ನನ್ನ ಸ್ಪರ್ಧೆ ಬಗ್ಗೆ ಪಕ್ಷದಿಂದ ಸೂಕ್ತ ನಿರ್ಧಾರ: ಬಿ.ವೈ. ವಿಜಯೇಂದ್ರ
Team Udayavani, Sep 12, 2022, 8:29 PM IST
ಶಿವಮೊಗ್ಗ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ನಾನು ಸ್ಪ ರ್ಧಿಸುವ ಬಗ್ಗೆ ಪಕ್ಷ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಹಲವಾರು ಕಾರ್ಯಕ್ರಮ ನಡೆಸಲಾಗುತ್ತಿದೆ. ಸೊರಬದಲ್ಲೂ ಶೀಘ್ರ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಬಿಜೆಪಿ ಕಾರ್ಯಕ್ರಮ ಹಾಗೂ ಆಡಳಿತ ನೋಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಹತಾಶೆಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಅವರಿಗೆ ವಿಧಾನಸಭೆಯಲ್ಲಿ ಪಕ್ಷದ ನಾಯಕರು ಉತ್ತರ ನೀಡಲಿದ್ದಾರೆ.
ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಸೇರಿ ಅನೇಕ ನಾಯಕರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ಇದರಿಂದಾಗಿ ಪಕ್ಷವೇ ದೇಶದಲ್ಲಿ ಅಳಿಸಿ ಹೋಗುವ ಸ್ಥಿತಿಗೆ ಬಂದಿದೆ. ಆದರೂ ಬಿಜೆಪಿಯನ್ನು ಟೀಕಿಸುತ್ತ ಅ ಧಿಕಾರ ಹಿಡಿಯುವ ಹಗಲುಗನಸು ಕಾಣುತ್ತಿದ್ದಾರೆ. ಇದು ಫಲಿಸಲ್ಲ ಎಂದರು.