ನರೇಗಾ ಯೋಜನೆ ಅಕ್ರಮ ಬಯಲು
Team Udayavani, Feb 22, 2021, 12:24 PM IST
ಕನಕಪುರ: ಕೃಷಿ ಹೊಂಡ ಅನುಷ್ಠಾನ ಮಾಡದೆ ಅಕ್ರಮವಾಗಿ ಸುಳ್ಳು ದಾಖಲೆ ಸಲ್ಲಿಸಿ, ಅನುದಾನ ಪಡೆದು ಇಲಾಖೆಗೆ ವಂಚಿಸಿರುವುದು ಓಂಬಡ್ಸ್ ಮನ್ ಅಧಿಕಾರಿಗಳ ತನಿಖೆಯಿಂದ ದೃಡಪಟ್ಟಿದೆ. ಟಿ.ಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ಮತ್ತು ಅಧಿಕಾರಿ ಗಳು 42,440 ರೂ. ಮರುಪಾವತಿ ಮಾಡುವಂತೆ ಓಂಬುಡ್ಸ್ ಮನ್ ಅಧಿಕಾರಿಗಳು ಆದೇಶ ಮಾಡಿದ್ದಾರೆ.
ತಾಲೂಕಿನ ಟಿ.ಹೊಸಹಳ್ಳಿ ಗ್ರಾಪಂನಲ್ಲಿ ನಡೆದಿರುವ ಅಕ್ರಮ ಇದೇ ಮೊದಲಲ್ಲ. ಹಿಂದೆ 2019-20 ಮತ್ತು 2020-21ನೇ ಸಾಲಿನಲ್ಲಿ ನಡೆಸಿದ್ದ ಮುಸ್ತಾಫನ ಕೆರೆ ಭಾಗ-1 ಹಾಗೂ ಭಾಗ-2 ಮತ್ತು ಮಂಗಳದಯ್ಯನ ಕೆರೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಒಟ್ಟು ಮೂರು ನರೇಗಾ ಕಾಮಗಾರಿಗಳಲ್ಲಿ ಮಾನವ ಸಂಪನ್ಮೂಲ ಬಳಸಿಕೊಳ್ಳರೇ ನರೇಗಾ ನಿಯಮ ಉಲ್ಲಂ ಸಿ ಯಂತ್ರ ಬಳಸಿಕೊಂಡು ಕಾಮಗಾರಿ ಮುಗಿಸಿದ್ದರು. ಈ ಸಂಬಂಧ ಗ್ರಾಮಸ್ಥರು ನೀಡಿದ್ದ ದೂರಿನ ಆಧಾರದ ಮೇಲೆ ಅಧಿಕಾರಿಗಳು ನಡೆಸಿದ ತನಿಖೆಯಿಂದ ಅಕ್ರಮ ಬಯಲಾಗಿತ್ತು. ಬಳಿಕ, ಟಿ.ಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ, ಪಿಡಿಒ, ತಾಂತ್ರಿಕ ಸಹಾಯಕ ಅಭಿಯಂತರ, ಆಡಳಿತಾಧಿಕಾರಿ, ತಾಂತ್ರಿಕ ಸಹಾಯಕ ಅಭಿಯಂತರ ಅವರಿಂದ ಒಟ್ಟು 95,850 ರೂ. ವಸೂಲಿ ಮಾಡಲಾಗಿತ್ತು. ಈಗ ಮತ್ತೂಂದು ಹಗರಣ ಬಯಲಾಗಿದೆ.
ಹಣ ಮರುಪಾವತಿಗೆ ಆದೇಶ: ಟಿ.ಹೊಸಹಳ್ಳಿ ಗ್ರಾಪಂನಲ್ಲಿ 2015-16ನೇ ಸಾಲಿನಲ್ಲಿ ಪಾಪಣ್ಣ ಬಿನ್ ಕಾಡೇಗೌಡ ಅವರ ಕೃಷಿ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಕಾಮಗಾರಿಯ 42,440 ಅನುದಾನ ಬಿಡುಗಡೆ ಮಾಡಕೊಂಡು ಅಕ್ರಮವೆಸಗಿದ್ದಾರೆ ಎಂದು ಅಗರ ಗ್ರಾಮಸ್ಥರು,ನ ಓಂಬುಡ್ಸ್ ಮನ್ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಒಂಬುಡ್ಸ್‌ಮನ್ ಅಧಿಕಾರಿ ಚಲುವರಾಜು ನಡೆಸಿದ ತನಿಖೆಯಲ್ಲಿ, ಕೃಷಿ ಹೊಂಡ ಕಾಮಗಾರಿ ಅನುಷ್ಠಾನವಾಗದೇ, ಅನುದಾನ ಬಿಡುಗಡೆ ಮಾಡಿಕೊಂಡುರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಟಿ.ಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ, ಪಿಡಿಒ, ತಾಂತ್ರಿಕ ಸಹಾಯಕ ಅವರಿಂದ ತಾಲಾ 14,147 ರೂ.ಗಳಂತೆ ಒಟ್ಟು 42,440 ರೂ. ಸರ್ಕಾರಕ್ಕೆ ಆಗಿರುವ ನಷ್ಟವೆಂದು ಪರಿಗಣಿಸಲಾಗಿದೆ. ಈ ಹಣವನ್ನು ಮರುಪಾವತಿ ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.