ಬಿಡುಗಡೆಯಾಗದ ಅನುದಾನ: ಬಡವರು ಅತಂತ್ರ
ಸರ್ಕಾರಿ ಯೋಜನೆಗಳು ಕುಂಟಿತ ,ಮನೆ ನಿರ್ಮಾಣ ಸ್ಥಗಿತ
Team Udayavani, Sep 20, 2020, 2:41 PM IST
ಸಾಂದರ್ಭಿಕ ಚಿತ್ರ
ಕನಕಪುರ: ಸರ್ಕಾರದ ಸಹಾಯಧನ ನಂಬಿಕೊಂಡು ಮನೆ ಕಟ್ಟಲು ಮುಂದಾಗುವ ಮಧ್ಯಮ ಮತ್ತು ಬಡ ವರ್ಗದ ಜನರಿಗೆ ನಿಗದಿತ ಸಮಯಕ್ಕೆ ಅನುದಾನ ಬಿಡುಗಡೆಯಾಗದೆ ತಾಲೂಕಿನ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಸರ್ಕಾರ ಗುಡಿಸಲು ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಆಶ್ರಯಯೋಜನೆ, ಬಸವ ವಸತಿ ಯೋಜನೆ, ಇಂದಿರಾ ಆವಾಸ್ ಯೋಜನೆ ಮತ್ತು ಅಂಬೇಡ್ಕರ್ ಯೋಜನೆಯಡಿಯಲ್ಲಿ ವಿಧವೆಯರು, ಕುಶಲಕರ್ಮಿಗಳು ಮತ್ತು ಅಂಗವಿಕಲರಿಗೆ ಸೇರಿದಂತೆ ಮನೆ ಇಲ್ಲದವರಿಗೆ ಗ್ರಾಮ ಪಂಚಾಯಿತಿ ಮೂಲಕ ಮನೆ ನಿರ್ಮಾಣಕ್ಕೆ ತಳಹದಿ ಗೋಡೆ ಚಾವಣಿ ಸೇರಿದಂತೆ ನಾಲ್ಕು ಹಂತದಲ್ಲಿ ಸಹಾಯಧನ ನೀಡುತ್ತಿದೆ.
7 ವರ್ಷಗಳಿಂದ ಅನುದಾನ ಇಲ್ಲ: ಸರ್ಕಾರದ ಸಹಾಯಧನ ನಂಬಿಕೊಂಡು ಮನೆ ನಿರ್ಮಾಣ ಮಾಡಲು ಮುಂದಾಗಿರುವ ತಾಲೂಕಿನ ಕೆಲವು ಕುಟುಂಬಗಳಿಗೆ ಕಳೆದ 7 ವರ್ಷಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಸರ್ಕಾರದ ಅನುದಾನ ನಂಬಿಕೊಂಡು ಗುಡಿಸಲು ಇದ್ದ ಜಾಗದಲ್ಲಿ ತಳಹದಿ ಹಾಕಿ ಮೊದಲನೆ ಹಂತದ ಅನುದಾನಕ್ಕಾಗಿ ಕಾಯುತ್ತಿರುವವರುಒಂದೆಡೆಯಾದರೆ,ಮತ್ತೂಂದಡೆ ಗೋಡೆ ನಿರ್ಮಾಣ ಮತ್ತು ಚಾವಣಿ ಹಾಕಲು ವಿವಿಧ ಹಂತದ ಅನುದಾನಕ್ಕಗಿ ಕಾಯುತ್ತಿದ್ದಾರೆ.
16,313 ಮನೆ ನಿರ್ಮಾಣದ ಗುರಿ: ಇರುವ ನಿವೇಶನದಲ್ಲೇ ಮನೆ ಕಟ್ಟಲು ಮುಂದಾಗಿರುವ ಕೆಲವರಿಗೆ ಮನೆ ಪೂರ್ಣಗೊಳ್ಳದೆ, ವಾಸಕ್ಕೆ ಮನೆ ಇಲ್ಲದಂತಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನೂ ಕಲವು ನಿರ್ಗತಿಕ ಕುಟುಂಬಗಳು ಬಾಡಿಗೆ ಕಟ್ಟಲು ಹಣವಿಲ್ಲದೆ ಸಂಬಂಧಿಕರ ಖಾಲಿ ಜಾಗದಲ್ಲಿ ತಾತ್ಕಾಲಿಕ ಗುಡಿಸಲು ನಿರ್ಮಾಣ ಮಾಡಿಕೊಂಡು ಅತಂತ್ರ ಸ್ಥಿತಿಯಲ್ಲಿ ಬದುಕುವ ಪರಿಸ್ಥಿತಿ ಎದುರಾಗಿದೆ.
ಕೆಲವರು ವಾಸಕ್ಕೆ ಮನೆ ಇಲ್ಲದೆ, ಸರ್ಕಾರದ ಅನುದಾನ ಕಾಯದೆ ಸಾಲ ಮಾಡಿ ಮನೆ ಕಟ್ಟಿಕೊಂಡು ಕೋವಿಡ್‌ನಿಂದಾಗಿ ಸಾಲ ತೀರಿಸಲಾಗದೆ ಹೆಣಗಾಡುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳಿಂದ ತಾಲೂಕಿನ 43 ಗ್ರಾಮ ಪಂಚಾಯ್ತಿಗಳಿಗೆ 16,313 ಮನೆ ನಿರ್ಮಾಣದ ಗುರಿ ನೀಡಲಾಗಿತ್ತು.
7 ಕೋಟಿ ಅನುದಾನ ಬರಬೇಕಿದೆ: ಮನೆ ನಿರ್ಮಾಣಕ್ಕೆ ಅರ್ಜಿಸಲ್ಲಿಸಿರುವ 935 ಕುಟುಂಬಗಳು ಸರ್ಕಾರದ ಅನುದಾನಕ್ಕೆ ಬೇಸತ್ತು ಕಾಮಗಾರಿಯನ್ನೇ ಆರಂಭಿಸಿಲ್ಲ. ಒಟ್ಟಾರೆಯಾಗಿ ತಾಲೂಕಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅನುದಾನದಲ್ಲಿ 43 ಗ್ರಾಮ ಪಂಚಾಯ್ತಿಗಳಿಂದ ನಿರ್ಮಾಣ ಮಾಡಿಕೊಂಡಿರುವ ಮನೆಗಳಿಗೆ 7,98,92,850 ಕೋಟಿ ಅನುದಾನ ಬಿಡುಗಡೆಯಾಗಬೇಕಿದೆ. ವರ್ಷಕ್ಕೊಮ್ಮೆ ಬದಲಾಗುತ್ತಿರುವ ಸರ್ಕಾರಗಳಿಂದ ಅನುದಾನಬಿಡುಗಡೆಯಾಗದೆ ಪರಿತಪಿಸುತ್ತಿರುವ ಜನರ ನೆರವಿಗೆ ಸರ್ಕಾರ ಬರಬೇಕಿದೆ.
ವಸತಿ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳಿಗೆ ವರ್ಷಗಳಿಂದ ಹಣ ಬಿಡುಗಡೆಯಾಗದೆ, ಮನೆಗಳು ಪೂರ್ಣಗೊಂಡಿಲ್ಲ. ಕೋವಿಡ್‌ನಿಂದಾಗಿ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗಿದೆ. ಹಾಗಾಗಿ ಫಲಾನುಭವಿಗಳು ಆತಂಕ ಪಡುವುದು ಬೇಡ, ಸರ್ಕಾರ ಆದಷ್ಟು ಬೇಗ ಹಣ ಬಿಡುಗಡೆ ಮಾಡಲಿದೆ. –ಶಿವರಾಮು, ತಾಪಂ ಇಒ
– ಉಮೇಶ್.ಬಿ.ಟಿ