ಹುಣಸೂರು: ಉಮ್ಮತ್ತೂರು ಗ್ರಾ.ಪಂ.ನ ವರಿಷ್ಟ ಸ್ಥಾನ ಜೆಡಿಎಸ್ ತೆಕ್ಕೆಗೆ
ಸಾಮಾನ್ಯ ಸ್ಥಾನಗಳಿಗೆ ಪರಿಶಿಷ್ಟ ವರ್ಗಕ್ಕೆ ಅವಕಾಶ
Team Udayavani, Dec 10, 2022, 10:54 AM IST
ಹುಣಸೂರು: ತಾಲೂಕಿನ ಉಮ್ಮತ್ತೂರು ಗ್ರಾಮ ಪಂಚಾಯತ್‌ನಲ್ಲಿ ತೆರವಾಗಿದ್ದ ವರಿಷ್ಟ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ರಾಮಕೃಷ್ಣ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ರಾಣಿ ಎಂಬವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಆಂತರಿಕ ಒಪ್ಪಂದದಂತೆ ಹಿಂದಿನ ಅಧ್ಯಕ್ಷ ರವಿ, ಉಪಾಧ್ಯಕ್ಷೆ ಅನುಸೂಯ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬುಂಡೆಬೆಸ್ತರ ಕಾಲೋನಿಯ ರಾಮಕೃಷ್ಣ, ಉಪಾಧ್ಯಕ್ಷ ಸ್ಥಾನಕ್ಕೆ ನಲ್ಲೂರುಪಾಲ ಕ್ಷೇತ್ರದ ರಾಣಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋದವಾಗಿ ಆಯ್ಕೆಯಾಗಿದ್ದಾರೆಂದು ಚನಾವಣಾಧಿಕಾರಿಯಾಗಿದ್ದ ಜಿ.ಪಂ.ಇಂಜಿನಿಯರಿಂಗ್ ವಿಭಾಗದ ಎಇಇ, ವೈ.ಜಿ.ನರಸಿಂಹಯ್ಯ ಘೋಷಿಸಿದರು. 16 ಸದಸ್ಯರ ಪೈಕಿ ಇಬ್ಬರು ಸದಸ್ಯರು ಚುನಾವಣೆಗೆ ಗೈರಾಗಿದ್ದರು.
ವಿಜಯೋತ್ಸವ: ಗೆಲುವು ಸಾಧಿಸುತ್ತಿದ್ದಂತೆ ಪಂಚಾಯತ್ ಬಳಿ ಅಪಾರ ಬೆಂಬಲಿಗರೊಂದಿಗೆ ಎತ್ತಿನಗಾಡಿಯಲ್ಲಿ ಆಗಮಿಸಿದ ಎಂಡಿಸಿಸಿ ಅಧ್ಯಕ್ಷ ಜಿ.ಡಿ.ಹರೀಶ್ ಗೌಡರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ, ಗ್ರಾಮಗಳ ಅಭಿವೃದ್ದಿಗೆ ಪಕ್ಷ ಬೇಧ ಮರೆತು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಕೆಲಸ ನಿರ್ವಹಿಸಿರೆಂದು ಸಲಹೆ ನೀಡಿದರು. ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಪರಿಶಿಷ್ಟರಿಗೆ ಒಲಿದ ಸಾಮಾನ್ಯ ಸ್ಥಾನ: ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರಿಬ್ಬರು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದು, ಇಬ್ಬರೂ ಸಾಮಾನ್ಯ ಸ್ಥಾನಕ್ಕೆ ಆಯ್ಕೆಯಾಗಿರುವುದು ವಿಶೇಷ. ಬುಂಡೆಬೆಸ್ತರ ಕಾಲೋನಿಗೆ ಎರಡನೇ ಬಾರಿ ಅಧ್ಯಕ್ಷ ಸ್ಥಾನ ಲಬಿಸಿದ್ದು, ಇದಕ್ಕೂ ಮೊದಲು ಕಾಲೋನಿಯ ಸಣ್ಣಸ್ವಾಮಿ ಅಧ್ಯಕ್ಷರಾಗಿದ್ದರು. ಇದೀಗ ಅದೇ ಕಾಲೋನಿಯ ನಿವೃತ್ತ ಸೈನಿಕ ರಾಮಕೃಷ್ಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದು ಪ್ರಜಾಪ್ರಭುತ್ವದ ಹಬ್ಬವೆನಿಸಿದೆ.