ರಸ್ತೆಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ: ಸಚಿವ ಅಂಗಾರ
ಮಳೆಗಾಲ ಮುನ್ನೆಚ್ಚರಿಕೆ: ಉಭಯ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ
Team Udayavani, May 24, 2022, 12:30 AM IST
ಉಡುಪಿ: ಮಳೆಗಾಲದಲ್ಲಿ ಜಿಲ್ಲೆಯ ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಲೋಕೋಪಯೋಗಿ ರಸ್ತೆ, ಜಿ.ಪಂ. ರಸ್ತೆ, ಗ್ರಾಮೀಣ ರಸ್ತೆಗಳು ಸೇರಿದಂತೆ ಯಾವುದೇ ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಶೀಘ್ರವೇ ಚರಂಡಿಗಳನ್ನು ಸ್ವಚ್ಛಗೊಳಿಸಿ, ಯಾವುದೇ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಾನ್ಸೂನ್ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಸಭೆ ನಡೆಸಿ ಅವರು ಈ ಸೂಚನೆ ನೀಡಿದ್ದಾರೆ.
ಮಳೆಗಾಲದಲ್ಲಿ ಕುಂದಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಯಾಗುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಬರುತ್ತಿದ್ದು, ರಸ್ತೆ ನಿರ್ಮಾಣ ಸಂದರ್ಭದಲ್ಲಿ ರೂಪಿಸಿದ್ದ ಯೋಜನೆಯಂತೆ ಮಳೆ ನೀರು ಹರಿಯಲು ಅಗತ್ಯ ವ್ಯವಸ್ಥೆ ಮಾಡಬೇಕು. ಅವೈಜ್ಞಾನಿಕವಾಗಿ ಮಾಡಿರುವ ಕಾಮಗಾರಿಗಳನ್ನು ತೆರವುಗೊಳಿಸಬೇಕು. ಈ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್, ಪುರಸಭೆ ಅಧಿಕಾರಿಗಳು ಸ್ಥಳ ಭೇಟಿ ನೀಡಿ, ಪರಿಶೀಲಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿಯ ಯಾವುದೇ ಭಾಗದಲ್ಲಿ ಮಳೆಯಿಂದ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, 2 ದಿನದಲ್ಲಿ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಚರಂಡಿ ಸ್ವಚ್ಛಗೊಳಿಸಿ
ಉಡುಪಿ ನಗರಸಭೆ ಮತ್ತು ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಚರಂಡಿ ಗಳನ್ನು ಸ್ವಚ್ಛಗೊಳಿಸಬೇಕು. ಖಾಸಗಿ ಜಾಗ ದಲ್ಲಿ ಮಳೆ ನೀರು ಹರಿಯುವ ಜಾಗದಲ್ಲಿ ತಡೆ ಹಾಕಿರುವ ಬಗ್ಗೆ ಕಂಡು ಬಂದಲ್ಲಿ ಅದನ್ನು ಮುಲಾ ಜಿಲ್ಲದೇ ಒಡೆದು ಹಾಕಿ, ಖಾಸಗಿ ವ್ಯಕ್ತಿಗಳು ಈ ಕಾರ್ಯಕ್ಕೆ ಅಡಚಣೆ ಮಾಡಿದಲ್ಲಿ ಪ್ರಾಕೃತಿಕ ವಿಕೋಪ ಕಾಯ್ದೆಯಡಿ ನೀಡಿರುವ ಅಧಿಕಾರ ಚಲಾಯಿಸಿ, ಅಗತ್ಯ ಕ್ರಮ ಕೈಗೊಳ್ಳಿ ಎಂದರು.
ರಸ್ತೆ ಬದಿಯ ಅಪಾಯಕಾರಿ ಮರಗಳ ವಿವರಗಳನ್ನು ಸ್ಥಳೀಯ ಸಂಸ್ಥೆಗಳು ಪಟ್ಟಿ ಮಾಡಿ, ಅರಣ್ಯ ಇಲಾಖೆಗೆ ಸಲ್ಲಿಸಬೇಕು. ಅರಣ್ಯ ಇಲಾಖೆ ಆದ್ಯತೆಯ ಮೇಲೆ ತೆರವುಗೊಳಿಸಲು ಅನುಮತಿ ನೀಡಬೇಕು. ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಿಂದ ಅಗತ್ಯವಿರುವ ಎಲ್ಲ ರಕ್ಷಣಾ ಪರಿಕರಗಳನ್ನು ಸಿದ್ಧವಾಗಿಟ್ಟು ಕೊಳ್ಳಬೇಕು ಎಂದರು.
ಶಾಸಕ ರಘುಪತಿ ಭಟ್ ಮಾತನಾಡಿ, ಮಳೆ ಯಿಂದ ಮನೆಗಳಿಗೆ ಆಗುವ ಹಾನಿಗೆ ನೀಡುವ ಪರಿಹಾರ ಅತ್ಯಂತ ಕಡಿಮೆ ಇದೆ ಎಂದರು. ಪ್ರತಿಕ್ರಿಯಿಸಿದ ಸಚಿವರು, ಮಳೆಯಿಂದ ಮನೆ ಮತ್ತು ಆಸ್ತಿ-ಪಾಸ್ತಿಗಳು ಹಾನಿಯಾದ ಸಂದರ್ಭ ನಷ್ಟದ ಅಂದಾಜು ಮಾಡುವಾಗ, ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಪ್ರಕರಣಗಳನ್ನು ಗಮನಿಸಿ, ಸಂತ್ರಸ್ತರಿಗೆ ಗರಿಷ್ಠ ನೆರವು ಒದಗಿಸಬೇಕು ಎಂದರು.
ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಸಿಇಒ ಪ್ರಸನ್ನ ಎಚ್., ಕರಾವಳಿ ಕಾವಲು ಪಡೆ ಎಸ್ಪಿ ಅಂಶುಕುಮಾರ್, ಅಪರ ಜಿಲ್ಲಾಧಿಕಾರಿ ವೀಣಾ, ಕುಂದಾಪುರ ಡಿಎಫ್‌ಒ ಆಶೀಶ್ ರೆಡ್ಡಿ, ಕಾರ್ಕಳ ಡಿಎಫ್‌ಒ ಗಣಪತಿ, ಎಎಸ್ಪಿ ಸಿದ್ದಲಿಂಗಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಗಾ ವಹಿಸಲು ಸೂಚನೆ
ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಮಳೆಗಾಲದಲ್ಲಿ ಉಲ್ಬಣವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಮನೆಗಳ ಸಮೀಪ ನೀರು ನಿಲ್ಲದಂತೆ ಹಾಗೂ ಸೊಳ್ಳೆಗಳ ಬೆಳವಣಿಗೆ ತಡೆಯುವ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೂಲಕ ಮನೆ ಮನೆಗೆ ಸ್ವಚ್ಚತೆ ಕಾಪಾಡಲು ಸಂದೇಶ ರವಾನಿಸಬೇಕು. ವಲಸೆ ಕಾರ್ಮಿಕರು ವಾಸಿಸುವ ಪ್ರದೇಶದಲ್ಲಿ ವಿಶೇಷ ನಿಗಾ ವಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಎಸ್. ಅಂಗಾರ ಸೂಚನೆ ನೀಡಿದರು.