ಠಾಕೂರ್‌ ವರ್ಸಸ್‌ ಠಾಕೂರ್‌

Team Udayavani, May 16, 2019, 6:00 AM IST

ಹಿಮಾಚಲ ಪ್ರದೇಶದ ಹಮೀರ್‌ಪುರವು ಬಿಸಿಸಿಐನ ಮಾಜಿ ಅಧ್ಯಕ್ಷ, ಬಿಜೆಪಿಯ ಅನುರಾಗ್‌ ಠಾಕೂರ್‌ರ ಸಂಸದೀಯ ಕ್ಷೇತ್ರ. ಮೂರು ಬಾರಿ ಈ ಕ್ಷೇತ್ರದಿಂದ ಗೆದ್ದಿರುವ ಅನುರಾಗ್‌ ಠಾಕೂರ್‌, ಈಗ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಈ ಬಾರಿ ಕ್ಷೇತ್ರದಲ್ಲಿ ಅನುರಾಗ್‌ ವಿರೋಧಿ ಅಲೆ ಇದೆ ಎಂದು ಕಾಂಗ್ರೆಸ್‌ ಹೇಳುತ್ತದಾದರೂ, ಅನುರಾಗ್‌ ಠಾಕೂರ್‌ ಚೌಕಾ ಬಾರಿಸಲಿದ್ದಾರೆ (4ನೇ ಗೆಲುವು) ಎನ್ನುತ್ತಾರೆ ರಾಜಕೀಯ ಪಂಡಿತರು. ಅನುರಾಗ್‌ ಠಾಕೂರರಿಗೆ ಎದುರಾಳಿಯಾಗಿ ಕಾಂಗ್ರೆಸ್‌, ನಿವೃತ್ತ ಕ್ರೀಡಾಪಟು ಮತ್ತು ಐದು ಬಾರಿಯ ಶಾಸಕ ರಾಮ್‌ಲಾಲ್‌ ಠಾಕೂರ್‌ರನ್ನು ಕಣಕ್ಕೆ ಇಳಿಸಿದೆ. ತನ್ಮೂಲಕ ಈ ಹೋರಾಟವು ಠಾಕೂರ್‌ ವರ್ಸಸ್‌ ಠಾಕೂರ್‌ ರೂಪ ಪಡೆದಿದೆ.

ಹಾಗೆ ನೋಡಿದರೆ ಹಮೀರ್‌ಪುರ ಲೋಕಸಭಾ ಕ್ಷೇತ್ರವು ಮೊದಲಿನಿಂದಲೂ ಬಿಜೆಪಿಯ ಹಿಡಿತದಲ್ಲೇ ಇದೆ. ಅನುರಾಗ್‌ ಠಾಕೂರ್‌ ಅವರಿಗಿಂತ ಮುನ್ನ, ಅವರ ತಂದೆ ಪ್ರೇಮ್‌ ಕುಮಾರ್‌ ಧುಮಲ್‌ ಈ ಕ್ಷೇತ್ರದ ಸಂಸದರಾಗಿದ್ದರು. ಪ್ರೇಮ್‌ ಕುಮಾರ್‌ ಅವರು 2008ರಲ್ಲಿ ಹಿಮಾಚಲಪ್ರದೇಶದ ಮುಖ್ಯಮಂತ್ರಿಯಾಗುವ ವೇಳೆ ಈ ಕ್ಷೇತ್ರವನ್ನು ತೆರವುಗೊಳಿಸಿದ್ದರು.

ಕಳೆದ 30 ವರ್ಷಗಳಲ್ಲಿ ಹಮೀರ್‌ಪುರದಲ್ಲಿ ಕಾಂಗ್ರೆಸ್‌ ಕೇವಲ 1 ಬಾರಿ ಮಾತ್ರ ಗೆದ್ದಿದೆ. ಆದರೆ ಈ ಬಾರಿ ಕಾಂಗ್ರೆಸ್‌ನ ಹಿರಿಯ ನಾಯಕ 67 ವರ್ಷದ ರಾಮ್‌ಲಾಲ್‌ ಠಾಕೂರ್‌ ಅವರ ಪ್ರವೇಶದಿಂದಾಗಿ ಚಿತ್ರಣ ಬದಲಾಗಬಹುದು ಎನ್ನುತ್ತಿದೆ. ಈ ಕ್ಷೇತ್ರದಲ್ಲಿ 8 ಲಕ್ಷ 35 ಸಾವಿರ ಮತದಾರರಿದ್ದು , 2014ರಲ್ಲಿ ಅನುರಾಗ್‌ ಠಾಕೂರ್‌ ಅವರು ಕಾಂಗ್ರೆಸ್‌ನ ರಾಜೇಂದ್ರ ಸಿಂಗ್‌ ರಾಣಾರನ್ನು 1 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿಯೂ ಅವರು ಇಷ್ಟೇ ಸಕ್ಷಮವಾಗಿ ಗೆಲುವು ಸಾಧಿಸುತ್ತಾರಾ ಎನ್ನುವುದೇ ಪ್ರಶ್ನೆ. ಹಮೀರ್‌ಪುರ ಸಂಸದೀಯ ಕ್ಷೇತ್ರದಲ್ಲಿ ಒಟ್ಟು 17 ವಿಧಾನಸಭಾ ಸೀಟುಗಳು ಇವೆ. ಇವುಗಳಲ್ಲಿ 6ರಲ್ಲಿ ಕಾಂಗ್ರೆಸ್‌, ಒಂದರಲ್ಲಿ ಪಕ್ಷೇತರರು ಮತ್ತು 10 ಸೀಟುಗಳಲ್ಲಿ ಬಿಜೆಪಿ ಇದೆ. ಅನುರಾಗ್‌ ಠಾಕೂರ್‌ ಅವರಿಗೆ ಹಮೀರ್‌ಪುರ ಕ್ಷೇತ್ರದಲ್ಲಿ ಬರುವ ಸುಜಾನಪುರ ವಿಧಾನಸಭಾ ಕ್ಷೇತ್ರದ ಜನಮತವನ್ನು ಗಳಿಸುವುದೇ ಪ್ರಮುಖ ಸವಾಲಾಗಿದೆ.
ಏಕೆಂದರೆ, ಕಳೆದ ಬಾರಿಯ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅನುರಾಗ್‌ರ ತಂದೆ, ಮಾಜಿ ಸಿಎಂ ಪ್ರೇಮ್‌ ಕುಮಾರ್‌ ಅವರು ಈ ಕ್ಷೇತ್ರದಿಂದ ಸೋಲುಂಡಿದ್ದರು. ಆದರೆ ಮಾಜಿ ಸಿಎಂರನ್ನು ಸೋಲಿಸಿದ ಬೇಸರ ಜನರಲ್ಲಿ ಈಗ ಮಡುಗಟ್ಟಿದ್ದು, ಅವರು ಅನುರಾಗ್‌ರನ್ನು ಬೆಂಬಲಿಸುವ ಮೂಲಕ ಆ ಬೇಸರವನ್ನು ಕಳೆದುಕೊಳ್ಳಲಿದ್ದಾರೆ ಎನ್ನುವ ವಿಚಿತ್ರ ತರ್ಕ ಎದುರಿಡುತ್ತಾರೆ ಬಿಜೆಪಿ ಬೆಂಬಲಿಗರು. ಕೆಲವು ವರ್ಷಗಳಿಂದ ಅನುರಾಗ್‌ರ ಮೇಲೆ ಈ ಕ್ಷೇತ್ರದ ಜನರಿಗೆ ಅಸಮಾಧಾನ ಬೆಳೆದಿದೆ ಎನ್ನುವುದು ಸುಳ್ಳಲ್ಲ. ಅನುರಾಗ್‌ ಅವರು ಚುನಾವಣೆ ಸಮಯದಲ್ಲಿ ನೀಡುವ ಭರವಸೆಗಳಾವುವೂ ಈಡೇರುವುದಿಲ್ಲ ಎನ್ನುವುದು ಕಾಂಗ್ರೆಸ್ಸಿಗರ ಆರೋಪ. ರೈಲ್ವೆ ಲೈನ್‌ ವಿಸ್ತರಣೆಯಲ್ಲಿ ಆಗುತ್ತಿರುವ ವಿಳಂಬ, ನಿರುದ್ಯೋಗದ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳು ಕ್ಷೇತ್ರದಲ್ಲಿ ಇವೆ. ಆದರೆ ತಂದೆಯ ಸೋಲಿನ ನಂತರ ಎಚ್ಚೆತ್ತುಕೊಂಡ ಅನುರಾಗ್‌ ಠಾಕೂರ್‌ ಹಮೀರ್‌ಪುರದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

ಮೋದಿ ಫ್ಯಾಕ್ಟರ್‌: ಕಾರ್ಗಿಲ್‌ ಯುದ್ಧದಲ್ಲಿ ತಮ್ಮ ಮಗ ಅಮೋಲ್‌ ಕಾಲಿಯಾರನ್ನು ಕಳೆದುಕೊಂಡ ಚಿಂತಪೂರ್ಣಿ ಮಂದಿರದ ಪ್ರಧಾನ ಅರ್ಚಕ ಕುಲದೀಪ್‌ ಚಂದ್‌ ಕಾಲಿಯಾ ಅವರು “ಕ್ಷೇತ್ರದಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿಯೇನೂ ಆಗಿಲ್ಲವಾದರೂ, ಅಭಿವೃದ್ಧಿಯೇ ಆಗಿಲ್ಲ ಎನ್ನುವುದು ಸುಳ್ಳು’ ಎನ್ನುತ್ತಾರೆ. ಪುಲ್ವಾಮಾ ಉಗ್ರ ಘಟನೆಯ ನಂತರ ಮೋದಿಯವರು ಏರ್‌ಸ್ಟ್ರೈಕ್‌ ಮೂಲಕ ಪಾಕಿಸ್ತಾನಕ್ಕೆ ನೀಡಿದ ಎದಿರೇಟಿನಿಂದಾಗಿ ಪ್ರಪಂಚದಾದ್ಯಂತ ಭಾರತದ ಪ್ರತಿಷ್ಠೆ ಹೆಚ್ಚಾಗಿದೆ ಎನ್ನುವ ಕುಲದೀಪ್‌ ಚಾಂದ್‌ ಅವರು, “ಒಂದು ವೇಳೆ ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಮೋದಿಯವರೇನಾದರೂ ಪ್ರಧಾನಿಯಾಗಿದ್ದರೆ, ಇಂದು ತಮ್ಮ ಮಗ ಅಭಿನಂದನ್‌ರಂತೆ ಜೀವಂತವಾಗಿರುತ್ತಿದ್ದ’ ಎಂದು ಮಾತು ಮುಗಿಸುತ್ತಾರೆ. ಮೇ. 19ರಂದು ಹಮೀರ್‌ಪುರದಲ್ಲಿ ಮತದಾನ ನಡೆಯಲಿದ್ದು, ಯಾವ ಠಾಕೂರ್‌ಗೆ ಜನರ ಮೊಹರು ಬೀಳುತ್ತದೋ ತಿಳಿಯಲಿದೆ.

ಈ ಬಾರಿ ಕಣದಲ್ಲಿ
ಅನುರಾಗ್‌ ಠಾಕೂರ್‌ (ಬಿಜೆಪಿ)
ರಾಮ್‌ಲಾಲ್‌ ಠಾಕೂರ್‌(ಕಾಂಗ್ರೆಸ್‌)


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ