ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್ಗೆ ಭರ್ಜರಿ ಗೆಲುವು
Team Udayavani, Jun 19, 2021, 2:22 AM IST
ಬ್ರಸಿಲಿಯಾ (ಬ್ರಝಿಲ್) : “ಕೊಪಾ ಅಮೆರಿಕ ಫುಟ್ಬಾಲ್’ ಪಂದ್ಯಾವಳಿಯಲ್ಲಿ ಬ್ರಝಿಲ್ ತಂಡ ಪೆರು ವಿರುದ್ಧ 4-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದೆ.
ಏಕಪಕ್ಷೀಯವಾಗಿ ಸಾಗಿದ ಈ ಪಂದ್ಯದಲ್ಲಿ ಡಿಫೆಂಡರ್ ಅಲೆಕ್ಸಾಂಡ್ರೊ 12ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ಖಾತೆ ತೆರೆದರು. ಬಳಿಕ ನೇಮರ್, ವರ್ಟನ್ ರಿಬೈರೊ, ರಿಚಾರ್ಲಿಸನ್ ಅವರಿಂದ ಗೋಲುಗಳು ಸಿಡಿದವು. ಬ್ರಝಿಲ್ ಆಕ್ರಮಣಕಾರಿ ಆಟದ ಮುಂದೆ ಪೆರು ಸಂಪೂರ್ಣ ಮಂಕಾಯಿತು.
ಬ್ರಝಿಲ್ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿ “ಎ’ ವಿಭಾಗದಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಕೊಲಂಬಿಯಾ ದ್ವಿತೀಯ (4), ವೆನಿಜುವೆಲಾ (1) ತೃತೀಯ ಸ್ಥಾನದಲ್ಲಿದೆ.
ಯೂರೋ ಕಪ್: ನೆದರ್ಲೆಂಡ್ಸ್ ಜಯ
ಆಮ್ಸ್ಟರ್ಡಮ್: ಆಸ್ಟ್ರಿಯಾ ವಿರುದ್ಧ ಅಮೋಘ ಆಟವಾಡಿದ ನೆದರ್ಲೆಂಡ್ಸ್ ಯೂರೋ ಕಪ್ ಫುಟ್ಬಾಲ್ ಪಂದ್ಯಾವಳಿಯ “ರೌಂಡ್ ಆಫ್ 16′ ಪ್ರವೇಶಿಸಿದೆ. “ಸಿ’ ವಿಭಾಗದ ಮುಖಾಮುಖೀಯಲ್ಲಿ ಡಚ್ಚರ ಪಡೆ 2-0 ಅಂತರದ ಗೆಲುವು ಸಾಧಿಸಿತು.