

Team Udayavani, Mar 13, 2024, 9:04 PM IST
ಶಿವಮೊಗ್ಗ : ಬಿಜೆಪಿ ಎರಡನೇ ಪಟ್ಟಿ ಪ್ರಕಟವಾಗುತ್ತಿದ್ದಂತೆ ಹಾವೇರಿ ಕ್ಷೇತ್ರಕ್ಕೆ ಬಸವರಾಜ್ ಬೊಮ್ಮಾಯಿ ಅವರ ಹೆಸರು ಘೋಷಣೆಯಾದುದನ್ನು ಕಂಡು ಮಾಜಿ ಸಿಎಂ ಕೆ.ಎಸ್. ಈಶ್ವರಪ್ಪ ಅವರ ಕುಟುಂಬ ಕಣ್ಣೀರಿಟ್ಟ ಬಗ್ಗೆ ವರದಿಯಾಗಿದೆ.
ಟಿಕೆಟ್ ಪ್ರಕಟವಾಗುತ್ತಿದ್ದಂತೆ ಹಾವೇರಿ ಟಿಕೆಟ್ ಗಾಗಿ ತೀವ್ರ ಪ್ರಯತ್ನ ನಡೆಸಿದ್ದ ಕೆ.ಈ.ಕಾಂತೇಶ್ ಇತರ ಬೆಂಬಲಿಗರೊಂದಿಗೆ ಈಶ್ವರಪ್ಪ ಅವರು ಕಾರಿನಲ್ಲಿ ಹೊರಟಿದ್ದಾರೆ. ಫೋನ್ ಕರೆಯೊಂದು ಬರುತ್ತಿದ್ದಂತೆ ತುರ್ತಾಗಿ ಈಶ್ವರಪ್ಪ ಮತ್ತು ಕಾಂತೇಶ್ ಅವರು ತೆರಳಿದ್ದಾರೆ. ಅವರ ಮುಖದಲ್ಲಿ ತೀವ್ರ ಬೇಸರ ಮನೆ ಮಾಡಿತ್ತು. ಮನೆಯಿಂದ ಹೊರಡುತ್ತಿದ್ದಂತೆ, ಮಾಧ್ಯಮದವರನ್ನು ಹೊರಗೆ ಹೋಗಿ ಎಂದ ಕುಟುಂಬ ಸದಸ್ಯರು ಕೇಳಿಕೊಂಡಿದ್ದಾರೆ. ಕಾಂತೇಶ್ ಪತ್ನಿ ಸೇರಿ ಈಶ್ವರಪ್ಪ ಕುಟುಂಬ ಕಣ್ಣೀರು ಹಾಕುತ್ತಿರುವ ದೃಶ್ಯವೂ ಕಂಡು ಬಂದಿರುವ ಬಗ್ಗೆ ವರದಿಯಾಗಿದೆ.
ಬಸವರಾಜ್ ಬೊಮ್ಮಾಯಿ ಅವರು ಶಿಗ್ಗಾಂವ ಕ್ಷೇತ್ರದ ಹಾಲಿ ಶಾಸಕರಾಗಿದ್ದರೂ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಕಾಂತೇಶ್ ಅವರು ಟಿಕೆಟ್ ಗಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮೂಲಕವೂ ಒತ್ತಡ ಹೇರಿದ್ದರು. ಟಿಕೆಟ್ ಕೊಡಿಸುವ ಪ್ರಯತ್ನ ಮಾಡುವುದಾಗಿಯೂ ಯಡಿಯೂರಪ್ಪ ಅವರು ಬಹಿರಂಗ ಹೇಳಿಕೆ ನೀಡಿದ್ದರು.
ಇನ್ನೊಂದೆಡೆ ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರೂ ಹಾವೇರಿ ಕ್ಷೇತ್ರದ ಟಿಕೆಟ್ ಗಾಗಿ ಲಾಭಿ ನಡೆಸಿದ್ದರು. ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರು ಕಣದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ ಬಳಿಕ, ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಕಾಂತೇಶ್ ಅವರು ಹಾವೇರಿ ಕ್ಷೇತ್ರದ ಮೇಲೆ ಕಣ್ಣಿಟ್ಟು ಚುನಾವಣೆ ಸಿದ್ಧತೆಯನ್ನೂ ನಡೆಸಿದ್ದರು.
Ad
You seem to have an Ad Blocker on.
To continue reading, please turn it off or whitelist Udayavani.