Orthodontics ಮತ್ತು ಕ್ರೀಡೆ; ಸಕ್ರಿಯ ಕ್ರೀಡಾಳುಗಳಿಗೆ ಸುರಕ್ಷೆಯ ಸಲಹೆಗಳು
Team Udayavani, Aug 11, 2024, 1:43 PM IST
ಆರೋಗ್ಯ ಯುವ ಜೀವನವನ್ನು ಮುನ್ನಡೆಸುವುದಕ್ಕೆ ಆಟಗಳನ್ನು ಆಡುವುದು ಬಹಳ ನಿರ್ಣಾಯಕ. ಬ್ರೇಸ್‌ಗಳು, ರಿಟೈನರ್ ಗಳು ಅಥವಾ ಅಲೈನರ್‌ಗಳಂತಹ ವಸ್ತುಗಳ ಉಪಯೋಗವುಳ್ಳ ಆರ್ಥೊಡಾಂಟಿಕ್ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವ್ಯಕ್ತಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವೇಳೆ ಅವು ಅಪಾಯಗಳನ್ನು ಒಡ್ಡಬಹುದಾಗಿದೆ.
ಈ ಆರ್ಥೊಡಾಂಟಿಕ್ ಚಿಕಿತ್ಸಾ ವಸ್ತುಗಳು ಬಾಳಿಕೆ ಬರುತ್ತವಾದರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ವೇಳೆ ಅವುಗಳಿಗೆ ಅಥವಾ ಅವುಗಳಿಂದ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆಟೋಟಗಳ ಪರಿಣಾಮ ಅಥವಾ ಗಾಯಗಳಿಂದ ಬ್ರೇಸ್‌ನ ಬ್ರ್ಯಾಕೆಟ್ ಅಥವಾ ತಂತಿಗಳಿಗೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ, ಆಟೋಟಗಳಲ್ಲಿ ಪಾಲ್ಗೊಂಡಾಗ ಮುಖಕ್ಕೆ ಪೆಟ್ಟು ಬಿದ್ದರೆ ಆಗ ಬ್ರ್ಯಾಕೆಟ್ ಸ್ಥಾನಪಲ್ಲಟಗೊಳ್ಳುವ ಅಥವಾ ಅದರ ತಂತಿಗಳು ಬಾಗಿಹೋಗುವ ಅಥವಾ ಇತರ ಆರ್ಥೊಡಾಂಟಿಕ್ ಸಾಮಗ್ರಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಹಲ್ಲುಗಳಿಗೆ ಬ್ರೇಸ್ ಹಾಕಿಸಿಕೊಂಡ ಕ್ರೀಡಾಳುಗಳಿಗೆ ಬಾಯಿಯ ಮೃದು ಅಂಗಾಂಶ ಗಾಯಗಳು ಉಂಟಾಗುವ ಸಾಧ್ಯತೆ ಇದ್ದು, ಇದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಇಂತಹ ಆರ್ಥೊಡಾಂಟಿಕ್ ತುರ್ತುಪರಿಸ್ಥಿತಿಗಳು ರೋಗಿಗಳಿಗೆ ಕಿರಿಕಿರಿ ಉಂಟು ಮಾಡುವುದು ಮಾತ್ರವೇ ಅಲ್ಲದೆ ಆರ್ಥೊಡಾಂಟಿಕ್ ಚಿಕಿತ್ಸಾ ಪ್ರಗತಿಯನ್ನು ಬಾಧಿಸಬಹುದಾಗಿದೆ.
ನೀವು ಆರ್ಥೊಡಾಂಟಿಕ್ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, ಕ್ರೀಡೆಯಲ್ಲಿ ಭಾಗವಹಿಸುವ ಸಂದರ್ಭ ಇದ್ದಲ್ಲಿ ಆ ಬಗ್ಗೆ ನಿಮ್ಮ ಆರ್ಥೊಡಾಂಟಿಕ್ ಮಾಹಿತಿ ಒದಗಿಸಬೇಕು. ಯಾವ ವಿಧವಾದ ಆಟೋಟದಲ್ಲಿ ನೀವು ಪಾಲ್ಗೊಳ್ಳುತ್ತೀರಿ ಎಂಬುದನ್ನು ಆಧರಿಸಿ ನಿಮ್ಮ ಆರ್ಥೊಡಾಂಟಿಕ್ ಚಿಕಿತ್ಸೆಯ ಬಗ್ಗೆ ಅವರು ನಿಮಗೆ ಅಗತ್ಯವಾದ ಸಲಹೆಗಳನ್ನು ನೀಡುತ್ತಾರೆ ಮತ್ತು ವಿವಿಧ ಕ್ರೀಡೆಗಳಿಗೆ ಸಂಬಂಧಿಸಿ ಆಟೋಟಗಳಿಂದ ಉಂಟಾಗಬಹುದಾದ ತೊಂದರೆಯನ್ನು ವಿಶ್ಲೇಷಿಸುತ್ತಾರೆ. ಮೌತ್ ಗಾರ್ಡ್ ಧರಿಸುವ ಬಗ್ಗೆ, ಆರ್ಥೊಡಾಂಟಿಕ್ ಚಿಕಿತೆಯ ಸಮಯವನ್ನು ಸರಿಹೊಂದಿಸುವ ಬಗ್ಗೆ ಅಥವಾ ಚಿಕಿತ್ಸೆಯ ಅವಧಿಯಲ್ಲಿ ಪರ್ಯಾಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಅವರು ಶಿಫಾರಸು ಮಾಡಬಹುದಾಗಿದೆ.
ನ್ಪೋರ್ಟ್ಸ್ ಮೌತ್‌ಗಾರ್ಡ್ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಬಾಯಿಯನ್ನು ರಕ್ಷಿಸುವುದಕ್ಕಿರುವ ರಕ್ಷಾ ಕವಚವು ಹಲ್ಲುಗಳು ಮತ್ತು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಉಂಟಾಗುವ ಪರಿಣಾಮಗಳ ನಡುವೆ ತಡೆಯಾಗಿ ಕೆಲಸ ಮಾಡುತ್ತದೆ; ಇದರಿಂದ ಬಾಯಿಗೆ ಉಂಟಾಗುವ ಹಾನಿ ಕಡಿಮೆಯಾಗುತ್ತದೆ. ನಿಮಗಾಗಿಯೇ ನಿಮ್ಮ ಆರ್ಥೊಡಾಂಟಿಕ್ ವಿನ್ಯಾಸಗೊಳಿಸಿ ತಯಾರಿಸಿದ ಮೌತ್ ಗಾರ್ಡ್ ನಿಮ್ಮ ನಿರ್ದಿಷ್ಟ ಆರ್ಥೊಡಾಂಟಿಕ್ ಸಾಮಗ್ರಿಗಳಿಗೆ ಸರಿಯಾಗಿ ಹೊಂದಾಣಿಕೆಯಾಗುವ ಮೂಲಕ ನಿಮಗೆ ಹೆಚ್ಚುವರಿ ಹಿತಾನುಭವ ಉಂಟಾಗುತ್ತದೆ. ಈ ವ್ಯಕ್ತಿನಿರ್ದಿಷ್ಟ ವಿನ್ಯಾಸದಿಂದಾಗಿ ಇಂತಹ ಮೌತ್ ಗಾರ್ಡ್‌ಗಳು ಬ್ರೇಸ್‌ಗಳ ಮೇಲೆ ಸರಿಯಾಗಿ ಕುಳಿತುಕೊಳ್ಳುವ ಮೂಲಕ ಬ್ರೇಸ್‌ಗಳು ಸ್ಥಾನಪಲ್ಲಟಗೊಳ್ಳುವ ಅಥವಾ ಹಾನಿಗೀಡಾಗುವ ಸಾಧ್ಯತೆ ಅತ್ಯಂತ ಕಡಿಮೆಯಾಗಿರುತ್ತದೆ. ಔಷಧ ಅಂಗಡಿಗಳಲ್ಲಿ ಮೌತ್‌ಗಾರ್ಡ್‌ಗಳು ಲಭ್ಯವಿವೆಯಾದರೂ ಅವುಗಳು ನಮ್ಮ ನಮ್ಮ ಅಗತ್ಯಕ್ಕೆ ತಕ್ಕಂತೆ ಇಲ್ಲದೆ ಸರಿಯಾದ ಸುರಕ್ಷೆ ಅಥವಾ ಹಿತಾನುಭವವನ್ನು ಒದಗಿಸುವ ಸಾಧ್ಯತೆ ಕಡಿಮೆ.
ಭಾಗವಹಿಸುವ ಕ್ರೀಡೆಯ ಗುಣಲಕ್ಷಣಗಳನ್ನು ಆಧರಿಸಿ ಹೆಲ್ಮೆಟ್, ಮುಖ ಕವಚ ಅಥವಾ ಗಾಗಲ್‌ಗಳನ್ನು ಧರಿಸುವುದರಿಂದ ಮುಖಕ್ಕೆ ಮತ್ತು ಹಲ್ಲುಗಳಿಗೆ ಉಂಟಾಗಬಹುದಾದ ಸಂಭಾವ್ಯ ಗಾಯಗಳ ವಿರುದ್ಧ ಹೆಚ್ಚುವರಿ ರಕ್ಷಣೆಯನ್ನು ಪಡೆಯಬಹುದಾಗಿದೆ. ಫುಟಬಾಲ್ ಅಥವಾ ಹಾಕಿಯಂತಹ ಪ್ರತಿಸ್ಪರ್ಧಿ ತಂಡದ ಆಟಗಾರರ ಜತೆಗೆ ಢಿಕ್ಕಿ ಉಂಟಾಗುವ ಅಪಾಯ ಹೆಚ್ಚು ಇರುವ ಆಟಗಳಲ್ಲಿ ಹೆಲ್ಮೆಟ್ ಧರಿಸುವುದು ಹೆಚ್ಚು ಮುಖ್ಯವಾಗಿರುತ್ತದೆ. ಮೌತ್‌ಗಾರ್ಡ್ ಮತ್ತು ಮುಖ ಕವಚ ಇರುವ ಹೆಲ್ಮೆಟ್ ಎರಡನ್ನೂ ಧರಿಸಿದರೆ ಹಲ್ಲುಗಳು ಮಾತ್ರವಲ್ಲದೆ ತುಟಿಗಳು, ಗಲ್ಲ ಮತ್ತು ದವಡೆಗಳಿಗೆ ಕೂಡ ರಕ್ಷಣೆ ದೊರೆಯುತ್ತದೆ.
ಅತ್ಯಂತ ಹೆಚ್ಚು ವೇಗದ ಚಲನೆಯನ್ನು ಒಳಗೊಳ್ಳುವ ಬಾಸ್ಕೆಟ್‌ಬಾಲ್, ವಾಲಿಬಾಲ್, ಸೈಕ್ಲಿಂಗ್ ಅಥವಾ ಸ್ಕೇಟಿಂಗ್‌ನಂತಹ ಆಟಗಳಲ್ಲಿ ಪಾಲ್ಗೊಳ್ಳುವಾಗ ಇಂತಹ ರಕ್ಷಣಾತ್ಮಕ ಕವಚಗಳು ನಮ್ಮ ಕಣ್ಣುಗಳು, ಮೂಗು, ಬಾಯಿಗಳಿಗೆ ರಕ್ಷಣೆ ಒದಗಿಸುವ ಮೂಲಕ ಗಾಯಗಳು ಉಂಟಾಗುವ ಅಪಾಯವನ್ನು ತಗ್ಗಿಸುತ್ತವೆ. ಹೆಲ್ಮೆಟ್ ಖರೀದಿಸುವಾಗ ನಿಮ್ಮ ಆರ್ಥೊಡಾಂಟಿಕ್ ಸಾಮಗ್ರಿಗಳಿಗೂ ಸ್ಥಳಾವಕಾಶ ಇರುವಷ್ಟು ದೊಡ್ಡದನ್ನೇ ಆರಿಸಿದರೆ ಸಂಭಾವ್ಯ ಕಿರಿಕಿರಿ ಅಥವಾ ಬ್ರೇಸ್‌ಗಳಿಗೆ ಹಾನಿಯನ್ನು ತಪ್ಪಿಸಬಹುದಾಗಿದೆ.
ಬ್ರ್ಯಾಕೆಟ್ ಅಥವಾ ತಂತಿ ತುಂಡಾದಂತಹ ಆರ್ಥೊಡಾಂಟಿಕ್ ತುರ್ತುಪರಿಸ್ಥಿತಿಗಳಲ್ಲಿ ಅಗತ್ಯ ಮುಂಜಾಗ್ರತೆಗಳನ್ನು ಅನುಸರಿಸುವುದನ್ನು ಕ್ರೀಡಾಳುಗಳು ಮರೆಯಬಾರದು. ಬ್ರೇಸ್ ಗಳ ಮೊನಚಾದ ಅಂಚುಗಳಿಂದ ಹಾನಿ, ಗಾಯ ಉಂಟಾಗುವುದನ್ನು ತಾತ್ಕಾಲಿಕವಾಗಿ ತಡೆಯಲು ಆರ್ಥೊಡಾಂಟಿಕ್ ವ್ಯಾಕ್ಸ್ ಉಪಯೋಗಿಸಬಹುದಾಗಿದೆ. ಇದರಿಂದ ಬಾಯಿಯ ಮೃದು ಅಂಗಾಂಶಗಳಿಗೆ ಗಾಯ ಉಂಟಾಗುವುದನ್ನು ತಡೆಯಬಹುದಾಗಿದೆ.
ಆರ್ಥೊಡಾಂಟಿಕ್ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವ ಕ್ರೀಡಾಳುಗಳು ತಮ್ಮ ಆರ್ಥೊಡಾಂಟಿಸ್ಟ್‌ರಿಂದ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ಮುಖ್ಯ. ಇಂತಹ ತಪಾಸಣೆಗಳ ವೇಳೆ ಆರ್ಥೊಡಾಂಟಿಸ್ಟ್ ಚಿಕಿತ್ಸೆಯಲ್ಲಿ ಆಗಿರುವ ಪ್ರಗತಿ ಮತ್ತು ಉಂಟಾಗಿರಬಹುದಾದ ಯಾವುದೇ ಸಮಸ್ಯೆಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಯಾವುದೇ ತೊಂದರೆ ಅಥವಾ ಅಸಹಜ ಅನುಭವ ಉಂಟಾಗಿದ್ದಲ್ಲಿ ನಿರ್ಲಕ್ಷಿಸಬಾರದು ಮತ್ತು ಕೂಡಲೇ ಆರ್ಥೊಡಾಂಟಿಸ್ಟ್‌ರಿಗೆ ತಿಳಿಸಬೇಕು, ಹೀಗೆ ಮಾಡುವುದರಿಂದ ಸಮಸ್ಯೆ ಉಲ್ಬಣಗೊಳ್ಳದಂತೆ ಕೂಡಲೇ ಚಿಕಿತ್ಸೆ ಒದಗಿಸುವುದು ಅಥವಾ ಆಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗುತ್ತದೆ.
ಬ್ರೇಸ್ ಧರಿಸಿರುವ ಕ್ರೀಡಾಳುಗಳು ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ಹಲ್ಲುಜ್ಜುವುದು, ಫ್ಲಾಸ್ ಮಾಡುವುದು ಮತ್ತು ಆರ್ಥೊಡಾಂಟಿಕ್ ಸ್ನೇಹಿ ಬಾಯಿಯ ಆರೈಕೆ ಉತ್ಪನ್ನಗಳ ಬಳಕೆಯಿಂದ ಹಲ್ಲು ಹುಳುಕು, ವಸಡುಗಳ ಕಾಯಿಲೆ ಅಥವಾ ಹಲ್ಲುಗಳ ಮೇಲೆ ಬಿಳಿ ಕಲೆಗಳು ಉಂಟಾಗುವುದಕ್ಕೆ ಕಾರಣವಾಗಬಹುದಾದ ಕೊಳೆ ಮತ್ತು ಬ್ಯಾಕ್ಟೀರಿಯಾ ಶೇಖರಣೆಯಾಗುವುದು ತಪ್ಪುತ್ತದೆ.
ಸರಿಯಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮತ್ತು ನೀರು ಸಹಿತ ಸಾಕಷ್ಟು ದ್ರವಾಹಾರಗಳ ಸೇವನೆ ಉತ್ತಮ ಕ್ರೀಡಾ ಪ್ರದರ್ಶನ ಮತ್ತು ಬಾಯಿಯ ಆರೋಗ್ಯವೆರಡರ ದೃಷ್ಟಿಯಿಂದಲೂ ಅತ್ಯಗತ್ಯವಾಗಿದೆ. ಸಕ್ಕರೆ ಬೆರೆತ ಮತ್ತು ಆಮ್ಲೀಯ ಪಾನೀಯಗಳ ಸೇವನೆಯಿಂದ ಹಲ್ಲು ಹುಳುಕು ಮತ್ತು ಖನಿಜಾಂಶ ನಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ಇವುಗಳನ್ನು ತ್ಯಜಿಸಬೇಕು. ಅದರ ಬದಲಾಗಿ ಬಾಯಿಯಲ್ಲಿ ಉಳಿದಿರಬಹುದಾದ ಆಹಾರದ ತುಣುಕುಗಳನ್ನು ನಿವಾರಿಸಬಲ್ಲ ಶುದ್ದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನಂಶವೂ ಚೆನ್ನಾಗಿರುತ್ತದೆ, ಬಾಯಿಯ ಆರೋಗ್ಯವೂ ಕಾಪಾಡಲ್ಪಡುತ್ತದೆ. ಗಟ್ಟಿಯಾದ, ಅಂಟಾದ ಅಥವಾ ಗರಿಗರಿಯಾದ ಆಹಾರ ವಸ್ತುಗಳು ಬ್ರೇಸ್‌ಗಳಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಇದ್ದು, ಇವುಗಳನ್ನು ವರ್ಜಿಸಬೇಕು.
ಅಂತಿಮವಾಗಿ ಆರ್ಥೊಡಾಂಟಿಕ್ಸ್ ಮತ್ತು ಕ್ರೀಡೆ ಜತೆಗೂಡಿ ಸುಂದರ ಮುಖ ಮತ್ತು ನಗುವಿಗೆ ಕಾರಣವಾಗುವುದು ಮಾತ್ರವಲ್ಲದೆ ಆಟದ ಅಂಗಣದ ಒಳಗೆ ಮತ್ತು ಹೊರಗೆ ಕ್ರೀಡಾಳುವಿನ ಆತ್ಮವಿಶ್ವಾಸ ವರ್ಧನೆ, ಗರಿಷ್ಠ ಮಟ್ಟದ ದಂತ ಆರೋಗ್ಯಕ್ಕೆ ಕಾರಣವಾಗುತ್ತವೆ.
ಇಷ್ಟು ಮಾತ್ರವಲ್ಲದೆ ನಿಮ್ಮ ತರಬೇತಿದಾರರು ಮತ್ತು ತಂಡದ ಸದಸ್ಯರ ಜತೆಗೆ ನಿಮ್ಮ ಆರ್ಥೊಡಾಂಟಿಕ್ ಚಿಕಿತ್ಸೆ ಮತ್ತು ನೀವು ಧರಿಸಿರುವ ಆರ್ಥೊಡಾಂಟಿಕ್ ಸಾಮಗ್ರಿಗಳ ಬಗ್ಗೆ ಮುಕ್ತವಾದ ಮಾತುಕತೆ ನಡೆಸುವುದರಿಂದ ಅವರ ತಿಳಿವಳಿಕೆ ಹೆಚ್ಚುತ್ತದೆ, ನಿಮಗೆ ಹೆಚ್ಚುವರಿ ಬೆಂಬಲ ಸಿಗುತ್ತದೆ; ಇವೆಲ್ಲವೂ ಜತೆಗೂಡಿ ಸುರಕ್ಷೆಯೇ ಮೊದಲ ಆದ್ಯತೆಯಾಗಿರುವ ವಾತಾವರಣ ನಿರ್ಮಾಣಕ್ಕೆ ಕಾರಣವಾಗುತ್ತದೆ. ಆರ್ಥೊಡಾಂಟಿಕ್ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದೇ ಆದರೆ ನೀವು ನಿಮ್ಮ ಸುರಕ್ಷೆಯನ್ನು ಕಾಯ್ದುಕೊಂಡು ಬಾಯಿಯ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಸ್ವಲ್ಪ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆರ್ಥೊಡಾಂಟಿಕ್ ಆರೈಕೆಯನ್ನು ಮೊದಲ ಆದ್ಯತೆಯಾಗಿ ಇರಿಸಿಕೊಂಡು ರಕ್ಷಣಾತ್ಮಕ ಕ್ರಮಗಳನ್ನು ಮತ್ತು ಪರಿಣತರ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ಕ್ರೀಡಾಳುಗಳು ಆಟೋಟಗಳ ಲಾಭಗಳನ್ನು ಪಡೆಯುವುದರ ಜತೆಗೆ ವಿಜಯ ನಗುವನ್ನು ಅರಳಿಸಬಹುದಾಗಿದೆ.
– ಡಾ| ರಮ್ಯಾ ವಿಜೇತಾ ಜತ್ತನ್ನ ರೀಡರ್, ಆರ್ಥೊಡಾಂಟಿಕ್ಸ್ ಮತ್ತು ಡೆಂಟೊಫೇಶಿಯಲ್ ಆರ್ಥೊಡಾಂಟಿಕ್ಸ್ ವಿಭಾಗ, ಎಂಸಿಒಡಿಎಸ್, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dental Checkup: ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ
Landslide Survivors: ಭೂಕುಸಿತದಿಂದ ಪಾರಾದವರಿಗೆ ಆಘಾತದಿಂದ ಚೇತರಿಸಿಕೊಳ್ಳಲು ಮಾರ್ಗದರ್ಶಿ
Cancer Symptoms: ಕ್ಯಾನ್ಸರ್‌ನ ಸಾಮಾನ್ಯವಲ್ಲದ ಲಕ್ಷಣಗಳು
Weight gain: ಕ್ರೀಡಾಳುಗಳಲ್ಲಿ ತೂಕ ಗಳಿಕೆ- ದೈಹಿಕ, ಮಾನಸಿಕ ಪರಿಣಾಮಗಳ ನಿರ್ವಹಣೆ
Infant’s Immune System: ಶಿಶುವಿನ ರೋಗ ನಿರೋಧಕ ವ್ಯವಸ್ಥೆಗ ಸ್ತನ್ಯಪಾನದಿಂದ ಪ್ರಯೋಜನಗಳು
MUST WATCH
ಹೊಸ ಸೇರ್ಪಡೆ
Congress ಒಳಗೊಳಗೆ ಸಿಎಂ ಕುರ್ಚಿಗಾಗಿ ನಾಯಕರು ಸಾಲುಗಟ್ಟಿ ನಿಂತಿದ್ದಾರೆ: ಜೋಶಿ
Viral Video: ಮಗಳ ರಕ್ಷಣೆಗಾಗಿ ತಲೆ ಮೇಲೆ ಸಿಸಿಟಿವಿ ಅಳವಡಿಸಿದ ತಂದೆ.! ಎಲ್ಲಿ ಇದು?
KSRTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಮೂರ್ಛೆರೋಗ!
Hubli; ಪ್ರಹ್ಲಾದ ಜೋಶಿ ನಿವಾಸದೆದುರು ರೈತ ಹೋರಾಟಗಾರ ಆಕ್ರೋಶ
Haryana; ಭರ್ಜರಿ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.