ಶಿರಸಿ ಪ್ರತ್ಯೇಕ ಜಿಲ್ಲೆ: ಸಿಎಂ ಗಮನಕ್ಕೆ; ಸ್ಪೀಕರ್ ಕಾಗೇರಿ
Team Udayavani, Dec 6, 2022, 12:47 PM IST
ಶಿರಸಿ: ಭೌಗೋಳಿಕವಾಗಿ ವಿಸ್ತಾರವಾದ ಜಿಲ್ಲೆಯನ್ನು ಅಭಿವೃದ್ಧಿ ದೃಷ್ಟಿಯಲ್ಲಿ ಪ್ರತ್ಯೇಕ ಜಿಲ್ಲೆಯಾಗಿಸುವ ಕುರಿತು ಉಂಟಾದ ಜನಾಭಿಪ್ರಾಯವನ್ನು ಸಿಎಂ ಗಮನಕ್ಕೆ ತರಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಂಗಳವಾರ ಅವರು ನಗರದಲ್ಲಿ ಆರಂಭಗೊಂಡ ಕಾರ್ಮಿಕ ವಿಮಾ ಚಿಕಿತ್ಸಾಲಯ ಉದ್ಘಾಟನೆ ವೇಳೆ ಮಾತನಾಡಿ, ಶಿರಸಿ ಪ್ರತ್ಯೇಕ ಜಿಲ್ಲೆ ಬೇಡಿಕೆ ಇದೆ. ಶಿರಸಿ ಕೂಡ ಸಾಕಷ್ಟು ಬೆಳೆದಿದೆ. ಯಾದಗಿರಿ, ಕೊಪ್ಪಳ, ಗದಗ, ಹಾವೇರಿ, ಉಡುಪಿ ಜಿಲ್ಲೆ ಈಗಾಗಲೇ ಆಗಿದ್ದು, ಶಿರಸಿ ಜಿಲ್ಲೆ ಘೋಷಣೆ ಆಗಬೇಕು ಎಂಬ ಬೇಡಿಕೆ ಇದೆ. ಸೂಕ್ತ ಕಾಲಕ್ಕೆ ಸರಕಾರ ಸ್ಪಂದಿಸಿ ಜನರ ಭಾವನೆಗೆ ಬೆಲೆ ಕೊಡಲಿದೆ ಎಂದರು.
ಈ ವೇಳೆ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಇಲಾಖೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡದೇ ಬೇರೆ ಕಡೆ ಚಿಕಿತ್ಸೆಗೆ ಶಿಫಾರಸ್ಸು ಮಾಡುವ ಮಾಫಿಯಾ ವಿರುದ್ಧ ಕೂಡ ಎಚ್ಚರಿಕೆ ವಹಿಸುತ್ತಿದ್ದೇವೆ ಎಂದರು.
ಟಿಎಸ್ ಎಸ್ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಂದನ್ ಸಾಗರ, ಎಸಿ ದೇವರಾಜ ಇತರರು ಇದ್ದರು.