ಪವತಿ ಖಾತೆ ಕೆಲಸ ಆಂದೋಲನವಾಗಲಿ: ಡೀಸಿ
Team Udayavani, Nov 20, 2022, 4:42 PM IST
ಮಧುಗಿರಿ: ಜಿಲ್ಲಾದ್ಯಂತ ರೈತರ ಪವತಿ ಖಾತೆಯ ಕೆಲಸ ಆಂದೋಲನದ ರೂಪ ಪಡೆದು ಶೀಘ್ರವಾಗಿ ಇತ್ಯರ್ಥ ಮಾಡಲು ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದರು.
ತಾಲೂಕಿನ ಗಿಡದಾಗಲಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಪವತಿ ಖಾತೆ ಕಾರ್ಯಕ್ಕೆ ಚುರುಕು ನೀಡಬೇಕು. ಜಿಲ್ಲೆಯಾದ್ಯಂತ ಕಂದಾಯ ಗ್ರಾಮವಾಗಿಸಲು 502 ಬೇಚಾರ್ ಗ್ರಾಮ ಗುರುತಿಸಿದ್ದು, 195 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಿದೆ.
ಅನುಮತಿ ಪಡೆದು ಘೋಷಣೆ: ತಾಲೂಕಿನಲ್ಲಿ 47 ಗ್ರಾಮ ಗುರುತಿಸಿದ್ದು 26 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಿದ್ದೇವೆ. ಕಂದಾಯ ಗ್ರಾಮವಾಗಿಸಲು ಯಾವುದೇ ಜನ ವಿರೋಧಿ ಕ್ರಮಕ್ಕೆ ಮುಂದಾಗದೇ ಜನರ ಅನುಮತಿ ಪಡೆದು ಘೋಷಿಸಲಾಗುವುದು ಎಂದರು.
ಈ ಗ್ರಾಮದಲ್ಲೂ 25 ಪವತಿ ಖಾತೆಯ ಅರ್ಜಿಯಿದ್ದು ಇತ್ಯರ್ಥಗೊಳಿಸಲಾಗುವುದು. ಜಿಲ್ಲೆಯಾ ದ್ಯಂತ ಇಂತಹ 3,200 ಗ್ರಾಮಗಳಿದ್ದು ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಸರ್ಕಾರಿ ಜಾಗ, ಗೋಮಾಳ, ಸ್ಮಶಾನ ಒತ್ತುವರಿಯಾಗಿದ್ದರೆ ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗಿ ಎಂದರು.
ಗ್ರಾಮದ ಸಂಸ್ಕೃತಿಗೆ ಗೌರವ : ಜಿಲ್ಲಾಧಿಕಾರಿಗಳು ಬಂದಾಗ ತೋರಣ ಕಟ್ಟಿ ಎತ್ತಿನಗಾಡಿಯಲ್ಲಿ ಹಾರಹಾಕಿ ಮೆರವಣಿಗೆ ಮಾಡುವುದು ಆಡಂಬರದ ಕೆಲಸವಲ್ಲ. ಇದು ಗ್ರಾಮಸ್ಥರು ತಮ್ಮ ಗ್ರಾಮದ ಸಂಸ್ಕೃತಿಯನ್ನು ನಮಗೆ ಪರಿಚಯಿಸಿಕೊಡುವ ಕ್ರಿಯೆ. ಅಧಿಕಾರಿಗಳು ಬೇರೆ ರಾಜ್ಯದಿಂದ ಬಂದರೂ ಜನಪರ ಆಡಳಿತ ನೀಡಲು ಕನ್ನಡ ಕಲಿಯಲೇಬೇಕು ಎಂದರು.
ಕನ್ನಡ ಕಲಿತ ರಿಷಿ ಆನಂದ್ : ಮಧುಗಿರಿಯ ಉಪವಿಭಾಗಾಧಿಕಾರಿಯಾಗಿ ಕಳೆದ ವಾರ ಅಧಿಕಾರ ವಹಿಸಿಕೊಂಡ ಜಾರ್ಖಂಡ್ ಮೂಲದ ಐಎಎಸ್ ಅಧಿಕಾರಿ ರಿಷಿ ಆನಂದ್ ಹಿಂದಿಯಲ್ಲಿ ಮಾತನಾಡಿ ದ್ದರು. ಆದರೆ ಕೇವಲ ವಾರದಲ್ಲೇ ಕನ್ನಡ ಕಲಿತು ಮಾತ ನಾಡಿದ್ದು ಎಲ್ಲರೂ ಆಶ್ವರ್ಯಚಕಿತರಾದರು. ಇದೊಂದು ಜನಪರ ಕಾರ್ಯಕ್ರಮ ಆಗಿದೆ. ಎಲ್ರೂ ಇದ್ರ ಉಪಯೋಗ್ ಪಡಯ್‌ಬೇಕು. ಯಾವ್ ಸಮಸ್ಯೆ ಇದ್ರು ನನಗೆ ತಿಳಿಸಿ ಎಂದು ಮಾತು ಮುಗಿಸಿದರು.
ತಹಶೀಲ್ದಾರ್ ಸುರೇಶಾಚಾರ್ ಮಾತನಾಡಿದರು. ಎಸ್ಪಿ ರಾಹುಲ್ ಕುಮಾರ್ ಶಹಾಪುರ್, ಎಡಿಸಿ ಚನ್ನಬಸಪ್ಪ, ಡಿವೈಎಸ್ಪಿ ವೆಂಕಟೇಶ್‌ನಾಯ್ಡು, ಗ್ರಾಪಂ ಅಧ್ಯಕ್ಷೆ ಜ್ಯೋತಿ, ಪಿಡಿಒ, ಜುಂಜೇಗೌಡ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯಾಧಿಕಾರಿ ಚೆನ್ನವೀರಪ್ಪ, ಗ್ರಾಮ ಲೆಕ್ಕಿಗರಾದ ಹರೀಶ್, ರಾಮಗಿರಿ, ಶಶಿ, ರಮೇಶ್, ಪ್ರಸನ್ನ, ಶ್ರೀನಿವಾಸ್, ಗ್ರಾಮಸ್ಥರು ಜೊತೆಗಿದ್ದರು.
ಬಗರ್‌ಹುಕುಂ ಸಮಿತಿಯಿಂದ ಹಲವು ತಪ್ಪು: ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಕ್ಷೇತ್ರದ ಹಿಂದಿನ ಬಗರ್‌ಹುಕುಂ ಸಮಿತಿಯಿಂದ ಹಲವು ತಪ್ಪುಗಳಾಗಿದ್ದು, ರೈತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕು. ಮಾರೀಪಾಳ್ಯ ಗ್ರಾಮವನ್ನು ಕಂದಾಯ ಗ್ರಾಮವಾಗಿಸುವಲ್ಲಿ ಗೊಂದಲವಿದ್ದು, ಸರಿಪಡಿಸಬೇಕಿದೆ ಎಂದರು.
900 ಜನಸಂಖ್ಯೆಯ ಈ ಗಿಡದಾಗಲಹಳ್ಳಿ ಶಾಲೆಗೆ ರಂಗಭೂಮಿ, ದೇಗುಲದ ಅಭಿವೃದ್ಧಿ, ಸಿಸಿ ರಸ್ತೆ ಹಾಗೂ ನೂತನ ಶಾಲಾ ಕೊಠಡಿ ಸೇರಿ 30 ಲಕ್ಷಕ್ಕೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು.