
ಮರಾಠ ನಿಗಮ ರದ್ದಿಗೆ ಆಗ್ರಹಿಸಿ ಪ್ರತಿಭಟನೆ
Team Udayavani, Dec 6, 2020, 7:44 PM IST

ಕುಣಿಗಲ್: ಮರಾಠ ನಿಗಮ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ ಹಿನ್ನೆಲೆ ವಿವಿಧ ಸಂಘಟನೆಳಿಂದ ಕುಣಿಗಲ್ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ರಾಜಕೀಯ ಲಾಭಕ್ಕಾಗಿ ಏಳು ಕೋಟಿ ಕನ್ನಡಿಗರ ಹಿತವನ್ನು ಬಲಿಕೊಟ್ಟು ಮರಾಠ ನಿಗಮ ಮಾಡಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿ ಡಾ.ರಾಜ್ ಸಂಘದ ತಾಲೂಕು ಅಧ್ಯಕ್ಷ ರಂಗಸ್ವಾಮಿ, ರೈತ ಸಂಘದಜಿಲ್ಲಾಧ್ಯಕ್ಷಆನಂದ್‌ಪಟೇಲ್,ಕರವೇ ಅಧ್ಯಕ್ಷ ಮಂಜುನಾಥ್, ಕಜಾವೇ ಅಧ್ಯಕ್ಷ ಶಂಕರ್ ಅವರ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನೆಡೆಸಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ರಾಜಕೀಯ ಸ್ವಾರ್ಥಕ್ಕೆ ನಿಗಮ ಸ್ಥಾಪನೆ: ಡಾ.ರಾಜ್ ಸಂಘದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಮಹಾರಾಷ್ಟ್ರವು ಏಕೀಕರಣ ಸಮಿತಿಯ ಹೆಸರಿನಲ್ಲಿ ಕರ್ನಾಟಕದ ವಿರುದ್ಧ ಹಲವು ಭಾರಿ ಪ್ರತಿಭಟನೆ ನಡೆಸಿ ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ.ಸಂಗೋಳ್ಳಿರಾಯಣ್ಣನ ವಿಗ್ರಹ ಪ್ರತಿಷ್ಠಾಪನೆ,ಮಹಾಜನ್ ವರದಿ ಜಾರಿಗೆ ಅಡ್ಡಗಾಲು ಹಾಕಿದೆ, ಮಹದಾಯಿ ನೀರಿನ್ನು ನಮ್ಮ ಗಡಿಭಾಗದ ಜನರಿಗೆ ನೀಡುತ್ತಿಲ್ಲ, ಈಗಿರುವಾಗ ಸಿಎಂ ಯಡಿಯೂರಪ್ಪ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮರಾಠ ನಿಗಮ ಮಾಡಿರುವುದನ್ನು ಖಂಡನೀಯ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್‌ಪಟೇಲ್ ಮಾತನಾಡಿ, ಕೇಂದ್ರ ಎನ್‌ಡಿಎ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿದೆ. ಇದನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ಲಕ್ಷಾಂತರ ಮಂದಿ ರೈತರು ಶಾಂತಿಯುತವಾಗಿಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ,ಇದನ್ನು ಹತ್ತಿಕ್ಕಲು ರೈತರ ಮೇಲೆ ಲಾಠಿಚಾರ್ಜ್ ಮಾಡುವ ಮೂಲಕ ದೌರ್ಜನ್ಯ, ದಬ್ಟಾಳಿಕೆ ಎಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದಿಂದ ಜನರನ್ನು ಒಡೆದು ಆಳುವ ನೀತಿ: ಪುರಸಭಾ ಮಾಜಿ ಅಧ್ಯಕ್ಷ ರೆಹಮಾನ್ ಷರೀಫ್ ಮಾತನಾಡಿ, ಎಲ್ಲಾ ಜನಾಂಗದಲ್ಲೂ ಬಡವರಿದ್ದಾರೆ, ಅವರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯವಾಗುವಂತ ನಿಗಮ ಸ್ಥಾಪಿಸದೇ ಜಾತಿಗೊಂದು, ಭಾಷೆಗೊಂದು ನಿಗಮ ಮಾಡುವ ಮೂಲಕ ರಾಜ್ಯದ ಜನರನ್ನು ಹೊಡೆದು ಹಾಳುವಂತ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಹೋರಾಟದ ಎಚ್ಚರಿಕೆ: ಕರವೇ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಕನ್ನಡ ನುಡಿ, ಭಾಷೆ, ಸಂಸ್ಕೃತಿ, ನೆಲ, ಜಲಕ್ಕಾಗಿ ಹೋರಾಟ ಮಾಡುವಕನ್ನಡ ಪರ ಸಂಘಟನೆಗಳನ್ನು ನಕಲಿ ಹೋರಾಟಗಾರರು ಹಾಗೂ ಹಿಂದುವಿರೋಧಿಗಳು ಎಂದು ಬಿಜೆಪಿ ಶಾಸಕರು ಬಾಯಿಗೆ ಬಂದತ್ತೆ ಮಾತನಾಡುತ್ತಿದ್ದಾರೆ, ಹಾಗಾದರೆ ಸಿಎಂ ಯಡಿಯೂರಪ್ಪ ಪುರಸಭಾ ಸದಸ್ಯರಾಗಿ ನಿಂದಲ್ಲೂ ಈವರೆಗೂ ಹೋರಾಟ ನಡೆಸಿಕೊಂಡು ಬಂದು ಮುಖ್ಯಮಂತ್ರಿಯಾಗಿದ್ದಾರೆ, ಅವರನ್ನು ನಕಲಿ ಹೋರಾಟಗಾರರು ಅನ್ನುತ್ತೀರ ಎಂದು ಪ್ರಶ್ನಿಸಿದರು,
ಯಡಿಯೂರಪ್ಪನವರೇ ನಿಮ್ಮ ಶಾಸಕರಿಗೆ ಬುದ್ಧಿ ಹೇಳಿ ಅವರ ಬಾಯಿಗೆ ಬೀಗ ಹಾಕಿ ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಂತರ ಪ್ರಭಾರ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರಿಗೆಮನವಿಸಲ್ಲಿಸಿದರು.ಪ್ರತಿಭಟನೆಯಲ್ಲಿ ಕಸಾಪ ಅಧ್ಯಕ್ಷ ಕ.ಚ.ಕೃಷ್ಣಪ್ಪ, ಮಾಜಿ ಅಧ್ಯಕ್ಷ ದಿನೇಶ್‌ಕುಮಾರ್ ಹಾಗೂ ವಿವಿಧ ಸಂಘದ ಅಧ್ಯಕ್ಷರಾದ ಎಸ್.ಆರ್.ಚಿಕ್ಕಣ್ಣ, ನಗುತಾ ರಂಗನಾಥ್, ಶಿವಣ್ಣ, ಕೋಟೆ ಶ್ರೀನಿವಾಸ್, ವೆಂಕಟೇಶ್‌ಬಾಬು,ಧನಂಜಯ, ಶಿವಕುಮಾರ್, ಎಸ್.ಟಿ.ಕೃಷ್ಣರಾಜು ಇತರರುಇದ್ದರು.
ಟಾಪ್ ನ್ಯೂಸ್
