ಸರ್ಕಾರದಲ್ಲಿ ಹಣವಿಲ್ಲವೆಂದರೆ ಶ್ವೇತಪತ್ರ ಹೊರಡಿಸಲಿ: ಪರಮೇಶ್ವರ್ ಆಗ್ರಹ
Team Udayavani, Jan 17, 2021, 4:15 PM IST
ಶಿವಮೊಗ್ಗ: ಸಿಎಂ ಯಡಿಯೂರಪ್ಪ ಆಡಳಿತದಲ್ಲಿ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ನಮ್ಮ ಕಾಂಗ್ರೆಸ್ ಶಾಸಕರುಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಸರ್ಕಾರದಲ್ಲಿ ಹಣ ಇಲ್ಲ ಎಂದರೆ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಮಾಜಿ ಡಿಸಿಎಂ ಡಾ ಜಿ.ಪರಮೇಶ್ವರ್ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಜೆಡಿಎಸ್ ಜೊತೆ ಯಾವ ಹೊಂದಾಣಿಕೆ ಅಗಿದಿಯೋ ಗೊತ್ತಿಲ್ಲ. ಅದ್ರೇ ನಮಗೆ ಬಿಡುಗಡೆ ಅಗುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ, ಮೈತ್ರಿ ಸರ್ಕಾರದಲ್ಲಿ ಕೊಟ್ಟ ಹಣವನ್ನು ಸಹ ವಾಪಾಸ್ ತೆಗೆದುಕೊಳ್ಳುತ್ತಿದ್ದಾರೆ. ಸಚಿವ ಈಶ್ವರಪ್ಪ ನನ್ನ ಕ್ಷೇತ್ರದಲ್ಲೇ ನೂರು ಕೋಟಿ ಹಣ ವಾಪಾಸ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ರೈತರು- ಜನರ ಅಭಿವೃದ್ದಿಗೆ ಯಡಿಯೂರಪ್ಪ ಯಾವುದೇ ರೀತಿ ಹಿಂದೆ ಬಿದ್ದಿಲ್ಲ: ಅಮಿತ್ ಶಾ
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಿದೆ. ಕಾಂಗ್ರೆಸ್ ಪಕ್ಷ ಆಹಾರ ಭದ್ರತೆ ಕಾಯ್ದೆಯ ಜೊತೆಗೆ ಹಸಿರು ಕ್ರಾಂತಿಯನ್ನು ದೇಶದಲ್ಲಿ ಜಾರಿ ಮಾಡಿತ್ತು. ಈಗ ಕೇಂದ್ರ ಸರ್ಕಾರ ಅದಕ್ಕೆ ವಿರುದ್ಧವಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿದೆ. ಕಾಂಗ್ರೆಸ್ ಪಕ್ಷ ರೈತರ ಜೊತೆ ನಿಲ್ಲಲಿದ್ದು, ಅವರ ಹೋರಾಟದಲ್ಲಿ ಜೊತೆಯಾಗಿ ನಿಲ್ಲಲಿದೆ. ಜ.20 ರಂದು ಕಾಂಗ್ರೆಸ್ ಹೋರಾಟ ನಡೆಸಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದೆ ಎಂದು ಪರಮೇಶ್ವರ್ ಹೇಳಿದರು.