ವೀಳ್ಯದೆಲೆಗೀಗ ಭಾರೀ ಡಿಮ್ಯಾಂಡ್!
Team Udayavani, Feb 8, 2023, 11:30 AM IST
ವಿಜಯಪುರ: ಬಸವನಾಡಿನಲ್ಲಿ ರಫ್ತು ಗುಣಮಟ್ಟದವೀಳ್ಯದೆಲೆ ಬೆಳೆಯುತ್ತಿದ್ದು, ಬೆಲೆ ಏರಿಕೆಯಾಗಿ ಈಗ ಜಿಲ್ಲೆಯ ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ವೀಳ್ಯದೆಲೆಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬೆಳೆಯಲಾಗುತ್ತಿದೆ. ಕೊಲ್ಹಾರ ಬಳಿಯ ಕೂಡಗಿ ಗ್ರಾಮದಲ್ಲಿ ವೀಳ್ಯದೆಲೆಯ ಮಾರುಕಟ್ಟೆಯೇ ಇದ್ದು, ಇಲ್ಲಿ ನಿತ್ಯವೂ ವೀಳ್ಯದೆಲೆ ವ್ಯಾಪಾರ ನಡೆಯುತ್ತದೆ. ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲ ಮಹಾರಾಷ್ಟ್ರದಮುಂಬೈ, ಪುಣೆ, ಸೊಲ್ಲಾಪುರ, ಬೀಡ್, ತೆಲಂಗಾಣದ ಹೈದ್ರಾಬಾದ್ ಸೇರಿದಂತೆ ವಿವಿಧ ಕಡೆಗಳಲ್ಲಿ ವೀಳ್ಯದೆಲೆಗೆ ಭಾರೀ ಬೇಡಿಕೆ ಇದೆ.
ವೀಳ್ಯದೆಲೆಯನ್ನು ಈ ಭಾಗದ ಜನರು ಹೆಚ್ಚಾಗಿ ಬಳಸುತ್ತಾರೆ. ಈಚೆಗೆ ಆಯುರ್ವೇದ ಔಷಧ ಕಂಪನಿಗಳು ಕೆಮ್ಮು, ಕಫದಂಥ ರೋಗಗಳಿಗೆ ಔಷಧ ತಯಾರಿಸಲು ಬಳಸುತ್ತಿವೆ. ಇದರಿಂದಾಗಿ ರೈತರೊಂದಿಗೆ ನೇರ ವ್ಯವಹಾರ ನಡೆಸಿ ಖರೀದಿಗೆ ಮುಂದಾಗಿದ್ದು ಹೂಡಿದ ಬಂಡಳವಾಳಕ್ಕೆ ನಷ್ಟವಿಲ್ಲದಂತೆ ಬೆಲೆ ಲಾಭ ಸಿಗುತ್ತಿದೆ. ಜಿಲ್ಲೆಯಲ್ಲಿ ಅಂಬಾಡಿ ತಳಿಯ ವೀಳ್ಯದೆಲೆ ಬೆಳೆಯಲಾಗುತ್ತಿದ್ದು, ಕೊಲ್ಹಾರ ತಾಲೂಕಿನ ಕೂಡಗಿ, ಮಲಘಾಣ, ತಳೇವಾಡ, ಮಸೂತಿ, ಗೊಳಸಂಗಿ, ಮುತ್ತಗಿ ಪರಿಸರದ ಮಣ್ಣಿನಲ್ಲಿ ಬೆಳೆಯುವ ವೀಳ್ಯದೆಲೆ ವಿಶೇಷ ಸ್ವಾದ ಹೊಂದಿದೆ ಎಂಬ ಕಾರಣಕ್ಕೆ ಭಾರಿ ಬೇಡಿಕೆ ಇದೆ.
ಉತ್ತಮ ಬೆಲೆಯೊಂದಿಗೆ ಮಾರಾಟ ಆಗುತ್ತದೆ. ಕೊಲ್ಹಾರ ತಾಲೂಕು ಮಾತ್ರವಲ್ಲ ವಡವಡಗಿ, ಮನಗೂಳಿ ಸೇರಿದಂತೆ ಬಸವನ ಬಾಗೇವಾಡಿ ತಾಲೂಕಿನ ಹಲವು ಹಳ್ಳಿಗಳು, ಬಸರಕೋಡ ಸೇರಿದಂತೆ ಮುದ್ದೇಬಿಹಾಳ ತಾಲೂಕಿನ ವಿವಿಧ ಹಳ್ಳಿಗಳು, ವಿಜಯಪುರ ತಾಲೂಕಿನ ರೋಣಿಹಾಳ, ಚಡಚಣ ತಾಲೂಕಿನ ಹಲವು ಹಳ್ಳಿಗಳು ಸೇರಿದಂತೆ ಜಿಲ್ಲೆಯಲ್ಲಿ ವೀಳ್ಯದೆಲೆ ಬೆಳೆಯುವ ರೈತರ ಸಂಖ್ಯೆ ಇದೀಗ ಹೆಚ್ಚುತ್ತಿದೆ.
ವೀಳ್ಯದೆಲೆ ಕೃಷಿಯಲ್ಲಿ ಸಾಂಪ್ರದಾಯಿಕ ಶೈಲಿಗಿಂತ ಇದೀಗ ವೈಜ್ಞಾನಿಕ ಪದ್ಧತಿ, ಆಧುನಿಕ ವಿಧಾನದಲ್ಲಿ ಹಸಿರು ಮನೆ, ನೆರಳಿನ ಮನೆ, ಪಾಲಿಹೌಸ್ ಸೇರಿದಂತೆ ವಿವಿಧ ರೀತಿಯ ಪದ್ಧತಿಯಲ್ಲೂ ವೀಳ್ಯದೆಲೆ ಬೆಳೆಯಲಾಗುತ್ತಿದೆ. ಸುಧಾರಿತ ಪದ್ಧತಿಯಲ್ಲಿ ಬೆಳೆಯುವ ವೀಳ್ಯದೆಲೆಯಿಂದ ಗುಣಮಟ್ಟ, ಇಳುವರಿ ಹೆಚ್ಚು ಸಿಗುತ್ತಿದೆ. ತೋಟಗಾರಿಕೆ ಇಲಾಖೆ ಮೂಲಕ ಸರ್ಕಾರ ಪರಿಶಿಷ್ಟರಿಗೆ ಶೇ.90, ಸಾಮಾನ್ಯ ವರ್ಗದ ರೈತರಿಗೆ ಶೇ.50 ರಿಯಾಯ್ತಿ ಸೌಲಭ್ಯ ನೀಡುತ್ತಿದೆ. ಕಾರಣ ಜಿಲ್ಲೆಯ ಹಲವು ರೈತರು ವೀಳ್ಯದೆಲೆ ಬೆಳೆಯುವಲ್ಲಿ ವಿಶೇಷ ಆಸಕ್ತಿ ತೋರುತ್ತಿದ್ದಾರೆ. ವೀಳ್ಯದೆಲೆಯನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆದಲ್ಲಿ ಪ್ರತಿ ಎಕರೆಗೆ ಸರಾಸರಿ ಮಾಸಿಕ 20-30 ಸಾವಿರ ನಿವ್ವಳ ಲಾಭ ಪಡೆಯಲು ಸಾಧ್ಯವಿದೆ.
ವೀಳ್ಯದೆಲೆ ಕೃಷಿ ಏನೆಲ್ಲ ತಾಂತ್ರಿಕತೆ, ಸುಧಾರಿತ ವೈಜ್ಞಾನಿಕ ಕ್ರಮ ಅಳವಡಿಸಿದರೂ ಕಾರ್ಮಿಕರ ಆಧಾರಿತ ಕೃಷಿ. ಅದರಲ್ಲೂ ಕೌಶಲ್ಯಯುಕ್ತ ಕಾರ್ಮಿಕರೇ ಈ ಕೃಷಿಯ ಬೆನ್ನೆಲುಬು. ಹೀಗಾಗಿ ಜಿಲ್ಲೆಯ ಕೌಶಲ್ಯಯುಕ್ತ ವೀಳ್ಯದೆಲೆ ಕಾರ್ಮಿಕರಿಗೆ ಭಾರಿ ಬೇಡಿಕೆಯೂ ಇದೆ. ಕೂಡಗಿ ಪರಿಸರದಲ್ಲಿರುವ ಕಾರ್ಮಿಕರು ಜಿಲ್ಲೆ ಮೂಲೆ ಮೂಲೆಗೆ ಕೆಲಸಕ್ಕೆ ಹೋಗುತ್ತಿದ್ದು, ಹೆಚ್ಚಿನ ಕೂಲಿಯನ್ನೂ ಪಡೆಯುತ್ತಿದ್ದಾರೆ. ಕಾರ್ಮಿಕರಿಗೆ ಹೆಚ್ಚಿನ ಕೂಲಿ ನೀಡಿಯೂ ರೈತರು ಉತ್ತಮ ಆದಾಯ, ಲಾಭ ಪಡೆಯಲು ಸಾಧ್ಯವಾಗಿದೆ. ವರ್ಷಪೂರ್ತಿ ಇಳುವರಿ ನೀಡಿದರೂ ವಿಜಯಪುರ ಜಿಲ್ಲೆಯ ಮಟ್ಟಿಗೆ ಡಿಸೆಂಬರ್-ಮಾರ್ಚ್‌ವರೆಗೆ ಬಳ್ಳಿಯನ್ನು ಇಳಿಸುವ ಕೆಲಸ ನಡೆಯುತ್ತದೆ. ಕಾರಣ ಈ ಹಂತದಲ್ಲಿ ಇಳುವರಿ ಸಹಜವಾಗಿ ಕುಂಠಿತವಾಗುತ್ತಿದೆ.
ಮತ್ತೂಂದೆಡೆ ಹಿಂದೂಗಳ ಹಬ್ಬಗಳು, ಮದುವೆ, ಗೃಹ ಪ್ರವೇಶಗಳಂಥ ಕಾರ್ಯಕ್ರಮಗಳಲ್ಲಿ ವೀಳ್ಯದೆಲೆಯನ್ನು ಬಳಸಲಾಗುತ್ತಿದೆ. ಈ ಹಂತದಲ್ಲಿ ಬೆಲೆಯೂ ಸಹಜವಾಗಿ ಏರಿಕೆ ಕಾಣುತ್ತಿದೆ. ಪರಿಣಾಮ ವೀಳ್ಯದೆಲೆ ಬೆಳೆಗಾರರಿಗೆ ಇದು ಹೆಚ್ಚು ಆದಾಯ ತರುವ ಹಿಗ್ಗಿನ ಕಾಲ ಎನಿಸಿದೆ.
20 ಸಾವಿರ ವೀಳ್ಯದೆಲೆಗೆ ಸದ್ಯ 2500 ರೂ. ಬೆಲೆ ಇದ್ದು, ಬೇಡಿಕೆ ಹೆಚ್ಚಾದ ಸಂದರ್ಭದಲ್ಲಿ ಇದು ದ್ವಿಗುಣವಾಗುತ್ತದೆ. ಹೆಚ್ಚಿನ ಆದಾಯ ತರುವ ಕೃಷಿಯಾದರೂ ಕೌಶಲ್ಯಯುಕ್ತ ಕಾರ್ಮಿಕರನ್ನು ಅವಲಂಬಿಸಿರುವ ಈ ಕೃಷಿಯಲ್ಲಿ ತೊಡಗುವ ಮುನ್ನ ಎಚ್ಚರಿಕೆ ಅಗತ್ಯ.
-ಗೋಪಾಲ ನಾಯಕ, ವೀಳ್ಯದೆಲೆ ಕೃಷಿಕ, ಸಾ| ವಡವಡಗಿ, ಬಸವನಬಾಗೇವಾಡಿ
ನಮ್ಮ ಭಾಗದಲ್ಲಿ ಸ್ಥಳೀಯ ವ್ಯಾಪಾರಿಗಳೇ ತೋಟಗಳನ್ನು ಗುತ್ತಿಗೆ ಪಡೆಯುವ, ಇಲ್ಲವೇ ವಾರ್ಷಿಕ ಒಂದೇ ಬೆಲೆಗೆ ಖರೀದಿಸುವ ಒಪ್ಪಂದ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ವರೆಗೆ ಬಹುತೇಕ ರೈತರಿಗೆ ಬೆಲೆ ನಷ್ಟದ ಸಂಕಷ್ಟ ಬಂದಿಲ್ಲ.
-ಶಂಕ್ರಯ್ಯ ಮಠಪತಿ, ವೀಳ್ಯದೆಲೆ ಕೃಷಿಕ, ಸಾ| ತಳೇವಾಡ ತಾ| ಕೊಲ್ಹಾರ
ವಿಜಯಪುರ ಜಿಲ್ಲೆಯಲ್ಲಿ ವೀಳ್ಯದೆಲೆ ಬೆಳೆಯಲು ಉತ್ತಮ ಮಣ್ಣಿನ ಗುಣ, ವಾತಾವಣರವಿದ್ದು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯುವ ಎಲೆಗೆ ಬೇಡಿಕೆ ಇದೆ. ಈಚೆಗೆ ವಿಳ್ಯದ ಎಲೆ ಬೆಳೆಯುವ ಪ್ರದೇಶವೂ ಹೆಚ್ಚುತ್ತಿದೆ.
-ಎಸ್.ಎಂ. ಬರಗಿಮಠ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ ವಿಜಯಪುರ
ವೈಜ್ಞಾನಿಕ ಪದ್ಧತಿಯಲ್ಲಿ ವೀಳ್ಯದೆಲೆ ಬೆಳೆಯುವ ರೈತರಿಗೆ ಸರ್ಕಾರ ವಿಶೇಷ ರಿಯಾಯ್ತಿ ನೀಡುವ ಯೋಜನೆ ರೂಪಿಸಿದೆ. ಪಾಲಿಹೌಸ್ ಸೇರಿದಂತೆ ಸುಧಾರಿತ ತಂತ್ರಜ್ಞಾನದಲ್ಲಿ ವೀಳ್ಯದೆಲೆ ಬೆಳೆದಲ್ಲಿ ಇಳುವರಿ-ಹೆಚ್ಚು ಇರುತ್ತದೆ. ಸಹಜವಾಗಿ ಉತ್ತಮ ಬೆಲೆಯೂ ಸಿಗುತ್ತಿದ್ದು ರೈತರು ವೀಳ್ಯದೆಲೆ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ.
-ಸಿ.ಬಿ. ಪಾಟೀಲ, ಎಸ್‌ಎಡಿಎಚ್‌ಒ, ಬಸವನಬಾಗೇವಾಡಿ
ಕೊಲ್ಹಾರ ಬಳಿಯ ಕೂಡಗಿ ಗ್ರಾಮದಲ್ಲಿ ವೀಳ್ಯದೆಲೆಯ ಮಾರುಕಟ್ಟೆಯೇ ಇದೆ
ಇಲ್ಲಿಯ ಎಲೆ ಮುಂಬೈ, ಪುಣೆ, ಸೊಲ್ಲಾಪುರ, ಬೀಡ್, ಹೈದ್ರಾಬಾದ್‌ಕ್ಕೂ ಹೋಗುತ್ತೆ
ಕೆಮ್ಮು, ಕಫದಂಥ ರೋಗಗಳಿಗೆ ಔಷಧ ತಯಾರಿಸಲು ಕಂಪನಿಗಳು ಬಳಸುತ್ತವೆ
-ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ
ಉರಿಗೌಡ-ನಂಜೇಗೌಡ ವಿಷಯ ರಾಜಕೀಯ ಲಾಭಕ್ಕೆ ಸಲ್ಲದು: ಸಿಎಂ ಬೊಮ್ಮಾಯಿ
ಯುಗಾದಿ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಂ.ಬಿ.ಪಾಟೀಲ
ಮೇಲ್ಮನೆ ವಿಪಕ್ಷದ ಸಚೇತಕ ರಾಠೋಡಗೆ ಮಾತೃವಿಯೋಗ
ಅಕಾಲಿಕ ಮಳೆಗೆ ಕೊಳೆಯುತ್ತಿದೆ ದ್ರಾಕ್ಷಿ ಬೆಳೆ; ವಿಜಯಪುರ ಜಿಲ್ಲೆ ಅನ್ನದಾತರು ಕಂಗಾಲು