45 ವರ್ಷ ರಾಷ್ಟ್ರೀಯ ಪಕ್ಷದ ಕಾರ್ಯಕರ್ತನಾಗಿದ್ದಕ್ಕೆ ಬಿಎಸ್ ವೈಗೆ ತೃಪ್ತಿಯಿದೆ: ರಾಘವೇಂದ್ರ
Team Udayavani, Jul 31, 2021, 2:58 PM IST
ಶಿವಮೊಗ್ಗ: ಯಡಿಯೂರಪ್ಪ ಅವರಿಗೆ ತೃಪ್ತಿಇರುವುದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿದ್ದರಿಂದ ಅಲ್ಲ. ಬದಲಿಗೆ ರಾಷ್ಟ್ರೀಯ ಪಕ್ಷವೊಂದರಲ್ಲಿ 45 ವರ್ಷಗಳ ಕಾಲ ಕಾರ್ಯಕರ್ತನಾಗಿದ್ದಕ್ಕೆ ಅವರಿಗೆ ತೃಪ್ತಿಯಿದೆ ಎಂದು ಬಿಎಸ್ ವೈ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಸಾಮಾನ್ಯ ಕಾರ್ಯಕರ್ತರಾಗಿಯೇ ಕೆಲಸ ಮಾಡಲಿದ್ದಾರೆ. ಯಡಿಯೂರಪ್ಪ ಹೆಸರು ಹಾಗೂ ಶಕ್ತಿ ಇದೆಯಲ್ಲಾ ಅದೇ ಅವರಿಗೆ ಸಾಕು ಎಂದು ಹೇಳಿದರು.
ಇದನ್ನೂ ಓದಿ:ಬೊಮ್ಮಾಯಿ ಅವರನ್ನು ನಾವೇನು ರಬ್ಬರ್ ಸ್ಟ್ಯಾಂಪ್ ಎಂದಿಲ್ಲ: ಸಿದ್ದರಾಮಯ್ಯ
ಯಡಿಯೂರಪ್ಪ ಅವರಿಗೆ ನಮ್ಮ ಸಂಘಟನೆ ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ಇಂದು ದಕ್ಷಿಣ ಭಾರತದಲ್ಲಿ ಸಂಘಟನೆಗೆ ಎಲ್ಲ ರೀತಿಯ ಶಕ್ತಿ ಇದೆ. ರಾಷ್ಟ್ರೀಯ ಪಕ್ಷದ ರಾಜಕಾರಣ ನಿಂತ ನೀರಲ್ಲ. ಮನೆಯ ಹಿರಿಯರು ಒಂದು ಗಿಡವನ್ನು ನೆಟ್ಟರೆ ಅದರ ಫಸಲು ಮುಂದಿನ ಪೀಳಿಗೆಗೆ ಸಿಗುತ್ತದೆ. ಅದೇ ರೀತಿ ಯಡಿಯೂರಪ್ಪ ಅವರೂ ಚಿಂತನೆ ಮಾಡಿ ಯುವ ಪ್ರತಿಭೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ರಾಘವೇಂದ್ರ ಹೇಳಿದರು.