13,940 ಮೊಳೆಗಳಲ್ಲಿ ಕಲಾಕೃತಿ; ಇಂಡಿಯಾ ಬುಕ್ ಆಫ್ ರೆರ್ಕಾಡ್ಸ್ ಗೆ ದಾಖಲಾದ ಕಾಪುವಿನ ಶಶಾಂಕ್
Team Udayavani, Jun 23, 2022, 1:12 PM IST
ಕಾಪು: ಕೇವಲ ಮೊಳೆಗಳನ್ನು ಬಳಸಿ ಆನೆಯ ಕಲಾಕೃತಿಯನ್ನು ರಚಿಸುವ ಮೂಲಕ ಕಾಪುವಿನ ಪ್ರತಿಭಾನ್ವಿತ ಕಲಾವಿದ ಶಶಾಂಕ್ ಎಸ್. ಸಾಲಿಯಾನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದ್ದಾರೆ.
ಗುರುವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಲಾ ಪ್ರೋತ್ಸಾಹಕ ಗುರುಚರಣ್ ಪೊಲಿಪು, ಗ್ರಾಮೀಣ ಪ್ರತಿಭೆಯಾಗಿರುವ ಶಶಾಂಕ್ ಸಾಲಿಯಾನ್ ಅವರು ಕೇರಳದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಗರ್ಭಿಣಿ ಆನೆಯ ಸಾವಿಗೆ ಮರುಕ ಪಟ್ಟು ಮೊಳೆಗಳ ಜೋಡಣೆಯೊಂದಿಗೆ ಆನೆಯ ಕಲಾಕೃತಿ ರಚಿಸಿದ್ದಾರೆ. ಇದೊಂದು ಅಪೂರ್ವ ಸಾಧನೆಯಾಗಿದ್ದು, ಇವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವುದು ಕಾಪುವಿನ ಜನತೆಗೆ ಹೆಮ್ಮೆಯನ್ನುಂಟು ಮಾಡಿದೆ ಎಂದರು.
ಇದನ್ನೂ ಓದಿ:Watch: ಅಯೋಧ್ಯೆ ನದಿಯಲ್ಲಿ ಸ್ನಾನ- ಪತ್ನಿಗೆ ಕಿಸ್ ಕೊಟ್ಟ ಪತಿಗೆ ಗುಂಪಿನಿಂದ ಥಳಿತ!
ಕಲಾವಿದ ಶಶಾಂಕ್ ಎಸ್. ಸಾಲಿಯಾನ್ ಮಾತನಾಡಿ, ನನ್ನ ಈ ಸಾಧನೆಗೆ ತಂದೆ-ತಾಯಿಯ ಪ್ರೋತ್ಸಾಹವೇ ಮುಖ್ಯ ಕಾರಣವಾಗಿದೆ. ಸ್ನೇಹಿತರಾದ ಧೀರಜ್, ಸೌರಭ್, ಗೌರವ್, ಮನೀಶ್, ಶಶ್ಮಿತಾ ಮತ್ತು ಜೋಸ್ವಿನ್ ಚಿತ್ರ ಬಿಡಿಸಲು ಸಹಕಾರ ನೀಡಿದ್ದು, ಸುಶಾಂತ್ ಶೆಟ್ಟಿ, ಶಶ್ಮಿತಾ ಸಾಲಿಯಾನ್, ಐಶ್ವರ್ಯ ಮತ್ತು ಶ್ರೀಶ ಶೆಟ್ಟಿ ಪ್ರಾಯೋಜಕತ್ವ ವಹಿಸಿದ್ದಾರೆ ಎಂದರು.
ಆನೆ ಕಲಾಕೃತಿ ರಚನೆ ಹೇಗೆ: ಶಶಾಂಕ್ ಸಾಲಿಯಾನ್ ಅವರು ಕೇವಲ ಮೊಳೆಗಳನ್ನು ಬಳಸಿಕೊಂಡು 5 x 4 ಫೋಮ್ ಶೀಟ್‌ನಲ್ಲಿ 4 x 3.8 ಸೈಜ್‌ನ ಆನೆಯ ಚಿತ್ರ ಬಿಡಿಸಿದ್ದು ಇದಕ್ಕಾಗಿ 13,940 ಮೊಳೆಗಳನ್ನು ಬಳಸಿದ್ದಾರೆ. ಆಳೆತ್ತರದ ಫೋಮ್ ಶೀಟ್‌ನಲ್ಲಿ ಮೊಳೆಗಳನ್ನು ಬಳಸಿಕೊಂಡು ರಚಿಸಲಾದ ಆನೆಯ ಚಿತ್ರವನ್ನು ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಶ್ ಮತ್ತು ಬಣ್ಣಗಳನ್ನು ಉಪಯೋಗಿಸದೇ ಬಿಡಿಸಿರುವ ಕಲಾಕೃತಿಯ ಚಿತ್ರೀಕರಣದ ದಾಖಲೆಗಳನ್ನು ಆನ್ ಲೈನ್ ಮೂಲಕವಾಗಿ ಕಳುಹಿಸಿದ್ದು, ಅದನ್ನು ಪರೀಕ್ಷಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ದಾಖಲೆ ಪ್ರಮಾಣ ಪತ್ರ ರವಾನಿಸಿದೆ.
ಕಾಪು ತಾಲೂಕಿನ ಉಳಿಯಾರಗೋಳಿ ನಿವಾಸಿ ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ ಮತ್ತು ಪುಷ್ಪಾ ಸಾಲಿಯಾನ್ ದಂಪತಿಗಳ ಪುತ್ರನಾಗಿರುವ ಶಶಾಂಕ್ ಎಸ್. ಸಾಲಿಯಾನ್ ಅವರು ಬಿ. ಕಾಂ. ಪದವೀಧರನಾಗಿದ್ದು ಖಾಸಗಿ ಕಾರ್ಪೋರೆಟ್ ಕಂಪೆನಿಯೊಂದರಲ್ಲಿ ನೌಕರಿಯಲ್ಲಿದ್ದಾರೆ. ಪೈಂಟಿಂಗ್, ಕ್ಲೇ ಮಾಡೆಲಿಂಗ್, ವಾಟರ್ ಕಲರ್, ಆಕ್ರಾಲಿಕ್ ಹೀಗೆ ವಿಭಿನ್ನ ಕಲಾ ಪ್ರಕಾರಗಳಲ್ಲಿ ಚಿತ್ರ ಬಿಡಿಸುವ ಮೂಲಕವಾಗಿ ತನ್ನ ಪ್ರತಿಭೆಯನ್ನು ತೋರಿಸುತ್ತಿರುವ ಅವರು ಮೊಳೆಯಲ್ಲಿ ಚಿತ್ರ ಬಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.