ಬಿಎಸ್‌ವೈ, ಅಶ್ವತ್ಥನಾರಾಯಣ ನಡೆ ಸ್ವಾಗತಾರ್ಹ
Team Udayavani, Jun 8, 2020, 7:46 AM IST
ಮಾಗಡಿ: ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದ ಬೆಂಗಳೂರು-ಮಾಗಡಿ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಂಡಿರುವ ಸಿಎಂ ಬಿಎಸ್‌ವೈ ಮತ್ತು ಡಿಸಿಎಂ ಡಾ. ಅಶ್ವತ್ಥಥನಾರಾಯಣ ನಡೆ ಸ್ವಾಗತಾರ್ಹ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ.
ಮಾಗಡಿವರೆಗೆ ಚತುಷ್ಪಥ ರಸ್ತೆ: ನೈಸ್ ರಸ್ತೆಯಿಂದ ಮಾಗಡಿ ಮಾರ್ಗವಾಗಿ ಸೋಮವಾರಪೇಟೆವರೆಗಿನ ಚತುಷ್ಪಥ ರಸ್ತೆ ಕಾಮಗಾರಿಯನ್ನು ಸಿಎಂ ಮತ್ತು ಡಿಸಿಎಂ, ಶೀಘ್ರ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಚತುಷ್ಪಥ ರಸ್ತೆಗೆ ಅನುಕೂಲವಾಗ ಬೇಕಾದರೆ ಸುಮ್ಮನಹಳ್ಳಿಯಿಂದ ಗೊಲ್ಲರಹಟ್ಟಿಗೆ ಸಂಪರ್ಕ ರಸ್ತೆಯಾಗಿ ಮೇಲ್ಸೇತುವೆ ನಿರ್ಮಿಸಿದರೆ ತುಂಬ ಅನುಕೂಲವಾಗುತ್ತದೆ.
ಶಾಸಕರು, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಕ್ಷೇತ್ರ ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣದ ಒಳಚರಂಡಿ ದುರಸ್ತಿ, ಕುಡಿಯುವ ನೀರಿನ ಯೋಜನೆ ಸೇರಿದಂತೆ ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದರು. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಎತ್ತಿನಹೊಳೆ ನದಿ ಯೋಜನೆಯನ್ನು ಮರೂರು ಮಾರ್ಗವಾಗಿ ಕೆಂಪಸಾಗರದ ಮುಖಾಂತರ ವೈ.ಜಿ. ಗುಡ್ಡದ ಜಲಾಶಯಕ್ಕೆ ನೀರು ತುಂಬಿಸುವ ಕೆಲಸ ತಡೆಹಿಡಿದಿರುವುದು ಸರಿಯಾದ ಕ್ರಮವಲ್ಲ.
ಹಾಗೊಂದು ವೇಳೆ ತಡೆಹಿಡಿದಿದ್ದರೆ ಈ ಸಂಬಂಧ ಸಿಎಂ ಬಿಎಸ್‌ವೈ ಅವರೊಂದಿಗೆ ಚರ್ಚಿಸುತ್ತೇನೆ. ಸ್ಪಂದಿಸದಿದ್ದರೆ ರೈತರೊಂದಿಗೆ ಸೇರಿ ಹೋರಾಟ ಅನಿವಾರ್ಯ ಎಂದರು. ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸುರೇಶ್, ಬಮೂಲ್ ನಿರ್ದೇಶಕ ಕೆ.ಬಿ.ರಾಜಣ್ಣ, ಜಿಪಂ ಸದಸ್ಯ ಅಣ್ಣೇಗೌಡ, ಶಿವಪ್ರಸಾದ್, ಎಂ.ಕೆ. ಧನಂಜಯ, ಸಿಂಗ್ರಿಗೌಡ, ಹೊನ್ನಪ್ಪ, ಮೂರ್ತಿ ಶಿವರಾಜು, ಜಯರಾಮು ಇತರರು ಇದ್ದರು.