ಕುಂದಾಪುರ ರೈತ ಸಂಪರ್ಕ ಕೇಂದ್ರ ಕೋಟೇಶ್ವರಕ್ಕೆ ?

ಐದು ವರ್ಷಗಳ ಹಿಂದೆಯೇ ಪ್ರಸ್ತಾವನೆ;  5 ಕಿ.ಮೀ. ದೂರಕ್ಕೆ ಸ್ಥಳಾಂತರಿಸಬಾರದೆಂದು ರೈತರ ಬೇಡಿಕೆ

Team Udayavani, Jan 20, 2020, 5:48 AM IST

ಕುಂದಾಪುರ:ಇಲ್ಲಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಕುಂದಾಪುರ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಕೋಟೇಶ್ವರಕ್ಕೆ ಸ್ಥಳಾಂತರವಾಗಲಿದೆ ಎಂದು ಮಾಹಿತಿ ಲಭಿಸಿದೆ. ಸ್ಥಳಾಂತರ ಕುರಿತು ಐದು ವರ್ಷಗಳ ಹಿಂದೆಯೇ ಇಲಾಖಾ ಪ್ರಸ್ತಾವನೆ ಹೋಗಿತ್ತಾದರೂ ಇದೀಗ ಕೋಟೇಶ್ವರಕ್ಕೆ ಸ್ಥಳಾಂತರಿಸಲು ತಾತ್ವಿಕ ಹಾಗೂ ಆಡಳಿತಾತ್ಮಕ ಒಪ್ಪಿಗೆ ದೊರೆತ ಕುರಿತು ಮಾಹಿತಿ ಇದೆ.

ರೈತ ಸಂಪರ್ಕ ಕೇಂದ್ರ
ಬೇಡಿಕೆ ಆಧಾರಿತ ಹೊಸ
ಕೃಷಿ ವಿಸ್ತರಣಾ ವ್ಯವಸ್ಥೆಯಾಗಿ “ರೈತ ಮಿತ್ರ ಯೋಜನೆ’ಯನ್ನು ರಾಜ್ಯದಲ್ಲಿ 2000-01ನೇ ಸಾಲಿನಿಂದ ಅನುಷ್ಟಾನಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿ ಹೋಬಳಿಗೆ ಒಂದರಂತೆ ಪ್ರಾರಂಭಿಸಿದ ಕೃಷಿ ವಿಸ್ತರಣಾ ಕೇಂದ್ರಗಳನ್ನು “ರೈತ ಸಂಪರ್ಕ ಕೇಂದ್ರಗಳು’ ಎಂದು ಕರೆಯ ಲಾಗುತ್ತಿದೆ. ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ಪ್ರತಿ ಹೋಬಳಿಗೆ ಒಂದರಂತೆ 747 ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.

ವಿಭಜನೆ
ರೈತ ಸಂಪರ್ಕ ಕೇಂದ್ರಗಳಾದ ಬಳಿಕ ಕೃಷಿ ಇಲಾಖೆ ಮಾತೃ ಕಚೇರಿಯಿಂದ ಇವು ಗಳಿಗೆ ಪ್ರತ್ಯೇಕ ಕಚೇರಿ ತೆರೆಯಬೇಕು. ಇವುಗಳು ಹೋಬಳಿ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕೆಂದು ಸರಕಾರ ಆದೇಶಿಸಿತು. ಇದಕ್ಕಾಗಿ ಹೋಬಳಿ ಮಟ್ಟದಲ್ಲಿ ಕಚೇರಿ ತೆರೆದರೆ ರೈತರಿಗೆ ಅನುಕೂಲ ವಾಗಲಿದೆ, ರೈತರು ತಾಲೂಕು ಕೇಂದ್ರಕ್ಕೆ ಅಲೆದಾಟ ಬರುವ ಅನಿವಾರ್ಯ ತಪ್ಪುತ್ತದೆ ಎನ್ನುವುದು ಲೆಕ್ಕಾಚಾರವಾಗಿತ್ತು. ಆದ್ದರಿಂದ ಬ್ರಹ್ಮಾವರ ಬೀಜೋತ್ಪಾದನಾ ಕೇಂದ್ರ ಬಳಿ, ಬೈಂದೂರು, ವಂಡ್ಸೆಯಲ್ಲಿ ಪ್ರತ್ಯೇಕ ರೈತ ಸಂಪರ್ಕ ಕೇಂದ್ರ ತೆರೆಯಲಾಯಿತು.

ಪ್ರತ್ಯೇಕ ಆಗಲಿಲ್ಲ
ಬ್ರಹ್ಮಾವರ, ಬೈಂದೂರು, ಹೆಬ್ರಿ, ಕಾಪು ಪ್ರತ್ಯೇಕ ತಾಲೂಕುಗಳಾದರೂ ಕೃಷಿ ಇಲಾಖೆ ಪ್ರತ್ಯೇಕಗೊಳ್ಳಲಿಲ್ಲ. ಸಿಬಂದಿ ನೇಮಕ ನಡೆಯಲಿಲ್ಲ. ಈ ಕುರಿತಾಗಿ ಸರಕಾರದಿಂದ ಅಧಿಸೂಚನೆಯೇ ಪ್ರಕಟವಾಗಲಿಲ್ಲ. ಹಣಕಾಸು ಇಲಾಖೆ ಒಪ್ಪಿಗೆಯನ್ನೂ ಕೊಡಲಿಲ್ಲ. ಆದ್ದರಿಂದ ಈ ಎಲ್ಲ ತಾಲೂಕುಗಳಿಗೆ ಕೃಷಿ ಇಲಾಖೆ ಆಯಾ ತಾಲೂಕಿನ ಮಾತೃ ತಾಲೂಕಿನ ಕೃಷಿ ಇಲಾಖೆಯೇ ಆಗಿದೆ. ಬೈಂದೂರು ಕಂದಾಯವಾಗಿ ಪ್ರತ್ಯೇಕ ತಾಲೂಕಾಗಿದ್ದರೂ ಕೃಷಿ, ತೋಟಗಾರಿಕೆ, ಆರೋಗ್ಯ, ಪಶುಸಂಗೋಪನೆ ಮೊದಲಾದ ಇಲಾಖೆಗಳು ಪ್ರತ್ಯೇಕ ಇಲ್ಲ.

ಕುಂದಾಪುರ ರೈತ ಸಂಪರ್ಕ ಕೇಂದ್ರ
ಇಲ್ಲಿನ ರೈತ ಸಂಪರ್ಕ ಕೇಂದ್ರ ಪ್ರಸ್ತುತ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಚೇರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಕೇಂದ್ರಕ್ಕೆ ಬರುವ ಕೃಷಿ ಸಾಮಗ್ರಿಗಳಾದ ಲಘು ಪೋಷಕಾಂಶಗಳು, ಬೀಜ, ರಸಗೊಬ್ಬರ, ಕೀಟನಾಶಕ, ಕೃಷಿ ವಾಹನಗಳು, ಇತರ ಕೃಷಿ ಪರಿಕರಗಳನ್ನು ಸಂಗ್ರಹಿಸಿ ಇಡಲು ಸ್ಥಳದ ಅಭಾವವಿದೆ. ಕೃಷಿ ಸಲಕರಣೆಗಳ ಶೇಖರಣೆಗೆ ಕೋಣೆಗಳ ಕೊರತೆಯಿಂದ ಬೇರೆ ಕಟ್ಟಡದಲ್ಲಿ ಸಂಗ್ರಹಿಸುವ ಅನಿವಾರ್ಯ ಬಂದೊದಗಿದೆ. ಹಳೆ ಕಟ್ಟಡ ಚಿಕ್ಕದಿರುವುದರಿಂದ ಹೇಗಿದ್ದರೂ ಪ್ರತ್ಯೇಕ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಕೋಟೇಶ್ವರದಲ್ಲಿ ಇರುವ ಬೀಜೋತ್ಪಾದನಾ ಕೇಂದ್ರದ ಕಟ್ಟಡದಲ್ಲಿ ಕಾರ್ಯನಿರ್ವಹಿಸಬಹುದು ಎಂದು ಇಲಾಖಾ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಾಗಿ ಸುಮಾರು ಐದು ವರ್ಷಗಳಾದವು.

ಈವರೆಗೆ ಸರಕಾರದಿಂದ ಅನುದಾನವೂ ಬಂದಿರಲಿಲ್ಲ, ಪ್ರಸ್ತಾಪ ನನೆಗುದಿಗೆ ಬಿದ್ದಂತಿತ್ತು. ಈಗ ಬೇಡಿಕೆಗೆ ಜೀವ ಬಂದಿದೆ.

ಯಾಕೆ ಕೋಟೇಶ್ವರ?
ಇಲಾಖಾ ಮೂಲಗಳ ಪ್ರಕಾರ ನಗರದಲ್ಲಿ, ಪುರಸಭೆ ವ್ಯಾಪ್ತಿಯಲ್ಲಿ ಪ್ರತ್ಯೇಕ ನಿವೇಶನ ಇಲ್ಲದ ಕಾರಣ ಕೋಟೇಶ್ವರದಲ್ಲಿ ಇಲಾಖಾ ಆಸ್ತಿ ಇರುವ ಕಾರಣ ಅಲ್ಲಿಗೆ ಸ್ಥಳಾಂತರಿಸಲು ಬರೆದುಕೊಳ್ಳಲಾಗಿತ್ತು. ಅಷ್ಟಲ್ಲದೇ ಇಲಾಖಾ ಜಾಗದಲ್ಲಿ ಸ್ವಲ್ಪವನ್ನು ಈಗಾಗಲೇ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಿಟ್ಟುಕೊಡಲಾಗಿದೆ. ಇನ್ನೂ ಬಳಕೆಯಾಗದಿದ್ದರೆ ಇದ್ದ ಜಾಗವೂ ಬೇರೆ ಇಲಾಖೆಗೆ ಹೋದರೆ ಎಂಬ ಭಯವೂ ಅಡಗಿದೆ.

ವಿರೋಧ
ಕೋಟೇಶ್ವರದಲ್ಲಿ ಸ್ಥಳಾಂತರ ಮಾಡುವುದು ಬೇಡ, ಕುಂದಾಪುರ ನಗರದಲ್ಲೇ ಇರಲಿ ಎಂದು ರೈತರು ಬೇಡಿಕೆ ಇಡುತ್ತಿದ್ದು ಸ್ಥಳಾಂತರಕ್ಕೆ ವಿರೋಧ ಆರಂಭವಾಗಿದೆ. ದೂರದಿಂದ ಬರುವವರಿಗೆ ಕುಂದಾಪುರ ನಗರದಲ್ಲಿ ಇದ್ದರೆ ಅನುಕೂಲ, ಸ್ಥಳಾಂತರಿದರೆ ನಗರಕ್ಕೆ ಬಂದು ಮತ್ತೆ ಕೋಟೇಶ್ವರಕ್ಕೆ ಹೋಗಬೇಕಾಗುತ್ತದೆ. ನಗರದಲ್ಲಿ ಇತರ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸುವ ಕಾರಣ ರೈತರ ಸರಕಾರಿ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. 5 ಕಿ.ಮೀ. ದೂರಕ್ಕೆ ಸ್ಥಳಾಂತರಿಸಬಾರದು ಎಂದು ರೈತರ ಬೇಡಿಕೆಯಿದೆ.

ನಿವೇಶನ ಇಲ್ಲ
ಸ್ಥಳಾಂತರ ಪ್ರಸ್ತಾಪವು ಹಳೆಯದಾಗಿದ್ದು ನಗರದಲ್ಲಿ ನಿವೇಶನ ಲಭ್ಯವಿಲ್ಲ. ಲಭ್ಯವಿದ್ದರೆ ಹೊಸ ಪ್ರಸ್ತಾವನೆ ಸಲ್ಲಿಸಬಹುದು. ಹೊಸ ಕಟ್ಟಡ ರಚನೆ ಕುರಿತು ಅನುದಾನ ಬಿಡುಗಡೆಯಾದ ಯಾವುದೇ ಮಾಹಿತಿ ಇಲ್ಲ.
-ರೂಪಾ ಮಾಡ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ

ಸ್ಥಳಾಂತರ ಸಲ್ಲದು
ಕೇಂದ್ರಸ್ಥಾನದಲ್ಲಿ ಎಲ್ಲ
ಇಲಾಖೆಗಳೂ ಕಾರ್ಯ ನಿರ್ವಹಿಸಿದರೆ ಕೆಲಸ ಕಾರ್ಯಗಳಿಗೆ ಅನುಕೂಲ. ದೂರಕ್ಕೆ ಸ್ಥಳಾಂತರಿಸಿದರೆ ಇಲಾಖೆಯ ಉದ್ದೇಶವೇ ಅರ್ಥಹೀನವಾಗುತ್ತದೆ. ಆದ್ದರಿಂದ
ಲಭ್ಯ ನಿವೇಶನವನ್ನೇ ಬಳಸಿ ನಗರದಲ್ಲೇ ಹೊಸ ಕಟ್ಟಡ
ರಚಿಸಬೇಕು.
ವಿಕಾಸ್‌ ಹೆಗ್ಡೆ , ವಕ್ತಾರ,
ಉಡುಪಿ ಜಿಲ್ಲಾ ರೈತ ಸಂಘ

– ಲಕ್ಷ್ಮೀ ಮಚ್ಚಿನ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ