುದು ಕಾರ್ಯಕರ್ತರ ಜವಾಬ್ದಾರಿ ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ.ಮಂಜು ಮಾತನಾಡಿ, ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಬೇಕು. ಪುರಸಭೆ ಆಡಳಿತವನ್ನು ಜೆಡಿಎಸ್ ವಶಕ್ಕೆ ಪಡೆದರೆ ಮಾತ್ರ ಪಟ್ಟಣದ ಸಮಗ್ರ ಅಭಿವೃದ್ಧಿ ಸಾಧ್ಯ. ಆದ್ದರಿಂದ ಪ್ರತಿ ಕಾರ್ಯಕರ್ತರು ಕೂಡ ಕುಮಾರಸ್ವಾಮಿಯವರ ಜನಪ್ರಿಯ ಯೋಜನೆಗಳ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಜು, ಮುಖಂಡರಾದ ಕೆ.ಶ್ರೀನಿವಾಸ್, ನಾಗರಾಜೇಗೌಡ, ರಾಮೇಗೌಡ, ಚಿಕ್ಕೇಗೌಡ, ಎಚ್.ಆರ್.ಲೋಕೇಶ್, ಅಂಚನಹಳ್ಳಿ ಸುಬ್ಬಣ್ಣ, ಕೆ.ಎಸ್.ರಾಮೇಗೌಡ, ಪೆಟ್ರೋಲ್ ಕುಮಾರ್, ಕೆ.ಆರ್.ನೀಲಕಂಠ, ಕೆ.ವಿನೋದ್‌ಕುಮಾರ್ ಮತ್ತಿತರರು ಭಾಗವಹಿಸಿದ್ದರು.
Ad
You seem to have an Ad Blocker on.
To continue reading, please turn it off or whitelist Udayavani.