ಮೈತ್ರಿ ಸರ್ಕಾರ ಬೀಳಲು ಅಪ್ಪ ಮಕ್ಕಳು, ಸಿದ್ದು ಕಾರಣ

Team Udayavani, Nov 19, 2019, 3:00 AM IST

ಹುಣಸೂರು: ಮಾಜಿ ಸಚಿವ ಎಚ್‌.ವಿಶ್ವನಾಥ್‌ ಒಳ್ಳೆಯ ಸಂಸದೀಯ ಪಟು. ಸರ್ಕಾರದಿಂದ ಹೊರ ಬಂದಿರುವ ಇವರೆಲ್ಲ ಅನರ್ಹರಲ್ಲ, ಅತೃಪ್ತರಷ್ಟೆ. ಈ 15 ಮಂದಿ ಬಿಜೆಪಿ ಹುರಿಯಾಳುಗಳು ಅಸಮಾನ್ಯರು. ಇದೊಂದು ಐತಿಹಾಸಿಕ ಚುನಾವಣೆ ಎಂದು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಬಣ್ಣಿಸಿದರು. ನಗರದ ಮುನೇಶ್ವರಕಾವಲ್‌ ಮೈದಾನದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಸೋಲಿನ ಪಾಠ: ಮೈತ್ರಿ ಸರ್ಕಾರ ಬೀಳಲು ಜೆಡಿಎಸ್‌ನ ಅಪ್ಪ, ಮಕ್ಕಳು ಹಾಗೂ ಸಿದ್ದರಾಮಯ್ಯ ಕಾರಣರಾಗಿದ್ದಾರೆ. ಮುಖ್ಯಮಂತ್ರಿಯಾಗಲು ಕಾರಣರಾದವರನ್ನೇ ಕಾಲಿನಿಂದ ಒದ್ದು ಹೊರಹಾಕಿದರು. ರಾಹುಲ್‌ ಗಾಂಧಿಯನ್ನು ಪ್ರಧಾನಿ ಮಾಡ್ತೀನಿ ಎಂದು ಬೀಗುತ್ತಿದ್ದ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಪಾಠ ಕಲಿಸಲಾಗಿದೆ. ರಾಹುಲ್‌ಗಾಂಧಿ ಗೂ ಜನ ಬುದ್ಧಿ ಕಲಿಸಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಬಾವಿಯೊಳಗಿನ ಕಪ್ಪೆ: ಸಂವಿಧಾನದ ಬಗ್ಗೆ ಸಂಪೂರ್ಣ ಅರಿವಿಲ್ಲದ ಸಿದ್ದರಾಮಯ್ಯ, ಎಚ್‌.ಸಿ. ಮಹದೇವಪ್ಪ, ಡಾ.ಜಿ. ಪರಮೇಶ್ವರ್‌ ಬಾವಿಯೊಳಗಿನ ಕಪ್ಪೆಯಂತೆ ವಟಗುಟ್ಟುತ್ತಾರೆ. ವಿವೇಕತನವಿಲ್ಲದೆ ಹುಂಬರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಂದೆ ಶಾಸ್ತಿ: ದೇವೇಗೌಡರು ತಾವೊಬ್ಬ ಮಾಜಿ ಪ್ರಧಾನಿ ಎಂಬುದನ್ನು ಮರೆತು ತಮ್ಮ ಮೊಮ್ಮಕ್ಕಳನ್ನೇ ಚುನಾವಣೆಗೆ ನಿಲ್ಲಿಸಿ, ತಾವೂ, ಮೊಮ್ಮಗ ಸೋತರೆ, ಮತ್ತೋರ್ವ ಮೊಮ್ಮಗ (ಸಂಸದ ಪ್ರಜcಲ್‌) ವಿರುದ್ಧª ನ್ಯಾಯಾಲಯದಲ್ಲಿ ದಾವೆಯ ವಿಚಾರಣೆ ನಡೆಯುತ್ತಿದೆ. ಮುಂದೆ ತಕ್ಕ ಶಾಸ್ತಿಯಾಗಲಿದೆ, ಇದೊಂದು ಐತಿಹಾಸಿಕ ಚುನಾವಣೆಯಾಗಿದ್ದು, ಬಿಜೆಪಿ ಅಭ್ಯರ್ಥಿಯಾಗಿರುವ ಎಚ್‌.ವಿಶ್ವನಾಥ್‌ ಪರ ಪ್ರಚಾರ ನಡೆಸುತ್ತೇನೆ. ಇವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ಅಗ್ನಿ ಪರೀಕ್ಷೆ: ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ವಿಶ್ವನಾಥ್‌ ಆಶಯದಿಂದಾಗಿಯೇ ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಬಂದು ಮುಖ್ಯಮಂತ್ರಿಯಾದರು. ಅಂತವರನ್ನೇ ಹೊರ ಹೋಗುವಂತೆ ಮಾಡಿದರು. ಇವರನ್ನು ಸೋಲಿಸಲು ಕಾಂಗ್ರೆಸ್‌, ಜೆಡಿಎಸ್‌ ಒಂದಾಗುತ್ತಿದ್ದಾರೆ. ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿದ್ದು, ಕ್ಷೇತ್ರದ ಜನತೆ ವಿಶ್ವನಾಥ್‌ ಅವರನ್ನು ಗೆಲ್ಲಿಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ವಿಶ್ವನಾಥ್‌ ತ್ಯಾಗದಿಂದಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಹಿಂದೆ ಸಚಿವರಾಗಿದ್ದ ವೇಳೆ ಶಿಕ್ಷಣ, ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ ನಡೆಸಿದ್ದ ವಿಶ್ವನಾಥ್‌ ಬಡವರು, ಶೋಷಿತರು, ಅಸಹಾಯಕರ ಧ್ವನಿಯಾಗಿದ್ದು, ದೇವರಾಜ ಅರಸು ಹಾದಿಯಲ್ಲಿ ಸಾಗುತ್ತಿದ್ದಾರೆ. ಅಡಗೂರು ಎಚ್‌. ವಿಶ್ವನಾಥರ ಗೆಲುವು ದೇವರಾಜ ಅರಸರ, ಮೋದಿಯವರ ಜೊತೆಗೆ ಹುಣಸೂರು ಜನತೆಯ ಗೆಲುವುವೆಂಬು ಭಾವಿಸಿ, ಹುಣಸೂರು ಕ್ಷೇತ್ರವನ್ನು ಎಲ್ಲರೂ ಗಮನಿಸುತ್ತಿದ್ದಾರೆ.

ಕ್ಷೇತ್ರದ ಮತದಾರ ಗೆಲ್ಲಿಸಿದ್ದೇ ಆದಲ್ಲಿ ಉನ್ನತ ಮಟ್ಟದ ಮಂತ್ರಿಯಾಗಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಾಂದಿಯಾಗಲಿದೆ. ವಿಶ್ವನಾಥ್‌ ಆಶಯದಿಂದಾಗಿಯೇ ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಬಂದು ಮುಖ್ಯಮಂತ್ರಿಯಾದ ನಂತರದಲ್ಲಿ ಮೂಲೆಗುಂಪಾಗುವಂತೆ ನೋಡಿಕೊಂಡರು. ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.

ಮತ ಭಿಕ್ಷೆಗೆ ಬರುವೆ: ಅಭ್ಯರ್ಥಿ ಎಚ್‌.ವಿಶ್ವನಾಥ್‌ ಮಾತನಾಡಿ, ಈ ಪರ್ವ ಕಾಲದಲ್ಲಿ ಚುನಾವಣೆಗೆ ನಿಂತಿದ್ದೇನೆ. ದೇವರಾಜ ಅರಸು ಅವರಿಂದ ದೀಕ್ಷೆ ಪಡೆದವನು ನಾನು. ಎಲ್ಲೆಡೆ ನನ್ನನ್ನು ಅಸಮರ್ಥನೆಂದು ಬಿಂಬಿಸುತ್ತಿದ್ದಾರೆ. ನಾನು ಜಂಗಮನಿದ್ದಂತೆ, ಈ ವಿಶ್ವನಾಥ್‌ ಭ್ರಷ್ಟನಲ್ಲ, ಅಸಮರ್ಥನೂ ಅಲ್ಲ, ನಾನು ಅನರ್ಹನೂ ಅಲ್ಲ, ಜವಾಬ್ದಾರಿಯುತ, ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸುವವನು. ನನ್ನ ಬಗ್ಗೆ ಹೇಳುವುದಕ್ಕೆ ಏನೂ ಇಲ್ಲ,

ಭಾರತದ ರಾಜಕಾರಣ ಜಡತ್ವವಲ್ಲ, ಜಂಗಮರಂತೆ, ಹರಿಯುವ ನೀರಿದ್ದಂತೆ. ಕಾಲಚಕ್ರ ಉರುಳುತ್ತಿದೆ. ತಾವು 40 ವರ್ಷಗಳಿಂದ ಸಿಕ್ಕ ಅಧಿಕಾರಾವಧಿಯಲ್ಲಿ ಸಮರ್ಥವಾಗಿ ಕೆಲಸ ಮಾಡಿದ್ದೇನೆ. ನಿಮ್ಮ ಮನೆ ಮುಂದೆ ಮತ ಭಿಕ್ಷೆಗಾಗಿ ಬರುವೆ, ನನ್ನನ್ನು ಆಶೀರ್ವದಿಸಿ ಎಂದು ಕೋರಿದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಸಂಸದ ಪ್ರತಾಪ ಸಿಂಹ, ಮಾಜಿ ಶಾಸಕರಾದ ಸಿ.ಪಿ.ಯೋಗೇಶ್ವರ್‌, ಮಾರುತಿರಾವ್‌ ಪವಾರ್‌, ರಮೇಶ್‌, ಮುಖಂಡರಾದ ಅಪ್ಪಣ್ಣ ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ಉಸ್ತುವಾರಿ, ಶಾಸಕ ಅಪ್ಪಚ್ಚು ರಂಜನ್‌, ಮಾಜಿ ಶಾಸಕರಾದ ತೋಂಟದಾರ್ಯ, ಬಸವರಾಜು, ನಂಜುಂಡಸ್ವಾಮಿ, ತಾಲೂಕು ಅಧ್ಯಕ್ಷ ಯೋಗಾನಂದಕುಮಾರ್‌, ಮುಖಂಡರಾದ ಕೌದಳ್ಳಿ ಸೋಮಶೇಖರ್‌, ನಾಗರಾಜ ಮಲ್ಲಾಡಿ, ಬಸವೇಗೌಡ, ರಾಜೇಂದ್ರ, ಚಂದ್ರಶೇಖರ್‌, ಹೇಮಂತಕುಮಾರ್‌, ಮಹದೇವಯ್ಯ, ಮಂಜುನಾಥ್‌, ಚಂದಶೇಖರ್‌ ಮತ್ತಿತರರು ಉಪಸ್ಥಿತರಿದ್ದರು.

ಹುಣಸೂರು ಜಿಲ್ಲೆ ಮಾಡೇ ತೀರುವೆ: ನಾನು ಚುನಾವಣೆ ಸ್ಟಂಟ್‌ಗಾಗಿ ಹುಣಸೂರು ಜಿಲ್ಲೆ ಮಾಡುತ್ತೇನೆಂದು ಹೇಳುತ್ತಿಲ್ಲ, ಗೆದ್ದಾಗಲಿಂದಲೇ ಹೇಳುತ್ತಾ ಬಂದಿದ್ದೇನೆ. ಹುಣಸೂರು ತಾಲೂಕು ಜಿಲ್ಲೆಯಾಗುವ ಎಲ್ಲಾ ಅರ್ಹತೆ ಇದೆ. 2,500 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಜಿಲ್ಲೆಯನ್ನಾಗಿ ಮಾಡಿಯೇ ತೀರುವೆ ಎಂದು ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ವಾಗ್ಧಾನ ಮಾಡಿದರು. ಕಳೆದ 10 ವರ್ಷಗಳಲ್ಲಿ ಅಮಾಯಕರ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಇದೀಗ ಶಾಂತಿ ನೆಲೆಸಿದೆ. ಎಲ್ಲರೂ ಒಟ್ಟಿಗೆ ಸೇರಿ ಜಯಂತಿಗಳನ್ನು ಆಚರಿಸುವ, ಅಲ್ಪಸಂಖ್ಯಾತರಿಗೂ ಭದ್ರತೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಸಿದ್ದುಗೆ ತಾಕತ್ತಿದ್ದರೆ ರಾಜೀನಾಮೆ ನೀಡಲಿ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಣ್ಣು ಮುಕ್ಕಿ, ಬಾದಾಮಿಯಲ್ಲಿ ಕೇವಲ 1,600 ಮತಗಳಿಂದ ಗೆದ್ದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ರಾಜೀನಾಮೆ ನೀಡಿ ಬಾದಾಮಿಯಲ್ಲಿ ಮತ್ತೆ ಸ್ಪರ್ಧಿಸಲಿ. ನಾನು ಕೂಡ ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಆರೋಗ್ಯ ಸಚಿವ, ಬಿಜೆಪಿ ಹಿರಿಯ ಮುಖಂಡ ಶ್ರೀರಾಮುಲು ಸವಾಲು ಹಾಕಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್‌ ದೂಳಿಪಟವಾಗಲಿದೆ. ವಿರೋಧ ಪಕ್ಷಗಳು ನಮ್ಮ ನಡುವೆ ಒಡಕು ಮೂಡಿಸುವ ಹುನ್ನಾರ ನಡೆಸಿದ್ದು, ಯಾರೂ ಕಿವಿಗೊಡಬೇಡಿ, ಚುನಾವಣೆ ನಂತರ ತಳವಾರ-ಪರಿವಾರ ಜನಾಂಗಗಳನ್ನು ಎಸ್‌ಟಿಗೆ ಸೇರಿಸುವುದಾಗಿ ಭರವಸೆ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ