
ತಂಬಾಕುನಾಡಲ್ಲಿ ಹಾಲಿ, ಮಾಜಿ ಶಾಸಕರ ಫೈಟ್
Team Udayavani, Mar 20, 2023, 3:06 PM IST

ಮೈಸೂರು: ತಂಬಾಕು ನಾಡು ಎಂದೇ ಕರೆಯಲ್ಪಡುವ ಪಿರಿಯಾಪಟ್ಟಣದಲ್ಲಿ ಹಾಲಿ-ಮಾಜಿ ಶಾಸಕರು ಮತ್ತೂಂದು ಸುತ್ತಿನ ಅಗ್ನಿಪರೀಕ್ಷೆಗೆ ಸಜ್ಜಾಗಿದ್ದು, ಕೈ-ತೆನೆ ಅಭ್ಯರ್ಥಿಗಳ ತೀವ್ರ ಪೈಪೋಟಿಯಿಂದಾಗಿ ಕ್ಷೇತ್ರದಲ್ಲಿ ಈಗಾಗಲೇ ಚುನಾವಣಾ ಕಾವು ಪಡೆದುಕೊಂಡಿದೆ.
ಚುನಾವಣೆ ದಿನ ಘೋಷಣೆಗೂ ಮುನ್ನವೇ ಪಿರಿ ಯಾಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು, ಕೈ-ತೆನೆ ಅಭ್ಯರ್ಥಿಗಳು ಈಗಾಗಲೇ ಅಖಾಡಕ್ಕೆ ಅಗತ್ಯ ಸಿದ್ಧತೆ ನಡೆಸಿದ್ದರೆ, ಬಿಜೆಪಿಯಿಂದ ಇನ್ನೂ ಅಭ್ಯರ್ಥಿ ಯಾರೆಂಬುದು ಸ್ಪಷ್ಟವಾಗಿಲ್ಲ. ಜೆಡಿಎಸ್‌ನಿಂದ ಹಾಲಿ ಶಾಸಕ ಕೆ.ಮಹದೇವ್ ಅವರಿಗೆ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ವೆಂಕಟೇಶ್ 2023ರ ಚುನಾವಣೆಯಲ್ಲಿ ಎದುರಾಳಿಯಾಗಿದ್ದು, ಗುರು- ಶಿಷ್ಯರ ನಡುವೆ ಮತ್ತೂಂದು ಸುತ್ತಿನ ಕದನಕ್ಕೆ ವೇದಿಕೆ ಸಜ್ಜಾಗಿದೆ. ಈ ಮೂಲಕ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ಇದರೊಂದಿಗೆ, ಆರೋಪ-ಪ್ರತ್ಯಾರೋಪವೂ ಗರಿಗೆದರಿದ್ದು, ಚುನಾವಣೆ ರಣರೋಚಕ ಘಟ್ಟಕ್ಕೆ ಬಂದುನಿಂತಿದೆ.
ಜೆಡಿಎಸ್‌ನಿಂದ ಹಾಲಿ ಶಾಸಕರೇ ಸ್ಪರ್ಧೆ: ಕೆ. ಮಹದೇವ್ ಹೊರತುಪಡಿಸಿ ಜೆಡಿಎಸ್‌ನಲ್ಲಿ ಆಕಾಂಕ್ಷಿಗಳು ಕಾಣುತ್ತಿಲ್ಲ. ಹೀಗಾಗಿ, 2023ರ ಚುನಾವಣೆಯಲ್ಲೂ ಅವರೇ ಸ್ಪರ್ಧಿಸಲಿದ್ದಾರೆ. ಹಾಗಾಗಿ, ಸರ್ಕಾರಿ ಕಾರ್ಯಕ್ರಮಗಳಲ್ಲೇ ಪ್ರಚಾರ ಶುರು ಇಟ್ಟು ಕೊಂಡಿದ್ದು, ಮತ ಕೊಡಿ, ಗೆಲ್ಲಿಸಿ ಎಂಬ ಕೋರಿಕೆ ಯನ್ನು ಜನರ ಬಳಿ ಮಂಡಿಸುತ್ತಾ ಕ್ಷೇತ್ರ ಪರ್ಯಟನೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ವೆಂಕಟೇಶ್ ಸ್ಪರ್ಧೆ: ಕಾಂಗ್ರೆಸ್‌ನಿಂದ ಕೆ. ವೆಂಕಟೇಶ್ ಅವರಿಗೆ ಟಿಕೆಟ್ ಸಿಗುವುದು ಬಹುಪಾಲು ಖಚಿತವಾಗಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿರುವ ಇವರಿಗೆ ಪಕ್ಷದಲ್ಲಿ ಪ್ರತಿಸ್ಪರ್ಧಿಗಳು ಇಲ್ಲ. ಆದರೂ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹಾಗೂ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ಗೌಡ, ಕುರುಬ ಸಮುದಾಯದ ಮುಖಂಡ ಎಚ್.ಡಿ.ಗಣೇಶ್‌ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಕೆ.ವೆಂಕಟೇಶ್ ಮತ್ತು ಪ್ರಶಾಂತ್‌ಗೌಡ ಟಿಕೆಟ್‌ಗಾಗಿ ಕೆಪಿಸಿಸಿ ಗೆಲ್ಲಿಸಿದ್ದಾರೆ. ಈ ಪೈಕಿ ಕೆ.ವೆಂಕಟೇಶ್ ಅವರೇ ಸ್ಪರ್ಧಿಸಲಿದ್ದಾರೆ ಎಂಬುದನ್ನು ಪ್ರಜಾಧ್ವನಿ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು. ಇದರಿಂದ ಮತ್ತಷ್ಟು ಸ್ಫೂರ್ತಿಗೊಂಡ ಮಾಜಿ ಶಾಸಕ ವೆಂಕಟೇಶ್ ಅವರು ಕ್ಷೇತ್ರಾ ದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗುವ ಮೂಲಕ ಮತ ಬೇಟೆಯಲ್ಲಿದ್ದಾರೆ.
ಹಾಲಿ-ಮಾಜಿ ಶಾಸಕ ಮಕ್ಕಳ ಓಡಾಟ: ಕ್ಷೇತ್ರದಲ್ಲಿ ಹಾಲಿ-ಮಾಜಿ ಶಾಸಕರ ಪುತ್ರರ ಓಡಾಟ ಎದ್ದು ಕಾಣುತ್ತಿದೆ. ಶಾಸಕ ಕೆ.ಮಹದೇವ್ ಪುತ್ರ, ಮೈಮುಲ್ ಅಧ್ಯಕ್ಷ ಪ್ರಸನ್ನ ಮತ್ತು ಮಾಜಿ ಶಾಸಕ ಕೆ.ವೆಂಕಟೇಶ್ ಪುತ್ರ ನಿತಿನ್ ತಮ್ಮ ತಂದೆಯವರ ಪರ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ವತಿಯಿಂದ ಪ್ರಾಯೋಜಿತ ಚಟುವಟಿಕೆ ನಡೆಯುತ್ತಿವೆ. ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಪಂದ್ಯಾವಳಿ ಸೇರಿ ವಿವಿಧ ಕ್ರೀಡಾಕೂಟಗಳ ಆಯೋಜನೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ, ವಿವಿಧ ಕೊಡುಗೆಗಳ ಭರಾಟೆಯೂ ಸದ್ದು ಮಾಡುತ್ತಿರುವುದು ವಿಶೇಷ.
ಪಿರಿಯಾಪಟ್ಟಣ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಸಾಧ್ಯತೆ:
ಮೈಸೂರು: ಬಿಜೆಪಿಯಿಂದ ಸಿ.ಎಚ್. ವಿಜಯಶಂಕರ್ ಅವರಿಗೆ ಟಿಕೆಟ್ ನೀಡಿದರೆ ತಾಲೂಕಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಚುನಾವಣೆ ದಿನ ಘೋಷಣೆಯಾಗುವ ಮುನ್ನವೇ ತಾಲೂಕಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ರಾಜಕೀಯ ಚಟುವಟಿಕೆಗಳು ಗರಿಗೆದ್ದರಿವೆ.
ಇಷ್ಟಾದರೂ ಬಿಜೆಪಿ ಅಭ್ಯರ್ಥಿ ಯಾರೆಂದು ಸ್ಪಷ್ಟಪಡಿಸದೇ ಇರುವುದು ಆಕಾಂಕ್ಷಿಗಳಲ್ಲಿ ನಿರುತ್ಸಾಹ ಮೂಡಿಸಿದೆ. ಆದರೂ, ಮಾಜಿ ಸಂಸದ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಟಿಕೆಟ್ ದೊರೆಯಬಹುದೆಂಬ ಭರವಸೆ ಇಟ್ಟುಕೊಂಡು ಕೆಲ ತಿಂಗಳಿಂದ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಇತ್ತ ಬಿಜೆಪಿ ಮುಖಂಡರಾದ ಕೊಣಸೂರು ವಸಂತ್ ಕುಮಾರ್ ಮತ್ತು ಕೆ.ಎನ್. ಸೋಮಶೇಖರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕೆ.ಮಹದೇವ್, ಕಾಂಗ್ರೆಸ್‌ನಿಂದ ಕೆ.ವೆಂಕಟೇಶ್ ಸ್ಪರ್ಧಿಸುವುದು ಖಚಿತವಾಗಿದೆ. ಒಂದು ವೇಳೆ ಬಿಜೆಪಿಯಿಂದ ಸಿ.ಎಚ್. ವಿಜಯಶಂಕರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿದರೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ.
ಕೈ-ತೆನೆ ಪಕ್ಷಗಳ ನಡುವೆ ನೇರ ಹಣಹಣಿ: 1972ರಿಂದ ನಡೆದ 10 ಚುನಾವಣೆಗಳಲ್ಲಿ ಕೆ.ವೆಂಕಟೇಶ್ ನಾಲ್ಕು ಬಾರಿ ಗೆದ್ದಿದ್ದಾರೆ. ಕೆ.ಮಹದೇವ್ ಒಂದು ಸಲ ಜಯಿಸಿ ಇದೀಗ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಕಳೆದ ಬಾರಿ ಸೋಲು ಕಂಡಿರುವ ಕೆ.ವೆಂಕಟೇಶ್ ಕ್ಷೇತ್ರವನ್ನು ತನ್ನತ್ತ ದಕ್ಕಿಸಿಕೊಳ್ಳಲು ಭಾರಿ ಪೈಪೋಟಿಗೆ ಇಳಿದಿದ್ದಾರೆ. ಈ ಇಬ್ಬರ ಕಾಳಗದ ನಡುವೆ ಬಿಜೆಪಿ ಯಾವ ರೀತಿ ಸೆಣಸಲಿದೆ ಎಂಬುದು ಕುತೂಹಲ ಮೂಡಿಸಿದೆ.
– ಸತೀಶ್ ದೇಪುರ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಚಿಕ್ಕಮಗಳೂರು: ನ್ಯಾಯಕ್ಕಾಗಿ 4 ವರ್ಷದ ಮಗು ಜತೆ ರಾತ್ರಿ 1ಗಂಟೆವರೆಗೂ ಠಾಣೆಯಲ್ಲಿ ಕೂತ ಮಹಿಳೆ!

Kadaba: ಕಾಡಾನೆ ದಾಳಿ; ಕೆಎಸ್ಸಾರ್ಟಿಸಿ ಬಸ್ ಗೆ ಹಾನಿ

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

Mangaluru Airport bomb case; ಆದಿತ್ಯ ರಾವ್ ವಿರುದ್ಧ ಜೈಲು ಅಧಿಕಾರಿಗಳ ದೂರು