ಹಳ್ಳ ಸ್ವಚ್ಛತೆ ರಕ್ಷಣೆ ನಗರಸಭೆ-ಜನರ ಜವಾಬ್ದಾರಿ

ಹಿರೇಹಳ್ಳ ಸ್ವಚ್ಛತೆ ಕಾಮಗಾರಿ ಮಾಜಿ ಶಾಸಕ ಹಂಪನಗೌಡ ವೀಕ್ಷಣೆ

Team Udayavani, May 21, 2019, 10:00 AM IST

ಸಿಂಧನೂರು: ಕಳೆದ 7 ದಿನಗಳಿಂದ ನಮ್ಮ ಗೆಳೆಯರ ಬಳಗ ಹಾಗೂ ಅಭಿಮಾನಿ ಬಳಗದ ವತಿಯಿಂದ ಹಿರೇಹಳ್ಳ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದೆ. ಇನ್ನು ಮುಂದೆ ಹಿರೇಹಳ್ಳ ಸ್ವಚ್ಛತೆ ಕಾಪಾಡುವಲ್ಲಿ ಸಿಂಧನೂರಿನ ನಾಗರಿಕರು ಹಾಗೂ ನಗರಸಭೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು

ಅವರು ಸೋಮವಾರ ಹಿರೇಹಳ್ಳದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯ ವೀಕ್ಷಿಸಿ ಮಾತನಾಡಿದರು. ಸುಮಾರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಹಿರೇಹಳ್ಳ ಸ್ವಚ್ಛತಾ ಕಾರ್ಯವನ್ನು ಈ ಬಾರಿ ನಮ್ಮ ಅಭಿಮಾನಿಗಳು ಮಾಡಿರುವುದು ಒಂದು ಒಳ್ಳೆಯ ಕೆಲಸವಾಗಿದೆ. ಸರ್ಕಾರವೇ ಈ ಕಾರ್ಯ ಕೈಗೊಂಡಿದ್ದರೆ ಸುಮಾರು ಒಂದೂವರೆ ಕೋಟಿ ಖರ್ಚಾಗುತ್ತಿತ್ತು. ನಮ್ಮ ಅಭಿಮಾನಿಗಳು ಸ್ವತಃ ತಮ್ಮ ದುಡ್ಡಿನಿಂದಲೇ ಹಣ ಖರ್ಚು ಮಾಡಿ ಈ ಕಾರ್ಯವನ್ನು ಕೇವಲ 15 ಲಕ್ಷ‌ ರೂ.ಗಳಲ್ಲಿ ಮುಗಿಸಿದ್ದಾರೆ. ಇನ್ನು ಮುಂದೆ ಇದರ ಜವಾಬ್ದಾರಿ ನಗರಸಭೆ ವಹಿಸಿಕೊಳ್ಳಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡರು ಒಂದು ವರ್ಷದಿಂದ ನಗರದಲ್ಲಿ ಅಥವಾ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹಳೆಯ ಕೆಲಸಗಳೇ ಇನ್ನೂ ಉದ್ಘಾಟನೆಗೊಳ್ಳದ ಪರಿಸ್ಥಿತಿಯಲ್ಲಿ ಇವೆ. ಅವುಗಳನ್ನು ಪೂರ್ಣಗೊಳಿಸುವ ಕೆಲಸವನ್ನು ಸಹ ಸಚಿವರು ಮಾಡಿಲ್ಲ. ಕಳೆದ ಬಾರಿ ಯುಜಿಡಿ 24/7 ನೀರು ಯೋಜನೆ ಕೆಲಸಗಳ ಬಗ್ಗೆ ಧ್ವನಿ ಎತ್ತಿದ್ದರೂ ತಾವು ಸಚಿವರಾದ ನಂತರ ಆ ಕೆಲಸಗಳ ಬಗ್ಗೆ ಯಾವೊಂದು ಮಾತು ಅವರು ಮಾತನಾಡಿಲ್ಲ. ಅದರ ಬಗ್ಗೆ ಇವಾಗ ಮೌನವಾಗಿದ್ದು ಏಕೆ ಎಂದು ಪ್ರಶ್ನಿಸಿದರು.

ಈ ಬಾರಿ ಲೋಕಸಭೆ ಚುನಾವಣೆ ಸಮೀಕ್ಷೆಗಳು ಸುಳ್ಳು ಆಗಲಿವೆ. ಕಳೆದ ಬಾರಿ ಇದೇ ತೆರನಾದ ಸಮೀಕ್ಷೆಗಳು ಬಂದಿದ್ದವು. ಆದರೂ ರಾಜ್ಯದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸೀಟು ತೆಗೆದುಕೊಂಡು ಆಡಳಿತ ಚುಕ್ಕಾಣಿ ಹಿಡಿದಿದ.ೆ ಯಾವುದಕ್ಕೂ ಮೇ 23ರವರೆಗೆ ಕಾದು ನೋಡಿ. ಬದಲಾವಣೆ ಆಗುವ ಸಾಧ್ಯತೆ ಇದೆ ಎಂದರು. ಜಿಪಂ ಸದಸ್ಯ ಬಸವರಾಜ ಹಿರೇಗೌಡ, ಆರ್‌.ಸಿ. ಪಾಟೀಲ, ದೀಪಾ ಗೌಡ ಇತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ