ಸೆರಗು-ಲೋಕದ ಬೆರಗು
Team Udayavani, Oct 24, 2020, 9:00 AM IST
ಪಕ್ಕದ ಮನೆ ಪದ್ಮಕ್ಕ “ಮುಂದಿನ ವಾರ ನಿಮ್ಮ ಅಕ್ಕನ ಮಗಳ ಮದ್ವೆ ಅಲ್ವಾ? ಯಾವ ಸೀರೆ ಉಡಬೇಕೂಂತಿದ್ದೀರಿ” ಎಂದಾಗ ಸರೋಜಾ, “”ನಾನು ಆಗ್ಲೆ ಒಂದು ಹೊಸ ರೇಷ್ಮೆ ಸೀರೆ ತಗೊಂಡು ಬಂದಾಗಿದೆ. ಬ್ಲೌಸ್ ಕೂಡಾ ಹೊಲಿಸಿ ರೆಡಿ ಮಾಡಿಟ್ಟಿದ್ದೇನೆ. ಅದನ್ನೇ ಉಡೋದು” ಎಂದ ಸರೋಜಾಳ ಸ್ವರದಲ್ಲಿ ಹೆಮ್ಮೆಯ ಸಂತೃಪ್ತಿ ಎದ್ದು ಕಾಣುತ್ತಿತ್ತು.
“”ಓಹೊ, ಆಗಲೇ ಎಲ್ಲಾ ತಯಾರಿ ಮಾಡ್ಕೊಂಡು ಬಿಟ್ಟಿದ್ದೀರಿ ಹಾಗಾದ್ರೆ” ಪದ್ಮಕ್ಕನ ಮಾತಿಗೆ ಸರೋಜ “ಹೂಂ…’ ಎನ್ನುತ್ತ ನಕ್ಕಳು. ಭಾರತೀಯ ಗೃಹಿಣಿಗೆ ಸೀರೆಯಷ್ಟು ಅಚ್ಚುಮೆಚ್ಚಿನ ಉಡುಪು ಬೇರೊಂದಿಲ್ಲ. ಇತ್ತೀಚೆಗೆ ಮನೆಯಲ್ಲಿ ಧರಿಸುವ “ನೈಟಿ’ ಎಂಬ ಅನುಕೂಲಕರ ಉಡುಪು, ಮನೆಗೆಲಸದಲ್ಲಿ ತೊಡಗಿಕೊಂಡಿರುವಾಗ, ಚಿಕ್ಕಮಕ್ಕಳಿರುವಾಗ ತೊಡಕಿಲ್ಲದೆ ನಿಭಾಯಿಸಲು ಸುಲಭವಾಗು ವಂತಹ ಸರಳ ದಿರಿಸು. ಚೂಡಿದಾರ್, ಸೆಲ್ವರ್ ಕಮೀಜ್, ಪ್ಯಾಂಟ್, ಟೀಶರ್ಟ್ ಎಲ್ಲವೂ ಪ್ರಯಾಣಕ್ಕೆ, ಪ್ರವಾಸಕ್ಕೆ, ದಿಢೀರ್ ಮಾರ್ಕೆಟಿಗೆ ಹೋಗುವುದಕ್ಕೆಲ್ಲ ಆರಾಮದಾಯಕ ಉಡುಗೆಯೆಂದು ಈಗ ಜನಪ್ರಿಯವಾಗಿ ಚಾಲ್ತಿಯಲ್ಲಿದ್ದರೂ, ಸಾಂಪ್ರದಾಯಿಕ ಧಾರ್ಮಿಕ ಸಮಾರಂಭಗಳ ಸೌಂದರ್ಯಕ್ಕೆ ಸೀರೆಯೇ ಸರಿ.
ಪರಂಪರಾಗತ ಉಡುಗೆಯಲ್ಲಿ ಸೀರೆಗೆ ಮೊದಲ ಸ್ಥಾನ. ಸೀರೆ ಉಟ್ಟ ಗೃಹಿಣಿ ಭಾರತೀಯ ಸಂಸ್ಕೃತಿಯ ಸಂಕೇತವಾಗುತ್ತಾಳೆ. ಇಡೀ ವಿಶ್ವದ ಮಹಿಳಾ ಉಡುಪುಗಳ ಸಾಲಿನಲ್ಲಿ ಸೀರೆಯೊಂದಿಗೆ ಶೋಭಿಸುವವಳು ಭಾರತೀಯ ನಾರಿ ಮಾತ್ರ. ಕಳೆದ ಬಾರಿ ವಿಶ್ವಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳ ಪ್ರತಿನಿಧಿಗಳೊಂದಿಗೆ ನಮ್ಮ ದೇಶವನ್ನು ಪ್ರತಿನಿಧಿಸಿದವರು ನಮ್ಮ ವಿದೇಶಾಂಗ ಮಂತ್ರಿಯಾಗಿದ್ದ ಸುಷ್ಮಾ ಸ್ವರಾಜ್. ಅವರು ಒಪ್ಪವಾಗಿ ಸೀರೆ ಉಟ್ಟು ನಿಂತು ನಮ್ಮ ಭಾರತವನ್ನು ಪ್ರತಿನಿಧಿಸಿದರು.
ರಾಜರ ಕಾಲದಲ್ಲೂ ಅಂತಃಪುರದ ರಾಣಿಯರೆಲ್ಲ ಕಾಣಿಸಿಕೊಳ್ಳುತ್ತಿದ್ದುದು ಸೀರೆಯಲ್ಲಿಯೇ. ಸೀರೆಯುಟ್ಟ ಈ ಅರಸಿಯರ ಸೆರಗು ಒಮ್ಮೊಮ್ಮೆ ತಲೆಯ ಮೇಲಿಂದ ಹಾದು ಭುಜದ ಮೇಲೆ ಬಂದು ಒರಗುವುದನ್ನು ನಾವು ಕೆಲವು ಭಾವಚಿತ್ರಗಳಲ್ಲಿ ನೋಡುತ್ತೇವೆ. ಯಕ್ಷಗಾನದಲ್ಲಿ ಸ್ತ್ರೀವೇಷಗಳು ಲಕ್ಷಣವಾಗಿ ಸೀರೆ ಉಟ್ಟು ಸೊಂಟಪಟ್ಟಿ , ಬಾಜುಬಂದಿ, ಕೈಬಳೆಗಳನ್ನು ತೊಟ್ಟು ಕಿಣಿಕಿಣಿ ಸ್ವರಗೈಯ್ಯುತ್ತ ಸಾಲಂಕೃತರಾಗಿ ಬಂದರೆಂದರೆ ಭಾರತೀಯ ಪೌರಾಣಿಕ ಸ್ತ್ರೀಯ ಕಾಲಘಟ್ಟವೇ ರಂಗಕ್ಕಿಳಿದು ಬಂದಂತೆ ಭಾಸವಾಗುತ್ತದೆ. ಇಂತಹ ಭಾರತೀಯ ಗೃಹಿಣಿಯ ತದ್ರೂಪಿ, ಸೀರೆಯಲ್ಲಿ ಸುಂದರವಾಗಿ ನಮ್ಮೆದುರು ತಾಕಿಟ ಧೀಕಿಟ ಮಾಡುತ್ತಿದ್ದರೆ, ಆ ಪಾತ್ರಧಾರಿ ಒಬ್ಬ “ಪುರುಷ’ ಎನ್ನುವ ಸತ್ಯ ಆ ಕ್ಷಣಕ್ಕೆ ಮರೆತೇಹೋಗುವಷ್ಟು ಅದು ಸ್ತ್ರೀಯಾಗಿ ನಮ್ಮನ್ನು ಸೆಳೆಯುತ್ತದೆ.
ಕೆಲವು ವರ್ಷಗಳ ಹಿಂದೆ ನಮ್ಮ ಕಾಸರಗೋಡಿನ ಸ್ನೇಹಿತರೆಲ್ಲ ಸೇರಿ ಯುರೋಪ್ ಪ್ರವಾಸ ಕೈಗೊಂಡಿದ್ದೆವು. ಆ ಸಂದರ್ಭದಲ್ಲಿ ಪ್ರಪಂಚದ ಪ್ರೇಮಿಗಳ ಸ್ವರ್ಗವೆಂದು ಪ್ರಖ್ಯಾತವಾದ ಫ್ರಾನ್ಸಿನ ಪ್ಯಾರಿಸ್ ನಗರವನ್ನು ನೋಡುವ ಅವಕಾಶ ದೊರೆಯಿತು. ಅಲ್ಲಿನ ಎಲ್ಲ ಪ್ರವಾಸಿ ತಾಣಗಳನ್ನು ನೋಡಿ ಆದ ನಂತರ ಕೊನೆಯಲ್ಲಿ “ಲಿಡೊ’ ಎಂಬ ಪಾಶ್ಚಾತ್ಯ ಮಹಿಳೆಯರ ನೃತ್ಯ ಪ್ರದರ್ಶನಕ್ಕೆ ಹೋಗುವುದೆಂದು ನಿಶೆಸಿದೆವು. ನಮ್ಮ ತಂಡದಲ್ಲಿ ನಾವಲ್ಲದೆ ಭಾರತದ ಬೇರೆ ಬೇರೆ ಕಡೆಗಳಿಂದ ಬಂದವರೂ ಇದ್ದರು. ಆ ಹೊತ್ತಿನ “ಲಿಡೊ’ ಪ್ರದರ್ಶನಕ್ಕೆ, ನಮ್ಮ ತಂಡದ ಎಲ್ಲ ಮಹಿಳೆಯರೂ ಭಾರತೀಯ ಗೃಹಿಣಿಯನ್ನು ಪ್ರತಿನಿಧಿಸಬಹುದಾದ ಸೀರೆಯನ್ನೇ ಧರಿಸಿ ಹೋಗುವುದೆಂದು ತೀರ್ಮಾನಿಸಿ ಎಲ್ಲರೂ ಒಗ್ಗಟ್ಟಿನಿಂದ ಪ್ರದರ್ಶನಾಂಗಣವನ್ನು ತಲುಪಿದಾಗ ಅಲ್ಲಿನ ಸ್ವಾಗತಕಾರರು, “”ಹಲೊ, ಇಂಡಿಯನ್ ಲೇಡೀಸ್. ಯೂ ಆರ್ ವೆಲ್‌ಕಂ” ಎಂದಾಗ ಭಾರತೀಯ ಸಂಸ್ಕೃತಿಯ ಗಂಧಗಾಳಿ ಇಲ್ಲದ ವಿದೇಶಿಯರು ಕೂಡ ಸೀರೆಯಿಂದಾಗಿ ನಮ್ಮನ್ನು ಭಾರತೀಯ ಮಹಿಳೆಯರು ಎಂದು ಗುರುತಿಸಿದರಲ್ಲ ಎಂಬ ಹೆಮ್ಮೆ ಈಗಲೂ ಮನದಲ್ಲಿದೆ.
ಸೌಂದರ್ಯದ ಜೊತೆಗೆ ಭಕ್ತಿಭಾವವನ್ನು ಸೃಜಿಸುವ ನಮ್ಮ ದೇವಾನುದೇವತೆಗಳಾದ ಲಕ್ಷ್ಮಿ, ಸರಸ್ವತಿ, ಪಾರ್ವತಿ, ಭಗವತಿ… ಎಲ್ಲರೂ ಕೂಡ “ಸೀರೆ’ ಎಂಬ ವಸನದಲ್ಲೇ ನಮ್ಮ ಮನಃಪಟಲದಲ್ಲಿ ಮೂರ್ತರೂಪ ತಾಳುತ್ತಾರೆ.
ಗೃಹಿಣಿಯ ಸೀರೆಯ ಭಾಗವಾದ ಸೆರಗು ಹಲವು ಕಾರಣಗಳಿಂದ ಪ್ರಾಮುಖ್ಯತೆವನ್ನು ಪಡೆಯುತ್ತದೆ. ಸೀರೆಯಾಗಿ ಮಹಿಳೆಯ ಮೈಯನ್ನು ಅಪ್ಪಿಯೂ, ಸ್ವತಂತ್ರವಾಗಿ ಗಾಳಿಯಲ್ಲಿ ಹಾರಾಡುವ ಸೆರಗು, ಸ್ತ್ರೀ ವ್ಯಕ್ತಿತ್ವದ ಹಲವು ಮಜಲುಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಹಳೆಯ ಕಪ್ಪು-ಬಿಳುಪು ಸಿನೆಮಾ ಒಂದರಲ್ಲಿ ನಾಯಕಿ ಗಾಳಿಯಲ್ಲಿ ಸೆರಗು ಬೀಸುತ್ತ ಬರುತ್ತಿದ್ದರೆ, ನಾಯಕ ಆಕೆಯ ಸೆರಗಿನ ತುದಿ ಹಿಡಿದು ಹಿಂದೆ ಹಿಂದೆ ಬರುತ್ತಾನೆ. ಆಗ ನಾಯಕಿ ವಾರೆಗಣ್ಣಿನಿಂದ ಆತನನ್ನು ನೋಡಿ, ಹುಸಿ ಮುನಿಸು ನಟಿಸುತ್ತ, ಛೋಡ್ ದೊ ಆಚಲ್… ಜಮಾನಾ ಕ್ಯಾ ಕಿಹೇಗಾ… ಎಂಬ ಮರ ಸುತ್ತುವ ಹಾಡೊಂದು ಆ ಕಾಲದಲ್ಲಿ ಬಹಳ ಜನಪ್ರಿಯವಾಗಿತ್ತು.
ಒಂದು ಸಂದರ್ಭದಲ್ಲಿ ಶ್ರೀಕೃಷ್ಣನ ಗಾಯದಿಂದ ರಕ್ತ ಬಾರದಂತೆ ತಡೆಯಲು ದ್ರೌಪದಿ ಆ ಕ್ಷಣ ತನ್ನ ಸೆರಗಿನ ತುದಿಯನ್ನೇ ಹರಿದು ಗಾಯಕ್ಕೆ ಕಟ್ಟುತ್ತಾಳೆ. ಈ ಸೆರಗಿನ ಋಣವೇ ಮತ್ತೆ ವಸ್ತ್ರಾಪಹರಣದ ಸಮಯದಲ್ಲಿ ಶ್ರೀಕೃಷ್ಣಾನುಗ್ರಹದಿಂದ ಅಕ್ಷಯಾಂಬರವಾಗಿ ಆಕೆಯ ಮಾನ ಕಾಪಾಡುತ್ತದೆ.
ಮಗುವಿನೊಂದಿಗೆ ಹೊರಗೆ ಹೋಗುವ ಅಮ್ಮ , ದಿಢೀರ್ ಸುರಿಯುವ ಮಳೆಗೆ ಮಗುವನ್ನು ತನ್ನ ಸೆರಗಲ್ಲಿ ಜೋಪಾನವಾಗಿಸುತ್ತಾಳೆ. ದೇವರಲ್ಲಿ ಸೆರ ಗೊಡ್ಡಿ ಬೇಡುವೆ ಎನ್ನುವಲ್ಲಿ ಸೆರಗು ಭಕ್ತಿ, ಶರಣಾಗತಿಯ ಸಂಕೇತ, ದಿಢೀರ್ ಆಘಾತಗಳಿಗೆ ಆಸರೆಯಾಗುವ ಸೆರಗು ಸೈರಣೆಯ ಕುರುಹು. ಸೆರಗು ಸ್ವಾತಂತ್ರ್ಯದ ಮೆರುಗು. ಸೌಂದರ್ಯದ ಬೆರಗು. ಗೃಹಿಣಿಯ ರಕ್ಷಣೆಯ ಲಕ್ಷ್ಮಣರೇಖೆ ಆ ಸೆರಗು. ದುಃಖ-ಬೇಸರದ ಸಂದರ್ಭದಲ್ಲಿ ಬಾಯಿಮೂಗಿಗೆ ಅಡ್ಡ ಹಿಡಿದ ಸೆರಗು ಭಾವೋದ್ವೇಗ ಹಿಡಿದಿಡುವ ಅಣೆಕಟ್ಟು. ಗಾಳಿಯಲ್ಲಿ ಹಾರುವ ಸೆರಗು ಸ್ವಾತಂತ್ರ್ಯದ ನಿರಾಳ ಭಾವದುಸಿರು. ಅಡುಗೆ ಮನೆಯಲ್ಲಿ ಸೆರಗು ಸರ್ವೋಪಯೋಗಿ. ಅಮ್ಮ ಮಾತ್ರವಲ್ಲ , ಇತರರೂ ಆಕೆಯ ಸೆರಗನ್ನು ಬಿಟ್ಟಿಯಾಗಿ ಉಪಯೋಗಿಸುವವರೇ. ಒದ್ದೆ ಕೈ ಒರೆಸಲು ಸೆರಗಿನಷ್ಟು ಸುಲಭದಲ್ಲಿ ಸಿಗುವುದು ಬೇರಾವುದೂ ಇಲ್ಲ. ಹೀಗೆ ಸೆರಗು ಬಹುರೂಪಿ. ಸರ್ವವ್ಯಾಪಿ. ಹೊಗೆಗೆ ಕಣ್ಣು ಮೂಗಲ್ಲೆಲ್ಲ ಸುರಿವ ನೀರು, ಮೈ ಬೆವರಿಗೆಲ್ಲ ಸೆರಗು ಸದಾ ಸಾಥಿ. ನಿಜಕ್ಕೂ ಈ ಸೆರಗು ಲೋಕದ ಬೆರಗೇ ಅಹುದು.
ಇಂತಹ ಸೆರಗಿನ ರೂಪಕವಾದ ಸೀರೆಯಲ್ಲಿ ವೈವಿಧ್ಯತೆಯ ಸೊಗಡನ್ನುನಮ್ಮ ಮಾರುಕಟ್ಟೆ ಪರಿಚಯಿಸುತ್ತದೆ. ಇವುಗಳಲ್ಲಿ ಮದುವೆ-ಸಮಾರಂಭ ಗಳಲ್ಲಿ ಮೇಲುಗೈ ಸಾಧಿಸುವ ರೇಶ್ಮೆ ಸೀರೆ ಉನ್ನತ ಮಟ್ಟದ ಆದರಕ್ಕೆ ಪಾತ್ರವಾಗಿದೆ. ಹಾಗಾಗಿಯೇ ಎಲ್ಲ ಸೀರೆ ಅಂಗಡಿಗಳು ತಮ್ಮ ಹೆಸರಿನಲ್ಲಿ “ಸಿಲ್ಕ್ಸ್’ ಎಂದು ಸೇರಿಸಿಕೊಳ್ಳುತ್ತವೆ. ಈ ಸಿಲ್ಕ್ ಸೀರೆ ಎಂಬ ಶಬ್ದವೇ ಗೃಹಿಣಿಗೆ ಆನಂದದೊಳಗಿನ ರೋಮಾಂಚನ. ರೇಶ್ಮೆ ಎಂದರೆ ಮಡಿ, ಶುದ್ಧ, ಪವಿತ್ರ ಹಾಗೂ ಗೌರವಾನ್ವಿತ ಸೌಂದರ್ಯದ ಸಂಕೇತ ಎಂಬ ಭಾವವನ್ನು ಸ್ಪುರಿಸುತ್ತದೆ.
ದಕ್ಷಿಣಭಾರತದಂತಹ ಸೆಕೆನಾಡಿನಲ್ಲಿ ಗೃಹಿಣಿಯರು ಕಾಟನ್ ಸೀರೆಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಇನ್ನು ನಾರಿನ ಸೀರೆಗಳು ಪೌರಾಣಿಕ ಕಾಲದಲ್ಲಿ ವೈರಾಗ್ಯ, ವಾನಪ್ರಸ್ಥದ ಸಂಕೇತವಾಗಿತ್ತು.
ಕಾಟನ್ ಸಿಲ್ಕ್ , ಜೂಟ್ ಸಿಲ್ಕ್- ಎಂದೆಲ್ಲ ಬೇರೆ ಬೇರೆ ಮಿಶ್ರಣದ ಸೀರೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗ ಹೊರಗೆ ಹೋಗುವಾಗಲೆಲ್ಲ ಗೃಹಿಣಿ ಸೀರೆ ಧರಿಸುವುದು ಕಡಿಮೆ ಎಂದೆನಿಸಿದರೂ ಎಲ್ಲಾದರೂ ಸೀರೆ ಪ್ರದರ್ಶನವೊ, ದರಕಡಿತ ಮಾರಾಟವೊ ಇದ್ದರೆ ಅಲ್ಲಿ ಹೆಂಗಳೆಯರ ನೂಕುನುಗ್ಗಲು. ಹಾಗಾಗಿ ಗೃಹಿಣಿಯ ಸೀರೆ ವ್ಯಾಮೋಹ ಮಾತ್ರ ನಿರಂತರ.
“ಸೀರೆ ನೀನಿರೆ ನಾನು ನನ್ನಿರವ ಮರೆವೆನೆ’ ಎಂಬ ಒಂದು ಉದ್ಗಾರ, ಸೀರೆ ಧಾರಿಣಿ ಮನಮೋಹಕವಾಗಿ ತನ್ನನ್ನೇ ಕೇಳಿಕೊಳ್ಳುವಂತಿದೆ.
ವಿಜಯಲಕ್ಷ್ಮಿ ಶ್ಯಾನ್‌ಭೋಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು
ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’
ಫ್ಯಾಶನ್ ಶೋ ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ
ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?
ಹೈಹೀಲ್ ಹಾಕುತ್ತಿದ್ದಿರಾ ? ಹಾಗಾದರೆ ಈ ಸ್ಟೋರಿ ತಪ್ಪದೆ ಓದಿ