ಹೀಗೊಂದು ಫಾರಿನ್ ಪ್ರೇಮ್ ಕಹಾನಿ: ಸತಿ-ಪತಿಗಳಾದ ನೆದರ್ ಲ್ಯಾಂಡ್ ಯುವಕ ಮೈಸೂರು ಯುವತಿ
Team Udayavani, Nov 3, 2019, 9:23 PM IST
ಮೈಸೂರು: ಇದು ನೆದರ್ ಲ್ಯಾಂಡ್ ಮತ್ತು ಮೈಸೂರು ನಡುವೆ ವಿವಾಹ ಬಾಂಧವ್ಯ ಬೆಸೆದ ಕಥೆ. ಎರಡು ದೇಶಗಳ ನಡುವೆ ನೆಂಟಸ್ತನ ಬೆಳೆಯಲು ಕಾರಣವಾಗಿರುವ ದಂಪತಿಯ ಪ್ರೇಮಗಾಥೆ ಅರಳಿದ್ದು ದೂರದ ನೆದರ್ ಲ್ಯಾಂಡಲ್ಲಿ. ಹಾಲೆಂಡ್ ನ ಯುವಕ ಮತ್ತು ಮೈಸೂರಿನ ಯುವತಿಯ ನಡುವೆ ಅರಳಿದ ಪ್ರೇಮ ಇಂದು ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹೊಸ ಸಂಬಂಧವೊಂದರ ಪ್ರಾರಂಭವಾಗಿದೆ.
ನೆದರ್ ಲ್ಯಾಂಡ್ ನ ರೆನವ್ಯಾನ್ ಬೋಗರ್ಟ್ ಮತ್ತು ಮೈಸೂರಿನ ಅನು ಎಸ್. ಶೆಟ್ಟರ್ ಅವರೇ ಎರಡು ದೇಶಗಳ ನಡುವಿನ ವಿವಾಹ ಸಂಬಂಧಕ್ಕೆ ಸಾಕ್ಷಿಯಾದ ನವಜೋಡಿಗಳಾಗಿದ್ದಾರೆ. ಭಾರತೀಯ ಸಂಪ್ರದಾಯದ ಪ್ರಕಾರ ಈ ನೂತನ ಜೋಡಿಯ ವಿವಾಹ ಆರತಕ್ಷತೆ ಕಾರ್ಯಕ್ರಮವು ನಗರದ ನಿತ್ಯೋತ್ಸವ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಿತು.
ಈ ವಿಶೇಷ ವಿವಾಹ ಸಮಾರಂಭಕ್ಕೆ ವರನ ಕಡೆಯಿಂದ ಸುಮಾರು 40 ಜನ ನೆಂಟರು ಆಗಮಿಸಿದ್ದರು ಈ ಮೂಲಕ ಸಾಂಸ್ಕೃತಿಕ ನಗರಿಯಲ್ಲಿ ಎರಡೂ ದೇಶಗಳ ವಿಭಿನ್ನ ಸಂಸ್ಕೃತಿ ಸಮಾಗಮಗೊಂಡಿತು.
ವಧು ಅನು ಶೆಟ್ಟರ್ ಅವರು ಮೈಸೂರಿನ ಎಂ. ಎಸ್ ಸುಮನಾ ಹಾಗೂ ರಾಮರವೀಂದ್ರ ಅವರ ಪುತ್ರಿಯಾಗಿದ್ದಾರೆ. ವಿವಾಹ ಸಮಾರಂಭದಲ್ಲಿ ಭಾರತೀಯ ಸಂಪ್ರದಾಯದ ಆಚರಣೆಗಳನ್ನು ಕಂಡ ವಿದೇಶಿ ನೆಂಟರು ಖುಷಿಪಟ್ಟರು.