ಶೀಘ್ರ ಮೈಸೂರು ವಿವಿ ಖಾಲಿ ಹುದ್ದೆಗಳ ನೇಮಕ: ವಿಸಿ

Team Udayavani, Jun 8, 2019, 3:00 AM IST

ಮೈಸೂರು: ವಿಶ್ವ ವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು 6 ತಿಂಗಳ ಒಳಗಾಗಿ ನೇಮಕ ಮಾಡಿಕೊಳ್ಳಲು ಯುಜಿಸಿ ಸ್ಪಷ್ಟ ಸೂಚನೆ ನೀಡಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್‌ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯ ಕ್ರಾಫ‌ರ್ಡ್‌ ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ನಡೆದ ಶಿಕ್ಷಣ ಮಂಡಳಿಯ 3ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಹಲವು ವರ್ಷಗಳಿಂದ ಖಾಲಿ ಇರುವ 350 ಉಪನ್ಯಾಸಕರ ಹುದ್ದೆಗಳನ್ನು 3 ತಿಂಗಳ ಒಳಗೆ ಭರ್ತಿ ಮಾಡಲು ಮೈಸೂರು ವಿವಿ ನಿರ್ಧರಿಸಿದೆ. ವಿವಿ ವ್ಯಾಪ್ತಿಯಲ್ಲಿ 665 ಹುದ್ದೆಗಳಿದ್ದು, ಈ ಪೈಕಿ 350 ಹುದ್ದೆ ಖಾಲಿ ಇವೆ. 12 ವರ್ಷದಿಂದ ನೇಮಕಾತಿಯಾಗಿಲ್ಲ ಎಂದು ವಿವರಿಸಿದರು.

ಮುಂದಿನ 6 ತಿಂಗಳೊಳಗೆ ವಿವಿಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಯುಜಿಸಿ ಸೂಚಿಸಿ ಮಾರ್ಗಸೂಚಿ ನೀಡಿದೆ. ಇದನ್ನು ಪಾಲನೆ ಮಾಡದಿದ್ದರೆ ಅನುದಾನ ಕಡಿತಗೊಳಿಸುವ ಎಚ್ಚರಿಕೆ ನೀಡಿದೆ. ಇದರ ಬೆನ್ನಹಿಂದೆಯೇ ರಾಜ್ಯ ಸರ್ಕಾರದಿಂದಲೂ ಬೋಧಕರ ನೇಮಕಾತಿಗೆ ಅನುಮತಿ ಸಿಕ್ಕಿದೆ. ಇದು ಬಹಳ ಸಂತೋಷದ ಸಂಗತಿ ಎಂದು ತಿಳಿಸಿದರು.

ಜೊತೆಗೆ ಬ್ಯಾಕ್‌ಲಾಗ್‌ 76 ಮತ್ತು ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿರುವ 54 ಹುದ್ದೆಗಳ ನೇಮಕಾತಿಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಸಿಂಡಿಕೇಟ್‌ನಿಂದಲೂ ಇದಕ್ಕೆ ಒಪ್ಪಿಗೆ ಪಡೆಯಲಾಗಿದೆ. ಇದನ್ನು ಸೇರಿ ಒಟ್ಟು 350 ಹುದ್ದೆ ಭರ್ತಿ ಮಾಡಿಕೊಳ್ಳಲಾಗುವುದು. ಜತೆಗೆ, 2-3 ವರ್ಷಗಳ ಹಿಂದೆ ಈ ಹುದ್ದೆಗಳಿಗೆ ಅರ್ಜಿ ಸ್ವೀಕರಿಸಲಾಗಿತ್ತು. ಅವರಿಗೆ ಅರ್ಜಿ ಶುಲ್ಕ ಮರುಪಾವತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ: ಸ್ತ್ರೀ ಶಿಕ್ಷಣ ಉತ್ತೇಜಿಸುವ ಸಲುವಾಗಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಸಮ್ಮತಿಸಲಾಯಿತು.

ರಾಜ್ಯ ಸರ್ಕಾರದ ಆದೇಶದಂತೆ ಬೋಧನೇತರ ವೆಚ್ಚವಾಗಿ ವಿದ್ಯಾರ್ಥಿನಿಯರು ಸ್ನಾತಕ ಪದವಿಗೆ 3,500 ರೂ. ಮತ್ತು ಸ್ನಾತಕೋತ್ತರ ಪದವಿಗೆ 5,500 ರೂ. ಮೀರದಂತೆ ಪಾವತಿಸಬೇಕಾಗಿದೆ. ಜೊತೆಗೆ ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಅಂಗವಿಕಲರಿಗೆ ಶೇ.5ರಷ್ಟು ಸೀಟು ಮತ್ತು ವಯೋಮಿತಿಯಲ್ಲಿ 5 ವರ್ಷಗಳ ರಿಯಾಯ್ತಿ ನೀಡಲು ಸಮ್ಮತಿಸಿತು. ಹೆಚ್ಚುವರಿ ಸೀಟು ಸೃಷ್ಟಿಸುವ ಮೂಲಕ ಈ ಅವಕಾಶ ಕಲ್ಪಿಸಿಕೊಡಲು ತೀರ್ಮಾನಿಸಿತು.

ಪಿಎಚ್‌ಡಿ ನಿಯಮಾವಳಿ ತಿದ್ದುಪಡಿ: ಪಿಎಚ್‌ಡಿ 2017ರ ನಿಯಮಾವಳಿಗೆ ತಿದ್ದುಪಡಿ ತಂದಿದ್ದು, ಪ್ರವೇಶ ಪರೀಕ್ಷೆಯಿಂದ ಎಂ.ಪಿಲ್‌ ವಿದ್ಯಾರ್ಥಿಗಳಿಗೆ ರಿಯಾಯ್ತಿ ನೀಡುವುದನ್ನು ಕೈಬಿಡಲಾಗಿದೆ. ಅವರೂ ಪರೀಕ್ಷೆ ಬರೆದು ಪಿಎಚ್‌ಡಿ ಪ್ರವೇಶ ಪಡೆಯಬೇಕಾಗಿದೆ. ಜತೆಗೆ, ಎಂ.ಪಿಲ್‌ ಕೋರ್ಸ್‌ನ್ನು ಉಳಿಸಿಕೊಳ್ಳಬೇಕೆ, ಸ್ಥಗಿತಗೊಳಿಸಬೇಕೆ ಎಂಬುವುದನ್ನು ತೀರ್ಮಾನಿಸಲಾಗುವುದು ಎಂದರು.

ಯೋಗಿಕ್‌ ಸೈನ್ಸ್‌ ಕೋರ್ಸ್‌ ಆರಂಭ: ಮೈಸೂರು ಯೋಗ ಮತ್ತು ಪ್ರವಾಸಿ ತಾಣವಾಗಿರುವ ಹಿನ್ನೆಲೆಯಲ್ಲಿ ಮೈಸೂರು ವಿವಿಯಲ್ಲಿ ಯೋಗ ವಿಜ್ಞಾನ ಮತ್ತು ಎಂಬಿಎ(ಪ್ರವಾಸೋದ್ಯಮ) ಸ್ನಾತಕೋತ್ತರ ಕೋರ್ಸ್‌ನ್ನು ಪ್ರಸ್ತಕ ಸಾಲಿನಿಂದಲೇ ಪ್ರಾರಂಭಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಏರುಧ್ವನಿ: ಎಂಎ ಇಂಗ್ಲಿಷ್‌ ಪ್ರವೇಶಾತಿಗೆ ಈಗಿರುವ ಕಟ್‌ ಆಫ್ ಪರ್ಸಂಟೇಜ್‌ ಇಳಿಕೆ ಮಾಡಬೇಕೆಂಬ ಒತ್ತಾಯ ಸಭೆಯಲ್ಲಿ ಕೇಳಿಬಂದಿತು. ಈ ಬಗ್ಗೆ ವಾದ ಪ್ರತಿವಾದಗಳು ನಡೆದವು.
ಎಂಎ ಇಂಗ್ಲಿಷ್‌ ಪ್ರವೇಶಾತಿಗೆ ಈಗ ಎಸ್ಸಿ-ಎಸ್ಸಿಗೆ ಕನಿಷ್ಠ 45 ಅಂಕ, ಸಾಮಾನ್ಯ ವರ್ಗದವರಿಗೆ 50 ಅಂಕ ನಿಗದಿ ಪಡಿಸಲಾಗಿದೆ. ಇದನ್ನು ಪೂರೈಸಲಾಗದೆ ಅನೇಕ ಪರಿಶಿಷ್ಟ ವಿದ್ಯಾರ್ಥಿಗಳು ಈ ಕೋರ್ಸ್‌ನ ಕಲಿಕೆಯಿಂದ ವಂಚಿತರಾಗಿದ್ದಾರೆ.

ಜತೆಗೆ, ಈ ಕಾರಣಕ್ಕೆ ಚಾಮರಾಜನಗರ, ಮಂಡ್ಯ, ಹಾಸನ ಕೇಂದ್ರದಲ್ಲಿ ದಾಖಲಾತಿಯೂ ಕುಸಿದಿದೆ. ಕೆಲ ಕಡೆ ಈ ವಿಭಾಗ ಮುಚ್ಚುವ ಸ್ಥಿತಿ ಬಂದಿದೆ. ಹೀಗಾಗಿ ಉಳಿದ ವಿಭಾಗಗಳ ಮಾದರಿಯಲ್ಲಿ ಈ ಕೋರ್ಸ್‌ನ ಪ್ರವೇಶಾತಿ ನಿಗದಿತ ಅಂಕವನ್ನು ಪರಿಶಿಷ್ಟರಿಗೆ 40, ಸಾಮಾನ್ಯರಿಗೆ 45 ಅಂಕಕ್ಕೆ ಇಳಿಸಬೇಕು ಎಂದು ಚಾಮರಾಜನಗರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಶಿವಬಸವಯ್ಯ ಆಗ್ರಹಿಸಿದರು.

ಇದಕ್ಕೆ ಬಲವಾಗಿ ವಿರೋಧಿಸಿದ ಕಲಾ ನಿಕಾಯದ ಡೀನ್‌ ಪ್ರೊ.ಮಹದೇವ, ಹೀಗೆ ಮಾಡಿದರೆ ಗುಣಮಟ್ಟ ಕಾಯ್ದುಕೊಳ್ಳಲಾಗಲ್ಲ. ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಿದಂತಾಗಲಿದೆ. ಆದ್ದರಿಂದ ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು. ಈ ವೇಳೆ 2 ಗುಂಪುಗಳ ನಡುವೆ ಏರು ಧ್ವನಿಯಲ್ಲಿ ಕೂಗಾಟ ಆರಂಭವಾಯಿತು. ಮಧ್ಯ ಪ್ರವೇಶಿಸಿದ ಕುಲಪತಿಗಳು ಒಂದು ವಾರದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಅದಕ್ಕಾಗಿ ಶೈಕ್ಷಣಿಕ ಮಂಡಳಿಯ ಉಪಸಮಿತಿ ರಚಿಸಿ, ಈ ಕುರಿತು ಸಮಗ್ರ ಅಧ್ಯಯನ ಮಾಡಿಸಿ, ಬಳಿಕ ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿನ ಪ್ರಮುಖ ನಿರ್ಣಯಗಳು
– ವಿವಿ ಅಧ್ಯಾಪಕರಿಗೆ, ಗ್ರಂಥಪಾಲಕರಿಗೆ, ಸಿಬ್ಬಂದಿಗೆ 2016 ಜನವರಿ 1ರಿಂದ ಪೂರ್ವಾನ್ವಯವಾಗುವಂತೆ 7ನೇ ಪರಿಷ್ಕೃತ ಯುಜಿಸಿ ವೇತನ ಶ್ರೇಣಿ ಜಾರಿಗೆ ನಿರ್ಣಯ. ಜತೆಗೆ, ವಿವಿ ಕರಡು ಪಿಂಚಣಿ ಅಧಿನಿಯಮ-1979ಕ್ಕೆ ತಿದ್ದುಪಡಿಗೂ ಸಮ್ಮತಿ.

– ಸಿಂಹ ಸುಬ್ಬಮಹಾಲಕ್ಷ್ಮೀ ಪ್ರಥಮ ದರ್ಜೆ ಕಾಲೇಜಿಗೆ “ಜಿಎಸ್‌ಎಸ್‌ಎಸ್‌’ ಎಂದು ಹೆಸರು ಬದಲಾವಣೆಗೆ ಮತ್ತು ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಟ್ಟಡಕ್ಕೆ ಈ ಕಾಲೇಜಿನ ಸ್ಥಳಾಂತರಕ್ಕೂ ಒಪ್ಪಿಗೆ.

– ಮಾಂಡವ್ಯ ಪ್ರಥಮ ದರ್ಜೆ ಕಾಲೇಜಿಗೆ ಶಾಶ್ವತ ಸಂಯೋಜನೆ ಮುಂದವರಿಕೆಗೆ ಸಮ್ಮತಿ.

– ಪಾಂಡವಪುರದ ಚಿನಕುರಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿಗೆ ಬಿಎ, ಬಿಎಸ್ಸಿ, ಬಿಬಿಎ ಕೋರ್ಸ್‌ ಪ್ರಾರಂಭಿಸಲು ಒಪ್ಪಿಗೆ.

– ಹೊಳೇನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಮಾದರಿ ವಸತಿ ಸಹಿತ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಬಿಎ, ಬಿಎಸ್ಸಿ, ಬಿಸಿಎ, ಬಿಕಾಂ ಮತ್ತು ಬಿಬಿಎ ಕೋರ್ಸ್‌ ಪ್ರಾರಂಭಿಸಲು ಒಪ್ಪಿಗೆ.

– ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ಎಂಎ ಕನ್ನಡ ಮತ್ತು ರಾಜ್ಯಶಾಸ್ತ್ರ ಶುರು ಮಾಡಲು ಒಪ್ಪಿಗೆ.

– ಬಿ.ಇಡಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಕ ಮತ್ತು ಶೇಕಡವಾರು ಅಂಕಗಳನ್ನು ನಮೂದಿಸಿ ಅಂಕಪಟ್ಟಿ ನೀಡಲು ನಿರ್ಧಾರ.

– ಕಲಿಕಾ ನ್ಯೂನತೆ ಹಿನ್ನೆಲೆಯಲ್ಲಿ ಮಹಾಜನ ಕಾಲೇಜಿನ ಜೋನಾಥನ್‌ ಪೊನ್ನಪ್ಪ ಅವರಿಗೆ 2ನೇ ಭಾಷಾ ವಿಷಯದ ಅಧ್ಯಯನ ಮತ್ತು ಪರೀಕ್ಷೆಯಿಂದ ವಿನಾಯಿತಿಗೆ ನಿರ್ಧಾರ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್‌ ನಾಯಕತ್ವ ಬದಲಾವಣೆಗೆ ಕೈ ನಾಯಕರು ಈಗ ಗಂಭೀರ ಚಿಂತನೆ ನಡೆಸಿದ್ದು, ಜಿಲ್ಲಾ ಅಧ್ಯಕ್ಷರ ಬದಲಾವಣೆಗಾಗಿಯೇ ಕೆಪಿಸಿಸಿಯಿಂದ ನೇಮಕಗೊಂಡಿದ್ದ...

  • ಬೆಳಗಾವಿ: ಸಹೋದರ ಲಖನ್ ಜಾರಕಿಹೊಳಿಗೆ ಒಳ್ಳೆಯದಾಗಲಿ. ಅವನು ಸತೀಶ್ ಜಾರಕಿಹೊಳಿ ಜೊತೆಗೆ ಸೇರಿ ಹಾಳಾಗುವುದು ಬೇಡ. ಲಖನ್ ಶಾಸಕ ಆದ್ರೆ ಮೊದಲು ಸಂತೋಷ ನಾನು ಪಡುತ್ತೇನೆ...

  • ಕುಂದಗೋಳ: ಸರ್ಕಾರಿ ಕಾರ್ಯಕ್ರಮಕ್ಕೆ ನಮ್ಮನ್ನು ಏಕೆ ಕರೆಯುತ್ತಿಲ್ಲ ಎಂದು ತಾಪಂ ಸರ್ವ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಪಂ...

  • ಧಾರವಾಡ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಂಬಾಕು ತನಿಖಾ ದಳ ದಿಂದ 21ಕ್ಕೂ ಹೆಚ್ಚು ದಿಢೀರ್‌ ದಾಳಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ...

  • ಧಾರವಾಡ: ಕೋಟಿ ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಆದರೆ ಅಲ್ಲಲ್ಲಿ ಸೋರುತ್ತಿದೆ. ನೆಲ ಮಹಡಿಯಲ್ಲಿಯೋ ಚರಂಡಿ ನೀರು ಮತ್ತು ಮಳೆ...