ಗುರುಗುಂಟಾ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಸೇವೆಗೆ ಚಾಲನೆ
Team Udayavani, Jan 16, 2022, 5:43 PM IST
ಲಿಂಗಸುಗೂರು: ಶಾಮ್ ಪ್ರಸಾದ ಮುಖರ್ಜಿ ರೂರ್ಬನ್ ಮಿಷನ್‌ನಡಿಯಲ್ಲಿ ರಾಜ್ಯದಲ್ಲಿ ಏಕೈಕ ಕ್ಲಸ್ಟರ್ ಗುರುಗುಂಟಾ ಆಯ್ಕೆ ಮಾಡಲಾಗಿದೆ ಎಂದು ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ ಹೇಳಿದರು.
ಗುರುಗುಂಟಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಸಂಸದರ ನಿಧಿ ಹಾಗೂ ರೂರ್ಬನ್‌ನಡಿಯಲ್ಲಿ ಎರಡು ಆಂಬ್ಯುಲೆನ್ಸ್‌ಗಳಿಗೆ ಚಾಲನೆ ಹಾಗೂ ಶಾಮ್ ಪ್ರಸಾದ ಮುಖರ್ಜಿ ರೂರ್ಬನ್ ಮಿಷನ್ ನಡಿ 21 ಲಕ್ಷ ರೂ. ವೆಚ್ಚದ ವೈದ್ಯಕೀಯ ಸಲಕರಣೆಗಳ ಕೊಠಡಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ರಾಜ್ಯಕ್ಕೆ ರೂರ್ಬನ್ ಕ್ಲಸ್ಟರ್ ಅದು ಗುರುಗುಂಟಾ ಆಯ್ಕೆ ಮಾಡಲಾಗಿದೆ. ಈ ಯೋಜನೆಯಡಿ ಪಶು ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದುಲ್ಲದೆ ಗುರುಗುಂಟಾ ಗ್ರಾಮದಲ್ಲಿ ತರಕಾರಿ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಯಾಗಿದೆ. ಆದರೆ ನಿವೇಶನ ಕೊರತೆಯಿದೆ. ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗಾಗಿ ನಿವೇಶನಗಳನ್ನು ಒದಗಿಸಿದರೆ ಕೂಡಲೇ ಕಾಮಗಾರಿ ಆರಂಭ ಮಾಡಿಸುವೆ ಎಂದರು.
ಸಂಸದ್ ಸಂಕುಲ್ ಯೋಜನೆಯಡಿ ಪರಿಶಿಷ್ಟ ಪಂಗಡದವರು ಹೆಚ್ಚು ಜನಸಂಖ್ಯೆ ಇರುವ ತಾಲೂಕಿನ 15 ಗ್ರಾಪಂಗಳನ್ನು ಆಯ್ಕೆ ಮಾಡಿಡಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯಡಿ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ ಎಂದರು.
ರಾಜಾ ಶ್ರೀನಿವಾಸ ನಾಯಕ, ರಾಜಾ ಸೋಮನಾಥ ನಾಯಕ, ಗಜೇಂದ್ರ ನಾಯಕ, ಡಾ| ಅಮರೇಶ ಪಾಟೀಲ್, ಡಾ| ರುದ್ರಗೌಡ ಪಾಟೀಲ್, ಡಾ| ಅಬಿಜೀತ್ ನಾಯಕ, ಪ್ರಾಣೇಶ ಜೋಷಿ ಇದ್ದರು.