
ವೆನ್ಲಾಕ್ ನಲ್ಲಿ ಹೆಚ್ಚುವರಿ ಕೋವಿಡ್ ಪರೀಕ್ಷಾ ಯಂತ್ರ ಅಳವಡಿಕೆ : ಕೋಟ
ಪರೀಕ್ಷಾ ವರದಿ ಶೀಘ್ರ ಲಭ್ಯ
Team Udayavani, May 1, 2021, 6:45 AM IST

ಮಂಗಳೂರು : ಕೊರೊನಾ ಪರೀಕ್ಷೆಯ ಫಲಿತಾಂಶ ಶೀಘ್ರ ಸಿಗಲೆಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 3ನೇ ಹೆಚ್ಚುವರಿ ಪರೀಕ್ಷಾ ಯಂತ್ರವನ್ನು 25 ಲಕ್ಷ ರೂ. ವೆಚ್ಚದಲ್ಲಿ 3 ದಿನದೊಳಗೆ ಅಳವಡಿಸು ವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕೊರೊನಾ ನಿಯಂತ್ರಣ ಮತ್ತು ಚಿಕಿತ್ಸೆ ಕುರಿತು ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಶುಕ್ರವಾರ ಸಭೆ ನಡೆಸಿ, ಸೋಂಕು ನಿಯಂತ್ರಣಕ್ಕಾಗಿ ಜಾರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ಮೇಲೆ ಕಠಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕರ್ಫ್ಯೂನಿಂದಾಗಿ ನಗರ ಪ್ರದೇಶದಿಂದ ಜನರು ಗ್ರಾಮಗಳತ್ತ ವಲಸೆ ಬರುತ್ತಿದ್ದು, ಸೋಂಕು ಇತರರಿಗೂ ಹರಡುವ ಸಾಧ್ಯತೆ ಇದೆ. ಕೂಡಲೇ ಗ್ರಾಮಗಳ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಬೇಕು. ಟಾಸ್ಕ್ ಫೋರ್ಸ್ ಸದಸ್ಯರು ಸೋಂಕು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಗ್ರಾಮ ಮಟ್ಟದಲ್ಲಿ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಕೊರೊನಾ ಪರೀಕ್ಷಾ ವರದಿ ವಿಳಂಬ ವಾಗುವ ಸಂದರ್ಭವಿದ್ದಲ್ಲಿ ಅಗತ್ಯವೆನಿಸಿದರೆ ಖಾಸಗಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಸರಕಾರದ ಅನುಮತಿ ಪಡೆದು ಕ್ರಿಯಾಶೀಲವಾಗಬೇಕು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವುದರ ಜತೆ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಗುರುತಿಸಿ, ಅವರನ್ನು ಹೋಂ ಕ್ವಾರಂ ಟೈನ್ ಇಡಬೇಕು. ಅವರಿದ್ದಲ್ಲೇ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂದು ಸೂಚಿಸಿದರು.
ತಾಲೂಕು ಕೇಂದ್ರದ ಕೋವಿಡ್ ಆಸ್ಪತ್ರೆಗಳಲ್ಲಿ 50 ಐಸಿಯು ಘಟಕಗಳನ್ನು ಸ್ಥಾಪಿಸಿ, ಚಿಕಿತ್ಸೆ ನೀಡಬೇಕು. ಇದರಿಂದಾಗಿ ಜಿಲ್ಲಾ ಮಟ್ಟದ ಕೋವಿಡ್ ಕೇಂದ್ರಗಳಲ್ಲಿನ ಒತ್ತಡ ಕಡಿಮೆ ಮಾಡಬಹುದು ಎಂದರು.ಶಾಸಕ ರಾಜೇಶ್ ನಾಯ್ಕ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಜಿ. ಪಂ. ಸಿಇಒ ಡಾ| ಕುಮಾರ್, ಕುಟುಂಬ ಕಲ್ಯಾಣ ಅಧಿಕಾರಿ ಕಿಶೋರ್ ಉಪಸ್ಥಿತರಿದ್ದರು.
ಆ್ಯಂಬುಲೆನ್ಸ್ ಉಚಿತ
ಕೊರೊನಾದಿಂದ ಮೃತ ಹೊಂದಿದವರ ಶವ ಸಾಗಿಸಲು ಉಚಿತ ಆ್ಯಂಬುಲೆನ್ಸ್ ನೀಡುವುದರ ಜತೆ ಶವ ಸಂಸ್ಕಾರದ ವೆಚ್ಚ ವನ್ನೂ ಸರಕಾರವೇ ಭರಿಸಲಿದ್ದು, ತಾಲೂಕಿನ ತಹಶೀಲ್ದಾರ್‌ಗಳಿಗೆ ಹಣ ಬಿಡುಗಡೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಸಚಿವ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಟಾಪ್ ನ್ಯೂಸ್
