ನಿರ್ವಹಣೆಯಿಲ್ಲದೆ ಸೊರಗುತ್ತಿವೆ ಅಭಿವೃದ್ಧಿ ಹೊಂದಿದ ಕೆರೆಗಳು!
Team Udayavani, Feb 9, 2023, 7:05 AM IST
ಸಾಂದರ್ಭಿಕ ಚಿತ್ರ
ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಉಭಯ ಜಿಲ್ಲೆಗಳಲ್ಲಿ ತಲಾ 75 ಕೆರೆಗಳ ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದೆ. ಇದರ ಹೊರತಾಗಿಯೂ ಸಣ್ಣ ನೀರಾವರಿ ಇಲಾಖೆ ಹಾಗೂ ವಿವಿಧ ಇಲಾಖೆಗಳಿಂದಲೂ ಕೆರೆಗಳ ಅಭಿವೃದ್ಧಿಯಾಗುತ್ತಿದೆ. ಆದ ರೆ ಅಭಿವೃದ್ಧಿಪಡಿಸಿದ ಕೆರೆಗಳು ನಿರ್ವಹಣೆ ಇಲ್ಲದೇ ವರ್ಷದೊಳಗೆ ಹಿಂದಿನ ಸ್ಥಿತಿ ತಲುಪುತ್ತಿವೆ.
ಗ್ರಾ.ಪಂ. ಅಥವಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ಎಲ್ಲ ಕೆರೆಗಳಿಗೂ ಸ್ಥಳೀಯರನ್ನು ಒಳಗೊಂಡ ನಿರ್ವಹಣ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಕೆರೆಗಳ ಅಭಿವೃದ್ಧಿಯ ಸಂದರ್ಭ ಮಾತ್ರ ಈ ಸಮಿತಿ ಕ್ರಿಯಾಶೀಲವಾಗಿರುತ್ತವೆ. ಅಭಿವೃದ್ಧಿ ಕಾರ್ಯ ಪೂರ್ಣವಾಗುತ್ತಿದ್ದಂತೆ ಸಮಿತಿಗಳು ಹೇಳಹೆಸರಿಲ್ಲದಂತೆ ದೂರಾಗುತ್ತವೆ. ಕೆಲವು ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ಗುತ್ತಿಗೆ ಪಡೆದವರು ನಿರ್ವಹಣೆ ಮಾಡುತ್ತಾರೆ. ಮೀನು ಮರಿ ಬಿಟ್ಟು, ಮೀನು ಕೃಷಿ ಮುಗಿದ ಅನಂತರದಲ್ಲಿ ಕೆರೆ ನಿರ್ವಹಣೆಯಿಲ್ಲದೆ ಅನಾಥವಾಗುತ್ತಿವೆ.
ಅಮೃತ್ ಸರೋವರ್ ಯೋಜನೆಯಡಿ ಆಯ್ಕೆಯಾಗಿರುವ ಬಹುತೇಕ ಕೆರೆಗಳನ್ನು 2ರಿಂದ 5 ಲಕ್ಷ ರೂ. ವ್ಯಯಿಸಿ ಅಭಿವೃದ್ಧಿ ಮಾಡಲಾಗಿದೆ. ಕೆಲವು ಕೆರೆಗಳು ಅಭಿವೃದ್ಧಿ ಹೊಂದುತ್ತಿವೆ. ಸ್ವಾತಂತ್ರೊéàತ್ಸವದ ಧ್ವಜಾರೋಹಣದ ಹಿನ್ನೆಲೆಯಲ್ಲಿ ಕೆರೆಯ ಎದುರು ಧ್ವಜ ಕಟ್ಟೆಯನ್ನು ನಿರ್ಮಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಬೃಹತ್ ಕೆರೆಗಳು 131 ಹೆಕ್ಟೇರ್ ಪ್ರದೇಶದಲ್ಲಿವೆ. ಉಡುಪಿ ಜಿಲ್ಲೆಯಲ್ಲಿ 4 ಬೃಹತ್ ಕೆರೆಗಳು 283 ಹೆಕ್ಟೇರ್ ಪ್ರದೇಶದಲ್ಲಿವೆ. ಸಣ್ಣ ಮತ್ತು ಮಧ್ಯಮ ಕೆರೆಗಳು ಉಭಯ ಜಿಲ್ಲೆಗಳಲ್ಲಿ ತಲಾ 500ಕ್ಕೂ ಅಧಿಕವಿದೆ. ಕೆರೆಗಳ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಕೃಷಿಗೆ ಅನುಕೂಲವಾಗುವ ಕೆರೆಗಳ ಅಭಿವೃದ್ಧಿಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಮಾಡಲಾಗುತ್ತದೆ. ಉಭಯ ಜಿಲ್ಲೆಗಳಲ್ಲಿ ನದಿ ಹರಿವು ಹೆಚ್ಚಿರುವುದರಿಂದ ಕೃಷಿಕರು ಕೆರೆಯನ್ನು ಅವಲಂಬಿಸಿಕೊಂಡಿಲ್ಲ. ಹೀಗಾಗಿ ಕೆರೆಯ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ ಎಂದು ಹೇಳಾಗುತ್ತಿದೆ.
ನರೇಗಾದಡಿ ಅಭಿವೃದ್ಧಿ ಅವಕಾಶ
ಕೆರೆಗಳ ಅಭಿವೃದ್ಧಿಗೆ ನರೇಗಾದಡಿ ಹೆಚ್ಚಿನ ಅವಕಾಶ ವಿದೆ. ಗ್ರಾ.ಪಂ. ಪಿಡಿಒ, ಅಧ್ಯಕ್ಷ ಹಾಗೂ ಸದಸ್ಯರ ಸಮನ್ವಯದೊಂದಿಗೆ ಕಾರ್ಯ ನಡೆಸಿದಾಗ ನರೇಗಾ ದಡಿ ಕೆರೆಗಳನ್ನು ಅಭಿವೃದ್ಧಿಪಡಿಸಿ, ನಿರ್ವಹಿಸಲು ಸಾಧ್ಯವಿದೆ. ಆದರೆ ಕೆಲವು ತಾಂತ್ರಿಕ ಸಮಸ್ಯೆಯಿಂದ ಇದು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಹೊಂದಿದ ಕೆರೆಗಳಲ್ಲಿ ಪ್ರತೀ ವರ್ಷ ಹೂಳೆತ್ತಬೇಕಾಗುತ್ತದೆ.
ಒಂದು ವರ್ಷ ಹೂಳೆತ್ತದಿದ್ದರೆ ಕೆರೆಯ ಸ್ಥಿತಿ ಬೇರೆಯಾಗಿರುತ್ತದೆ. ನರೇಗಾದಡಿ ಹೂಳೆತ್ತಲು ಅವಕಾಶವಿದೆ. ಆದರೆ ಯಂತ್ರೋಪಕರಣ ಬಳಸುವಂತಿಲ್ಲ. ಸಂಪೂರ್ಣ ಮಾನವ ಶ್ರಮದಿಂದಲೇ ಆಗಬೇಕು. ಹೂಳೆತ್ತುವ ಕಾರ್ಯಕ್ಕೂ ಯಾರೂ ಮುಂದಾಗದೆ ಇರುವುದರಿಂದ ಬಹುತೇಕ ಗ್ರಾ.ಪಂ.ಗಳು ಇದರ ಗೋಜಿಗೆ ಹೋಗುವುದಿಲ್ಲ.
ಯಾವುದೇ ಇಲಾಖೆಯ ಅನುದಾನದಲ್ಲಿ ಕೆರೆಯ ಅಭಿವೃದ್ಧಿಯಾದರೂ ಅದರ ನಿರ್ವಹಣೆಯನ್ನು ಸ್ಥಳೀಯಾಡಳಿತವೇ ಮಾಡಬೇಕಾಗುತ್ತದೆ.
ಸಣ್ಣ ನೀರಾವರಿ ಇಲಾಖೆ
ಬೃಹತ್ ಕೆರೆಗಳು
– ಮಂಗಳೂರು ಕಾವೂರಿನ “ಕಾವೂರು ಕೆರೆ’
– ಬಂಟ್ವಾಳದ ಕಾರಿಂಜೇಶ್ವರ ಕೆರೆ
– ಕಾರ್ಕಳದ ಆನೆಕೆರೆ
– ಕಾಪು ಎಲ್ಲೂರಿನ ದಳಂತ್ರ ಕೆರೆ
– ಬ್ರಹ್ಮಾವರ ಚಾಂತಾರಿನ ಮದಗ
– ಕುಂದಾಪುರ ತಾಲೂಕಿನ ಕಂಏರಿಕೆರೆ
ಕೆರೆಗಳ ಅಭಿವೃದ್ಧಿಗೆ ನರೇಗಾದಲ್ಲಿ ಮುಕ್ತ ಅವಕಾಶವಿದೆ. ಅದರಲ್ಲೂ ಹೂಳೆತ್ತಲು ಬೇಕಾದ ಕಾರ್ಯಯೋಜನೆಯನ್ನು ಸಿದ್ಧಪಡಿಸಿಕೊಳ್ಳಬಹುದು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಮೃತ್ ಸರೋವರ ಯೋಜನೆಯಡಿ ಜಿಲ್ಲೆಯಲ್ಲಿ 75 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರ ನಿರ್ವಹಣೆಯನ್ನು ಸ್ಥಳೀಯಾಡಳಿತ ಅಥವಾ ಸಂಬಂಧಪಟ್ಟ ಇಲಾಖೆಗಳೇ ಮಾಡಬೇಕಾಗುತ್ತದೆ.
– ಪ್ರಸನ್ನ ಎಚ್., ಡಾ| ಕುಮಾರ್, ಜಿ.ಪಂ. ಸಿಇಒ ಉಡುಪಿ ಮತ್ತು ದ.ಕ.