
ವಿವಿಧೆಡೆ ಹೆಜ್ಜೇನು ದಾಳಿ; ಓರ್ವ ಮಹಿಳೆ ಸಾವು, ಇನ್ನೋರ್ವ ಮಹಿಳೆ ಆಸ್ಪತ್ರೆಗೆ ದಾಖಲು
Team Udayavani, Nov 12, 2022, 11:46 PM IST

ಮಲ್ಪೆ: ಹಸುವಿಗೆ ಹುಲ್ಲು ತರಲು ಹೋದ ಮಹಿಳೆಗೆ ಜೇನು ಕಡಿದು ಸಾವಪ್ಪಿರುವ ಘಟನೆ ಶುಕ್ರವಾರ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಬಳಿ ಸಂಭವಿಸಿದೆ.
ಕೆಮ್ಮಣ್ಣು ನಿವಾಸಿ ಸಂಪಾ (53) ಮೃತಪಟ್ಟ ಮಹಿಳೆ. ಅವರು ಕುದ್ರುವಿನಲ್ಲಿರುವ ವಾಜೀದ್ ಅವರ ತೋಟದಲ್ಲಿ ಹುಲ್ಲು ಕೊಯ್ಯುತ್ತಿರುವಾಗ ಜೇನು ಕಡಿದಿದೆ ಎನ್ನಲಾಗಿದೆ. ತೀವ್ರಅಸ್ವಸ್ಥಗೊಂಡ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಜ್ಜೇನು ದಾಳಿ ಮಹಿಳೆ ಆಸ್ಪತ್ರೆಗೆ ದಾಖಲು
ಕಟಪಾಡಿ: ಏಣಗುಡ್ಡೆ ರಾಜರತ್ನ ರಸ್ತೆಯ ಬಳಿ ಹಲವು ಮಂದಿಗೆ ಹೆಜ್ಜೇನು ದಾಳಿ ನಡೆಸಿದ್ದು, ಮಹಿಳೆಯೋರ್ವರು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಗೆ ದಾಖಲುಗೊಂಡ ಘಟನೆ ನಡೆದಿದೆ.
ಈ ರಸ್ತೆ ತಿರುವಿನ ಹುಣಸೆ ಹುಳಿ ಮರದಲ್ಲಿ ಹೆಜ್ಜೇನು ಬೃಹತ್ ಗಾತ್ರದ ಗೂಡು ಕಟ್ಟಿತ್ತು. ಗಿಡುಗ ಬಂದು ಗೂಡಿಗೆ ದಾಳಿ ನಡೆಸಿದ ಕಾರಣ ಕೆರಳಿದ ಹೆಜ್ಜೇನು ದಾರಿಯಲ್ಲಿ ಸಾಗುತ್ತಿದ್ದ ಜನರ ಮೇಲೆ ದಾಳಿ ನಡೆಸಿದೆ.
ಸ್ಥಳೀಯ ಗ್ರಾ.ಪಂ. ಸದಸ್ಯ, ಕಚೇರಿ ಕೆಲಸಕ್ಕೆ ತೆರಳುತ್ತಿದ್ದ ಓರ್ವ ಮಹಿಳೆ, ಮೀನು ಮಾರಾಟಕ್ಕೆ ಬಂದ ವ್ಯಾಪಾರಿ, ಮನೆಕೆಲಸಕ್ಕೆ ತೆರಳುತ್ತಿದ್ದ ಹೊರ ಜಿಲ್ಲಾ ದಿನಗೂಲಿ ಕಾರ್ಮಿಕ ಮಹಿಳೆಯ ಮೇಲೆ ಹೆಜ್ಜೇನು ದಾಳಿ ನಡೆಸಿತ್ತು. ಕೆಲವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಶುಶ್ರೂಷೆ ಮಾಡಲಾಗಿದ್ದರೆ ಮಹಿಳೆಯೋರ್ವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ರಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ :ಸಕ್ರಬೈಲು: ಅನಾರೋಗ್ಯದಿಂದ ಬಳಲುತ್ತಿದ್ದ “ದಾವಣಗೆರೆಯ ಗಣೇಶ’ ಆನೆ ಸಾವು
ಟಾಪ್ ನ್ಯೂಸ್
