ರೇಷ್ಮೆ ನಗರದಲ್ಲಿ ಓಲೈಕೆ ರಾಜಕಾರಣ ಶುರು
Team Udayavani, Feb 4, 2023, 3:43 PM IST
ರಾಮನಗರ: ಭಾವನಾತ್ಮಕ ಸೆಳುವಿನ ಕ್ಷೇತ್ರದಲ್ಲಿ ಓಲೈಕೆಯ ರಾಜಕಾರಣ ಶುರುವಾಗಿದ್ದು, ಮೂರೂಪಕ್ಷ ಗಳಿಂದ ಸಮುದಾಯಗಳ ಸೆಳೆಯಲು ತಂತ್ರ ಪ್ರತಿ ತಂತ್ರ ಆಮಿಷಗಳ ಕಾರ್ಯಾಚರಣೆ ನಡೆಸುತ್ತಿವೆ. ಚುನಾವಣೆ ಸಮೀಪಿಸಿದ್ರೂ ಮತದಾರರ ನಡೆ ಮಾತ್ರನಿಗೂಢವಾಗಿದ್ದು, ಕುತೂಹಲ ಮೂಡಿಸಿದೆ.
ರೇಷ್ಮೆನಗರ ರಾಮನಗರ ಜಿಲ್ಲೆ ಅಂದ್ರೆ ಸಾಕು ಭಾವನಾತ್ಮಕ ಸೆಳೆತ ಇದ್ದೇ ಇದೆ. ಎಲ್ಲೋ ಒಂದು ಕಡೆ ತಮ್ಮಅಸ್ತಿತ್ವವೇ ನಾಶವಾದಂತೆ ಅನ್ನಿಸಿದಾಗ, ಇಲ್ಲಿ ಅಸ್ತಿತ್ವಕಂಡುಕೊಂಡ ಮಾಜಿ ಪ್ರಧಾನಿ ದೇವೇಗೌಡ ಕೂಡ ಭಾವನಾತ್ಮಕ ಸೆಳೆತದಿಂದಲೇ ಇಲ್ಲಿ ಗೆಲ್ಲಲು ಸಾಧ್ಯವಾಯಿತು. ನಂತರ ರಾಜ್ಯದ ಮುಖ್ಯಮಂತ್ರಿ ಪ್ರಧಾನ ಮಂತ್ರಿಗಳೂ ಆದರು. ಅಂತೆಯೇ ಎಚ್‌ಡಿಕೆ ಕೂಡ ಇಲ್ಲಿ ಅದೇ ಹಾದಿ ತುಳಿದು ಭಾವನಾತ್ಮಕವಾಗಿ ಕಣ್ಣೀರು,ರೈತ, ಬಡವರ ಪರ ಕಾಳಜಿ ಮಾತುಗಳಿಂದಲೇ ತಮ್ಮ ಅಸ್ತಿತ್ವವನ್ನೂ ಕಂಡುಕೊಂಡದ್ದು ಇತಿಹಾಸ.
ಇದರೊಟ್ಟಿಗೆ ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಕೂಡ ಸೋಲಿನ ಮೇಲೆ ಸೋಲು ಕಂಡಿದ್ದರು. ಇದೇ ಕಡೇ ಚುನಾವಣೆ ನೆಲದ ಸ್ವಾಭಿಮಾನ ಉಳಿಸಿ ಎಂಬ ಭಾವನಾತ್ಮಕ ಮಾತುಗಳಿಂದಲೇ ರಾಜಕೀಯದ ಅಸ್ತಿತ್ವ ಕಂಡುಕೊಂಡರು. ಆ ಚುನಾವಣೆಯಂತೂ ದೇವೇಗೌಡರು ದೇಶದ ಪ್ರಧಾನ ಮಂತ್ರಿ ಆಗಿದ್ದು, ದಿ. ಜೆ.ಎಚ್.ಪಟೇಲರು ರಾಜ್ಯದ ಮುಖ್ಯಮಂತ್ರಿ ಗಳಾಗಿದ್ದರು. ಆ ಕಾಲಘಟ್ಟಕ್ಕೆ ಸಿನಿಮಾರಂಗದಲ್ಲಿ ಉತ್ತುಂಗದ ಸ್ಥಾನದಲ್ಲಿದ್ದ ರೆಬೆಲ್‌ಸ್ಟಾರ್ ಅಂಬರೀಶ್ ವಿರುದ್ಧ ಗೆಲುವು ಸಾಧಿಸಿದ್ದರು. ಅದು ಐತಿಹಾಸಿಕ ಗೆಲುವು ಎಂದರೂ ತಪ್ಪಲ್ಲ.
ಇದು ಈ ಕ್ಷೇತ್ರದ ಭಾವನಾ ತ್ಮಕತೆ ಸಂಬಂಧದ ವಿರುದ್ಧ ಅದೆಷ್ಟೇ ಅತ್ಯುನ್ನತ ಹೋರಾಟನಡೆದರೂ ಕಷ್ಟ ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದು, ಅದೇ ಹಾದಿ ಈ ಬಾರಿಯ ಚುನಾವಣೆಯಲ್ಲಿ ಮೂರು ಪಕ್ಷಗಳು ತುಳಿಯುವು ದರಲ್ಲಿ ಸಂಶಯವಿಲ್ಲ.
ತ್ಯಾಗಮಯಿ ತಾಯಿ: ಮಗನ ರಾಜಕೀಯ ಭವಿಷ್ಯಕ್ಕಾಗಿ ಅಮ್ಮ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ತ್ಯಾಗ ಮಾಡಿದ್ದರೆ, ಜೆಡಿಎಸ್‌ನ ಭದ್ರಕೋಟೆ ವಶಕ್ಕೆ ಕಾಂಗ್ರೆಸ್ ಸದ್ದಿಲ್ಲದೇ ಸಿದ್ಧತೆ ನಡೆಸಿದೆ. ಶತಾಯಗತಾಯ ಜಿಲ್ಲೆಯಲ್ಲಿ ಖಾತೆ ತೆರೆದು ಸ್ಥಾನ ಗಿಟ್ಟಿಸಿಕೊಳ್ಳಲು ಬಿಜೆಪಿ ಕೂಡ ಇನ್ನಿಲ್ಲದ ಕಸರತ್ತು ಆರಂಭಿಸಿದೆ. ಇದೆಲ್ಲದರ ನಡುವೆ ಯಾರು ಹಿತವರು ಮೂವರೊಳಗೆ ಎನ್ನುವ ಲೆಕ್ಕಾಚಾರದಲ್ಲಿರುವ ಕ್ಷೇತ್ರದ ಜನತೆಗೆ ಜೆಡಿಎಸ್‌ನವರು ಧರ್ಮಯಾತ್ರೆ ಮಾಡಿದ್ರೆ, ಕಾಂಗ್ರೆಸ್ ನವರು ಪುಣ್ಯಯಾತ್ರೆ ಜೊತೆಗೆ ತವ ಭಾಗ್ಯ ನೀಡುತ್ತಿದ್ದಾರೆ. ಬಿಜೆಪಿಯ ಯಾವ ಭಾಗ್ಯ ದೊರಕಬಹುದೆಂದು ಕ್ಷೇತ್ರದ ಜನತೆ ಕೌತುಕದಿಂದಿದ್ದಾರೆ.
2018ರ ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಗೆದ್ದಿದ್ದ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವರ ಪತ್ನಿ ಅನಿತಾ ಬರೋಬ್ಬರಿ 1 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದು ಈಗ ಇತಿಹಾಸ. ಈ ಬಾರಿ ತಮ್ಮ ಬದಲಿಗೆ ತಮ್ಮ ಪುತ್ರನನ್ನು ಕಣಕ್ಕೆ ಇಳಿಸುವುದಾಗಿ ಈಗಾಗಲೇ ಅನಿತಾ ಘೋಷಿಸಿದ್ದಾರೆ.
ಈ ಬಾರಿ ಜೆಡಿಎಸ್ ಗೆಲುವಿನ ಓಟಕ್ಕೆ ಲಗಾಮು ಹಾಕಿ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯಲು ಕೈಪಾಳಯ ಸಾಕಷ್ಟು ಮುಂಚೆಯೇ ಸಿದ್ಧತೆ ನಡೆಸಿದೆ. ಕಳೆದಬಾರಿಯ ಸಾರ್ವತ್ರಿಕ ಚುನಾವಣೆಯ ಅಭ್ಯರ್ಥಿಇಕ್ಬಾಲ್ ಹುಸೇನ್ ಅವರೇ ಈ ಬಾರಿಯೂ ಕಾಂಗ್ರೆಸ್‌ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ. ಬಿಜೆಪಿಗೆ ಇನ್ನೂ ಅಧಿಕೃತವಾಗಿ ಅಭ್ಯರ್ಥಿ ಹೆಸರು ಬಿಟ್ಟುಕೊಟ್ಟಿಲ್ಲ.
ದಿನಕ್ಕೊಂದು ಹೆಸರು ತೇಲುತ್ತಿದ್ದರೂ ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೌತಮ್‌ಗೌಡ, ಇದೀಗ ಡಾ.ಪುಣ್ಯವತಿ, ಪ್ರವೀಣ್‌ಗೌಡ, ಶಿವಮಾದು (ಜಯಣ್ಣ), ಎಸ್.ಆರ್.ನಾಗರಾಜು, ನರೇಂದ್ರ ಹೀಗೆ ಬೆಳೆದಂತೆಲ್ಲಾ ಹೆಸರು ಹೆಚ್ಚು ಚಾಲ್ತಿಯಲ್ಲಿವೆ.
ಕಳೆದ 2018ರ ಚುನಾವಣೆಯಲ್ಲಿ ಇಲ್ಲಿ ಜೆಡಿಎಸ್‌ಗೆ ತೀವ್ರ ಪೈಪೋಟಿ ಒಡ್ಡಿದ್ದ ಕಾಂಗ್ರೆಸ್, ನಂತರ ನಡೆದ ಉಪ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲಿಲ್ಲ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸಿತ್ತು. ಬಿಜೆಪಿಗೆ ಸೇರ್ಪಡೆಗೊಂಡು ಅಭ್ಯರ್ಥಿಯಾಗಿದ್ದ ಎಲ್.ಚಂದ್ರಶೇಖರ್ ಕಡೆ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರಿಂದ ಕಮಲ ಪಾಳಯಕ್ಕೆ ಅಭ್ಯರ್ಥಿಯೇ ಇಲ್ಲದಂತೆ ಕಪ್ಪು ಚುಕ್ಕೆಯಾಯಿತು.
ಪ್ರತಿಷ್ಠೆಯ ರಣಕಣ: ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣದ ಸಂಕಲ್ಪ, ಶ್ರೀನಿವಾಸ ಕಲ್ಯಾಣೋತ್ಸವ ಮೊದಲಾದ ಕಾರ್ಯಕ್ರಮಗಳ ಮೂಲಕ ಈ ಬಾರಿಯ ಚುನಾವಣೆಯನ್ನು ತಾರಕಕ್ಕೇರಿಸಿದ್ದರೆ, ಮಾಜಿ ಸಿಎಂ ಕುಮಾರಸ್ವಾಮಿ ಇಲ್ಲಿಂದಲೇ ಮಗನರಾಜಕೀಯ ಭವಿಷ್ಯ ರೂಪಿಸುವ ಆಕಾಂಕ್ಷೆ ಇದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆರಾಜ್ಯದಲ್ಲಿ ತಮ್ಮದೇ ಸರ್ಕಾರ ರಚನೆಗೆ ಮುಂದಾಗಿದ್ದು, ತವರು ಜಿಲ್ಲೆಯಲ್ಲಿನ ಈ ಕ್ಷೇತ್ರ ಪ್ರತಿಷ್ಠೆಯಾಗಿದೆ.ಈ ಬಾರಿ ಈ ಇಬ್ಬರು ಸಾಂಪ್ರದಾಯಿಕ ಎದುರಾಳಿಗಳಜೊತೆಗೆ ಆಡಳಿತರೂಢ ಬಿಜೆಪಿ ಸಹ ಅದೃಷ್ಟ ಪರೀಕ್ಷೆಗೆ ಸಿದ್ಧವಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣರಿಗೂ ಇದು ಪ್ರತಿಷ್ಠೆಯಾಗಿದೆ. ಒಕ್ಕಲಿಗರು ಹಾಗೂ ನಂತರದಲ್ಲಿ ಮುಸ್ಲಿಮರ ಪ್ರಾಬಲ್ಯ ಇರುವಕ್ಷೇತ್ರದಲ್ಲಿ ಮೂರು ಪಕ್ಷಗಳು ಈ ಸಮುದಾಯದವರಿಗೇ ಮಣೆ ಹಾಕುವ ಸಾಧ್ಯತೆ ಹೆಚ್ಚಿದ್ದು,ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ :
ಅತಿಹೆಚ್ಚು ಒಕ್ಕಲಿಗ ಮತದಾರರಿರುವ ಕ್ಷೇತ್ರ ಇದಾಗಿದ್ದು, ಎರಡನೇ ಸ್ಥಾನದಲ್ಲಿರುವ ಎಸ್‌ಸಿ, ಎಸ್‌ಟಿ ನಂತರಮುಸ್ಲಿಂ ಮತದಾರರ ಓಲೈಕೆಗೆ ಏನೆಲ್ಲಾ ಕಸರತ್ತು ಮಾಡಬಹುದು ಎಂಬ ಲೆಕ್ಕಾಚಾರ ಆರಂಭವಾಗಿದ್ದು,ಗೌಡ್ರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಜೆಡಿಎಸ್ ವರದಾನ ಎಂದುಕೊಂಡಿದ್ದರೆ, ದಲಿತ ಸಮುದಾಯದ ಶೇಕಡಾವಾರು ಕಾಂಗ್ರೆಸ್ ಪಾಲಾಗಲಿದೆ ಎಂಬ ನಿರೀಕ್ಷೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇವೆರಡರ ನಡುವೆಬಿಜೆಪಿ ರಾಮಮಂದಿರ ನಿರ್ಮಾಣದ ಸ್ಲೋಗನ್ ನೊಂದಿಗೆ ದಕ್ಷಿಣ ಅಯೋಧ್ಯೆ ನಿರ್ಮಿಸುವುದಾಗಿ ಘೋಷಿಸುವ ಮೂಲಕ ಹಿಂದೂ ಮತಗಳ ಓಲೈಕೆಗೆ ಮುಂದಾಗಿದೆ.
ಮುಖ್ಯಮಂತ್ರಿ ಗಾದಿ ಕ್ಷೇತ್ರ : ರಾಮನಗರ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ಅದೃಷ್ಟದ ಕ್ಷೇತ್ರ. ಕಳೆದ ಎರಡು ದಶಕದಿಂದಲೂಇಲ್ಲಿ ಜೆಡಿಎಸ್‌ನದ್ದೇ ಪಾರುಪತ್ಯ. ಕೆಂಗಲ್ ಹನುಮಂತಯ್ಯ ಹಾಗೂ ನಂತರದಲ್ಲಿ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಇಲ್ಲಿಂದಲೇ ಗೆದ್ದು ಮುಖ್ಯಮಂತ್ರಿ ಆಗಿದ್ದರು. ಇಲ್ಲಿ ಗೆದ್ದರೆ ಮುಖ್ಯ ಮಂತ್ರಿ ಸ್ಥಾನ ಖಚಿತ ಎಂಬ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಸ್ಪರ್ಧಿಸುತ್ತಾರೆ ಎಂಬ ಮಾತುಗಳೂ ಕೇಳಿಬಂದಿತ್ತು.
-ಎಂ.ಎಚ್.ಪ್ರಕಾಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ
ಸಿ.ಟಿ.ರವಿ ‘ಮುಂದಿನ ಮುಖ್ಯಮಂತ್ರಿ’ ಆಗಲೆಂದು ಅಭಿಮಾನಿಗಳ ಪಾದಯಾತ್ರೆ
ಯಾವ ಮಠಾಧೀಶರನ್ನೂ ಬೆದರಿಸಿಲ್ಲ,ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಇಲ್ಲ: ಯತ್ನಾಳ್
ನಾನು ಯಾರಿಗೂ ಹೆದರುವುದಿಲ್ಲ: ಶಿಗ್ಗಾವಿಯಲ್ಲಿ ಸಿಎಂ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
ಕೊಕ್ಕರೆಯನ್ನು ರಕ್ಷಿಸಿ ಸಾಕಿದ್ದ ಆರಿಫ್ ಖಾನ್ ಗೆ ಅರಣ್ಯ ಇಲಾಖೆ ನೋಟಿಸ್
ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ
ಮಾಸ್ ಲುಕ್ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್ ರಾಜ್
ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ
ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ