ಸ್ವಯಂ ಉದ್ಯೋಗದಿಂದ ಪ್ರಗತಿ ಸಾಧ್ಯ

ತರಬೇತಿ ಪಡೆದ ಶಿಬಿರಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಿ: ಮಣಿ ಮೇಖಲೈ

Team Udayavani, May 12, 2019, 3:23 PM IST

ರಾಮನಗರ ತಾಲೂಕಿನ ಜೋಗರದೊಡ್ಡಿ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದು ಯಶಸ್ವಿಯಾದ ಶಿಬಿರಾರ್ಥಿಗಳನ್ನು ಸನ್ಮಾನಿಸಲಾಯಿತು.

ರಾಮನಗರ: ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯನ್ನು ಕೆನರಾ ಬ್ಯಾಂಕ್‌ ಪ್ರಾಯೋಜಿಸಿದೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ನಿರುದ್ಯೋಗಿಗಳು ಶನಿವಾರ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು, ಹತ್ತಾರು ನಿರುದ್ಯೋಗಿಗಳಿಗೆ ಆಸರೆಯಾಗಿದ್ದಾರೆ. ಇದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಮಣಿ ಮೇಖಲೈ ಹೇಳಿದರು.

ತಾಲೂಕಿನ ಬಿಡದಿ ಬಳಿಯ ಜೋಗರದೊಡ್ಡಿಯಲ್ಲಿರುವ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ನೂತನ ಶಿಬಿರಾರ್ಥಿಗಳಿಗೆ ಸಮವಸ್ತ್ರ, ಟೂಲ್ ಕಿಟ್ ವಿತರಣೆ ಮತ್ತು ಸಂಸ್ಥೆಯಲ್ಲಿ ತರಬೇತಿ ಪೂರೈಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಸ್ಥೆಯಲ್ಲಿ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಇತರ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿರುವ ಯಶಸ್ವಿ ಶಿಬಿರಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿರುದ್ಯೋಗಿಗಳಿಗೆ ಆಸರೆಯಾಗಿ: ದೇಶವನ್ನು ಕಾಡುತ್ತಿರುವ ಸಮಸ್ಯೆಗೆ ಸ್ವಯಂ ಉದ್ಯೋಗಿಗಳು ಸೂಕ್ತ ಪರಿಹಾರ. ಸೂಕ್ತ ತರಬೇತಿ, ಶಿಸ್ತು, ಶ್ರದ್ಧೆ ಮತ್ತು ಸಮಯಪ್ರಜ್ಞೆಯಿಂದ ಸ್ವಂತ ಉದ್ಯೋಗ ನಿರ್ವಹಿಸಿದರೆ ಆರ್ಥಿಕ ಪ್ರಗತಿ ಸಾಧ್ಯ. ಜತೆಗೆ ಉದ್ಯೋಗಳನ್ನು ಸೃಷ್ಟಿಸಿ ನಿರುದ್ಯೋಗಿಗಳಿಗೂ ಆಸರೆಯಾಗಬಹುದು. ಕೆಪಿಜೆ ಪ್ರಭು ಕರಕುಶಲ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕರು ಈ ರೀತಿಯ ಸಾಧನೆ ಮಾಡಿದ್ದಾರೆ. ಸನ್ಮಾನಕ್ಕೆ ಪಾತ್ರರಾಗಿರುವ ಶಿಲ್ಪಿಗಳು ಹೆಸರುಗಳಿಸಿದ್ದಾರೆ. ಇವರ ಸಾಧನೆಗೆ ಹೃದಯ ತುಂಬಿದೆ. ಮಹಿಳೆಯರು ಸ್ವಯಂ ಉದ್ಯೋಗದ ಕಡೆಗೆ ಹೆಚ್ಚು ಗಮನ ಹರಿಸಬೇಕು. ತಮ್ಮ ಮಕ್ಕಳ ಭವಿಷ್ಯಕ್ಕೂ ಬುನಾದಿ ಹಾಕಿದಂತಾಗುತ್ತದೆ. ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದು ಯಶಸ್ಸು ಕಂಡಿರುವ ಕೆಲ ಮಹಿಳೆಯರ ಉದಾಹರಣೆ ನೀಡಿದರು. ಸಂಸ್ಥೆಯಲ್ಲಿ ನೂತನವಾಗಿ ಪ್ರವೇಶ ಪಡೆದಿರುವ ಶಿಬಿರಾರ್ಥಿಗಳು ಶ್ರದ್ಧೆಯಿಂದ ತಮ್ಮ ಇಚ್ಛೆಯ ತರಬೇತಿ ಪಡೆದು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ವಿಶೇಷ ತರಬೇತಿ ಕೇಂದ್ರ ಸ್ಥಾಪನೆ: ಕೆನರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಕೆ.ಪಳನಿ ವೇಲು ಮಾತನಾಡಿ, ಕೆನರಾ ಬ್ಯಾಂಕ್‌ ಸ್ಥಾಪನೆಯಾಗಿ 113 ವರ್ಷಗಳಾಗಿದೆ. ನಿರುದ್ಯೋಗಿಗಳ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಜೋಗರದೊಡ್ಡಿ, ಕಾರ್ಕಳ ಮತ್ತು ತಮಿಳುನಾಡಿನ ಕಾರೈಕೋಡ್‌ ಎಂಬ ಸ್ಥಳಗಳಲ್ಲಿ ವಿಶೇಷ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ಉದ್ಯೋಗ ಚಟುವಟಿಕೆಗಳ ಬಗ್ಗೆ ನೆರವು ನೀಡಲಾಗುತ್ತಿದೆ. ಕೆಪಿಜೆ ತರಬೇತಿ ಕೇಂದ್ರದಲ್ಲಿ ಕುಂಬಾರಿಕೆ, ಮರ, ಕಲ್ಲು, ಲೋಕ ಶಿಲ್ಪಗಳ ಕೆತ್ತನೆ ತರಬೇತಿ ನೀಡಲಾಗುತ್ತಿದೆ. ಇಲ್ಲಿಯವರೆಗೆ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಈ ಪೈಕಿ 860ಕ್ಕೂ ಹೆಚ್ಚು ಮಂದಿ ಯಶಸ್ವಿಯಾಗಿ ವೃತ್ತಿನಿರತರಾಗಿದ್ದಾರೆ. ಅನೇಕರು ರಾಜ್ಯ, ರಾಷ್ಟ್ರ ಮಟ್ಟದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ ಎಂದರು.

ಕೆನರಾ ಬ್ಯಾಂಕ್‌ ಶತಮಾನೋತ್ಸವ ಗ್ರಾಮೀಣ ಅಭಿವೃದ್ಧಿ ದತ್ತಿ (ಸಿಬಿಸಿಅಡಿ ಟ್ರಸ್ಟ್‌) ಉಪ ಮಹಾಪ್ರಬಂಧಕ ಪಾರ್ಶ್ವನಾಥ್‌, ಗೌರವ ಸ್ವೀಕರಿಸಿದ ಶಿಲ್ಪಿ ಶರಣ್‌ ಮಾತನಾಡಿದರು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ, ಕೆನರಾ ಬ್ಯಾಂಕ್‌ನ ಮಂಡ್ಯ ಪ್ರಾದೇಶಿಕ ಆಯುಕ್ತ ಎಜಿಎಂ ಕೆ.ವಿ.ಕಾಮತ್‌, ಶೇಷಾದ್ರಿ, ಸಂಸ್ಥೆ ವ್ಯವಸ್ಥಾಪಕ ಎಂ.ನಾರಾಯಣಪ್ಪ, ತರಬೇತು ದಾರ ರವಿ ಪೂಜಾರ್‌ ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ