ಪಟ್ಟಣ, ಗ್ರಾಮಗಳಲ್ಲಿ ನೀರಿಗಾಗಿ ಪರದಾಟ

ಜಲಾಶಯಗಳಿದ್ದರೂ ನೀರಿನ ಸಮಸ್ಯೆ • ಸಮಸ್ಯೆಯತ್ತ ಗಮನಹರಿಸದ ಅಧಿಕಾರಿಗಳು • ಸಾರ್ವಜನಿಕರ ಆಕ್ರೋಶ

Team Udayavani, May 12, 2019, 3:32 PM IST

ಮಾಗಡಿ ಗ್ರಾಮೀಣ ವ್ಯಾಪ್ತಿಯಲ್ಲಿ ನೀರಿಗಾಗಿ ಟ್ರ್ಯಾಕ್ಟರ್‌ ಬಳಿ ಬಿಂದಿಗೆ ಹಿಡಿದು ನಿಂತಿರುವ ಗ್ರಾಮಸ್ಥರು.

ಮಾಗಡಿ: ತಾಲೂಕಿನಲ್ಲಿ ಮಂಚನಬೆಲೆ, ತಿಪ್ಪಗೊಂಡನಹಳ್ಳಿ ಹಾಗೂ ವೈ.ಜಿ.ಗುಡ್ಡ ಈ ಮೂರು ಜಲಾಶಯಗಳಿದ್ದರೂ ಪಟ್ಟಣ ಹಾಗೂ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬೇಸಿಗೆ ತೀವ್ರವಾಗಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಜನರು ನೀರಿಗಾಗಿ ಪರಿತಪ್ಪಿಸುವಂತಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳಾಗಲಿ ಅಥವಾ ರಾಜಕಾರಣಿಗಳಾಗಲಿ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀರು ಪೂರೈಕೆಗೆ ಪೈಪ್‌ಲೈನ್‌ ಆಳವಡಿಕೆ: ತಾಲೂಕಿನಲ್ಲಿ ಒಟ್ಟು 32 ಗ್ರಾಮ ಪಂಚಾಯ್ತಿಗಳಿವೆ. ಈ ಪೈಕಿ ಹಲವು ಗ್ರಾಮಗಳು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿವೆ. ಅಲ್ಲದೆ, ನೀರಿನ ಅಭಾವದಿಂದಾಗಿ ಪಟ್ಟಣದ ಕೆಲವು ವಾರ್ಡ್‌ಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಮಡಬಾಳ್‌ ಹೋಬಳಿಯಲ್ಲಿರುವ ವೈ.ಜಿ.ಗುಡ್ಡ ಜಲಾಶಯದಿಂದ ಮತ್ತಿಕೆರೆ, ಅಗಲಕೋಟೆ, ದೊಣಕುಪ್ಪೆ, ಏಳಿಗೆಹಳ್ಳಿ ಕಾಲೋನಿ, ಸಾತನೂರು, ಅಲಸಬೆಲೆ ಸೇರಿದಂತೆ 14 ಗ್ರಾಮಗಳಿಗೆ ನೀರು ಪೂರೈಕೆಗೆ ಪೈಪ್‌ಲೈನ್‌ ಆಳವಡಿಸಲಾಗಿದೆ. ಈ ಗ್ರಾಮಗಳನ್ನು ಬಿಟ್ಟು ಉಳಿದ 6 ಗ್ರಾಮಗಳಲ್ಲಿ ಕೊಳವೆ ಬಾವಿಯಿಂದ ನೀರು ಪೂರೈಸಲಾಗುತ್ತಿದ್ದು, ಪಂಪ್‌ಸೆಟ್ ದುರಸ್ತಿಯಾದರೆ ಜಲಾಶಯದಿಂದ ನೀರು ಪೂರೈಸಲಾಗುತ್ತದೆ.

ಒಡೆದ ಪೈಪ್‌: ವೈ.ಜಿ.ಗುಡ್ಡ ಜಲಾಶಯದಿಂದ 14 ಗ್ರಾಮಗಳಿಗೆ ನೀರು ಪೈಪ್‌ಲೈನ್‌ ಮೂಲಕ ನೀರು ಪೂರೈಸಲಾಗುತ್ತದೆ. ಆದರೆ, ನೀರು ಪೂರೈಸುವ ಪೈಪ್‌ಲೈನ್‌ ತೆರೆದುಕೊಂಡಿದ್ದು, ಕಿಡಿಗೇಡಿಗಳು ಕಲ್ಲು ಹಾಕಿದ್ದರಿಂದ ಪೈಪ್‌ ಒಡೆದು ಹೋಗಿದೆ. ಹೀಗಾಗಿ ನೀರು ಕೆಲ ಗ್ರಾಮಗಳಿಗೆ ನೀರು ಪೂರೈಕೆಯನ್ನು ನಿಲ್ಲಿಸಲಾಗಿದೆ. ಈ ಗ್ರಾಮಗಳಿಗೆ ಟ್ರ್ಯಾಕ್ಟರ್‌ ಹಾಗೂ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಗಡಿಗೆ ಮಂಚನಬೆಲೆಯಿಂದ ನೀರು: ಸುಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ಮಾಗಡಿ ಪಟ್ಟಣಕ್ಕೆ ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಪಟ್ಟಣಕ್ಕೆ ನಿರಂತರ ನೀರು ಪೂರೈಕೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಅಲ್ಲದೆ, ಕೆಲವು ವಾರ್ಡ್‌ಗಳಲ್ಲಿ ನಿರಂತರ ಕುಡಿಯುವ ನೀರಿನ ಪೈಪ್‌ಲೈನ್‌ ಅನ್ನು ಸಮರ್ಪಕವಾಗಿ ಅಳವಡಿಸದ ಕಾರಣ ನೀರು ಪೂರೈಕೆಯಾಗುತ್ತಲ್ಲ ಎಂದು ವಾರ್ಡ್‌ಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಹೊಸಪೇಟೆಯ ಭಜನೆ ಮಂದಿರ ರಸ್ತೆ, ಬಿ.ಕೆ.ರಸ್ತೆ, ಐಡಿಎಸ್‌ಎಂಟಿ ಬಡಾವಣೆ, ಹಳೇ ಮಸೀದಿ ಮೊಹಲ್ಲ, ಶ್ರೀನಗರ ಬಡಾವಣೆ ಹಾಗೂ ಸೋಮೇಶ್ವರ ದೇವಾಲಯದ ಮುಂಭಾಗದ ಕಲ್ಯಾಣಿ ರಸ್ತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ