
ಉಡುಪಿ : ಮದ್ಯಪಾನ ಮಾಡಿದ್ದ ವಾಹನ ಚಾಲಕನ ರಾದ್ದಾಂತ ; ಪ್ರಾಣ ಉಳಿಸಿಕೊಂಡ ಹಲವರು
Team Udayavani, Jan 26, 2023, 11:10 PM IST

ಉಡುಪಿ : ಬೀಡಿನಗುಡ್ಡೆಯಲ್ಲಿ ಕುಡಿದು ವಾಹನ ಚಲಾಯಿಸಿದ ಟೆಂಪೋ ಚಾಲಕ ಎರಡು ದ್ವಿಚಕ್ರ ವಾಹನಗಳನ್ನು ತನ್ನ ವಾಹನದ ಅಡಿಗೆ ಹಾಕಿ ಬೀದಿ ರಂಪಾಟ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಡಯಾನ ಕುಕ್ಕಿಕಟ್ಟೆ ನಿವಾಸಿ ದಿನೇಶ ಎಂಬಾತ ತನ್ನ ಟೆಂಪೋದಲ್ಲಿ ಬೀಡಿನಗುಡ್ಡೆಯಿಂದ ಡಯಾನ ಕಡೆ ತೆರಳುತ್ತಿದ್ದಾಗ ಸರ್ಕಲ್ ಬಳಿ ಬೈಕ್ ಚಾಲಕನಿಗೆ ಢಿಕ್ಕಿ ಹೊಡೆಯುವಂತೆ ರಭಸದಲ್ಲಿ ವಾಹನ ಚಲಾಯಿಸಿದ್ದ. ಇದನ್ನು ಪ್ರಶ್ನಿಸಿದ ಬೈಕ್ ಚಾಲಕನಿಗೆ ಗದರಿಸಿದ್ದ. ಇದರಿಂದ ಕೋಪಗೊಂಡ ಬೈಕ್ ಸವಾರ ದಿನೇಶನಿಗೆ ಕಪಾಳ ಮೋಕ್ಷಗೈದಿದ್ದು, ಇದರಿಂದ ಕೋಪಗೊಂಡ ದಿನೇಶ ತನ್ನ ಟೆಂಪೋವನ್ನು ಚಲಾಯಿಸಿ ಬೈಕ್ ಮೇಲೆ ಹತ್ತಿಸಿದ್ದ. ತಕ್ಷಣವೇ ಬೈಕ್ ಸವಾರ ಮತ್ತು ಸಹಸವಾರ ಬೈಕ್ ಬಿಟ್ಟು ಹಾರಿದ್ದರು.ಇಷ್ಟಕ್ಕೆ ಸುಮ್ಮನಾಗದ ಚಾಲಕ ಟೆಂಪೋವನ್ನು ಏಕಾಏಕಿ ಹಿಂದಕ್ಕೆ ಚಲಾಯಿಸಿದ್ದಾನೆ. ಈ ವೇಳೆ ಹಿಂದೆ ಇನ್ನೊಂದು ಬೈಕ್ ಟೆಂಪೋದ ಅಡಿಗೆ ಬಿದ್ದಿದೆ.
ಕುಡಿದ ಮತ್ತಿನಲ್ಲಿದ್ದ ಟೆಂಪೋ ಚಾಲಕ ತನ್ನ ವಾಹನ ಹಿಂದಕ್ಕೆ ಚಲಾಯಿಸುವಾಗ ಅಲ್ಲೇ ನಿಂತಿದ್ದ ಮಹಿಳೆ ಸಹಿತ ಐದಾರು ಜನ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ನಗರ ಠಾಣಾ ಪೊಲೀಸರು ಟೆಂಪೋ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
