ಸಾರವರ್ಧಿತ ಅಕ್ಕಿ: ಜಾಗೃತಿಗೆ ಆಹಾರ ಇಲಾಖೆ ಸೂಚನೆ
Team Udayavani, Feb 3, 2023, 6:25 AM IST
ಪುತ್ತೂರು : ಪಡಿತರ ಅಂಗಡಿಗಳಲ್ಲಿ ಸಾದಾ ಅಕ್ಕಿಯ ಜತೆಗೆ ಮಿಶ್ರಣ ಮಾಡಿ ನೀಡಲಾಗುತ್ತಿರುವ ಸಾರವರ್ಧಿತ ಅಕ್ಕಿಯ ಬಗ್ಗೆ ಜನರಲ್ಲಿ ಇರುವ ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಆಹಾರ ಇಲಾಖೆ ಮತ್ತಷ್ಟು ಪರಿಣಾಮಕಾರಿ ಕ್ರಮಕ್ಕೆ ಮುಂದಾಗಿದ್ದು ಎಲ್ಲ ಪಡಿತರ ಸಾಮಗ್ರಿ ವಿತರಣ ಅಂಗಡಿಗಳಲ್ಲಿ ಕರಪತ್ರ ಪ್ರದರ್ಶಿಸಲು ಸೂಚನೆ ನೀಡಿದೆ.
ಸಾರವರ್ಧಿತ ಅಕ್ಕಿಯ ಗಾತ್ರ, ಬಣ್ಣವನ್ನು ಕಂಡು ಇದು ಪ್ಲಾಸ್ಟಿಕ್ ಅಕ್ಕಿ ಕಾಳಿನಂತಿದೆ ಎಂದು ಫಲಾನುಭವಿಗಳು ಆತಂಕ ಪಡುತ್ತಿರುವ ಪ್ರಕರಣ ಅಲ್ಲಲ್ಲಿ ಕಂಡು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಉದಯವಾಣಿ ಫೆ. 2ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ದ.ಕ. ಆಹಾರ ಇಲಾಖೆಯ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ.