ಓ….ಸರ್ಕಾರಿ ಶಾಲೆಯಾ? …ಇದು ಕೇವಲ ಬಡವರ ಶಾಲೆಯಾ!

ಕೈಯಲ್ಲಿ ಒಂದೊಳ್ಳೆಯ ಉದ್ಯೋಗ ಇರುವವರು ಮೊದಲು ಮಕ್ಕಳನ್ನು ಸೇರಿಸುವುದು ಖಾಸಗಿ ಶಾಲೆಗೆ.

Team Udayavani, Jun 13, 2024, 11:53 AM IST

ಓ….ಸರ್ಕಾರಿ ಶಾಲೆಯಾ? …ಇದು ಕೇವಲ ಬಡವರ ಶಾಲೆಯಾ!

ಪುಟ್ಟ ಮಗುವೊಂದು ಹುಟ್ಟುವುದಕ್ಕಿಂತ ಮೊದಲೇ ಆ ಮಗು ಏನಾಗಬೇಕೆಂದು ಕನಸು ಕಾಣುವ ಅಮ್ಮಂದಿರಿದ್ದಾರೆ, ಹಾಗೆಯೇ ಆ ಕನಸನ್ನು ನನಸಾಗಿಸಲು ಹಗಲು, ರಾತ್ರಿಯೆನ್ನದೆ ಕಷ್ಟಪಟ್ಟು ದುಡಿವ ಅಪ್ಪಂದಿರನ್ನೂ ನಾವು ಕಾಣುತ್ತೇವೆ. ಇದರ ಹಿಂದಿರುವ ಏಕೈಕ ಉದ್ದೇಶ, ತನ್ನ ಮಗು ಪ್ರತಿಷ್ಠಿತ ಶಾಲೆಯಲ್ಲಿ ಕಲಿತು ಪಟ ಪಟನೆ ಇಂಗ್ಲಿಷ್ ಮಾತಾಡಬೇಕು, 90% ಕ್ಕಿಂತ ಹೆಚ್ಚು ಅಂಕ ಪಡೆಯಬೇಕು, ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಬೇಕು, ಇತ್ಯಾದಿ ಇನ್ನೂ ಏನೇನೋ ಬೇಡಿಕೆಗಳ ಪಟ್ಟಿ ಬೆಳೆಯುತ್ತಾ ಹೋಗಿ ಮುಗಿಯುವುದೇ ಇಲ್ಲ.

ಇದೆಲ್ಲದರ ಪರಿಣಾಮ, ಹೆಜ್ಜೆಗೊಂದರಂತೆ ತಲೆಯೆತ್ತಿದ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳು. ಈ ಖಾಸಗಿ ಶಾಲೆಗಳ ಅಬ್ಬರದ ಪ್ರಚಾರ, ಫಲಿತಾಂಶದ ದೊಡ್ಡ ದೊಡ್ಡ ಕಟೌಟ್ ಗಳು, ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಪಟ್ಟಿಯ ನಡುವೆ ಸೊರಗಿದ ಸರ್ಕಾರಿ ಶಾಲೆಯು ಕೇವಲ ಬಡವರ ಶಾಲೆ ಎಂಬಂತಾಗಿದೆ. ರಾಜ್ಯ, ಕೇಂದ್ರ ಪಠ್ಯಕ್ರಮವೆಂಬ ವಿವಿಧ ಬೋಧನಾ ಪದ್ಧತಿಗಳ ನಡುವೆ ಸರ್ಕಾರಿ ಶಾಲೆಗಳು ನಲುಗಿ ಸೊರಗುವಂತಾಯಿತು. ದೊಡ್ಡ ದೊಡ್ಡ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಪ್ರತಿಷ್ಠಿತ ಸರ್ಕಾರಿ ಹುದ್ದೆಯಲ್ಲಿ ಇರುವ ನೌಕರರು, ಹಾಗೂ ಇನ್ನಿತರ ವ್ಯಕ್ತಿಗಳು ಕೂಡಾ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವಂತಹ ಮನಸ್ಥಿತಿ ಬೆಳೆಸಿಕೊಳ್ಳಲು ಇದೇ ಕಾರಣವಾಯಿತು. ದಿನಗೂಲಿ ನೌಕರರು ಕೂಡಾ ತಮ್ಮ ವ್ಯವಸ್ಥೆಗೆ ಮೀರಿ ಸಾಲ, ಸೋಲ ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪರಿಸ್ಥಿತಿಯಿಂದು ಉಂಟಾಗಿದೆ ಅಂದರೆ ಅತಿಶಯೋಕ್ತಿಯಲ್ಲ.

ಸರ್ಕಾರಿ ಶಾಲೆಗೆ ಸೇರಿಸಲು ಮನಸ್ಸು ಬರುವುದೇ?
ಈಗಾಗಲೇ ಎರಡು, ಮೂರು ಖಾಸಗಿ ಶಾಲೆಯ ನೀತಿ ನಿಯಮ, ಧನದಾಹಿ ವರ್ತನೆಯಿಂದ ರೋಸಿಹೋಗಿ ಶಾಲೆ ಬದಲಾಯಿಸಿದ ಮಹಿಳೆಯು ಇನ್ನೊಬ್ಬ ಮಹಿಳೆಯಲ್ಲಿ ತನ್ನ ಗೋಳನ್ನು ತೋಡಿಕೊಳ್ಳುತ್ತಿದ್ದರು. ಅದನ್ನು ಕೇಳಿಸಿಕೊಂಡ ಆ ಮಹಿಳೆ ತನಗೆ ತಿಳಿದಿರುವ ಇನ್ನೊಂದು ಶಾಲೆಗೆ ಮಗುವನ್ನು ಸೇರಿಸಲು ಸಲಹೆ ನೀಡಿದಾಗ. ಅಯ್ಯೋ ಅದೇ ಶಾಲೆಯಲ್ಲಿಯೇ ಕಲಿಯುತ್ತಾ ಇದ್ದ ನನ್ನ ಮಗನನ್ನ ಅಲ್ಲಿಂದಲೇ ಬಿಡಿಸಿ ತಂದು ನಾನು ಈ ಶಾಲೆಗೆ ಸೇರಿಸಿದ್ದು” ಎಂದು ಬಿಟ್ಟಳು. ಈಗ ಪೆಚ್ಚಾಗುವ ಸರದಿ ನನ್ನದು !! ಒಟ್ಟಾರೆ ಯಾವ ಶಾಲೆಗೆ ಸೇರಿಸಿದರೂ, ಇವರಿಗೆ ಒಂದಲ್ಲ ಒಂದು ರೀತಿಯ ಅಸಮಾಧಾನಗಳು ತಪ್ಪುವುದೇ ಇಲ್ಲ, ಪ್ರಸಕ್ತ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದು ಬಿಟ್ಟರೆ ,ಅನ್ಯ ಆಯ್ಕೆಯೇ ಇಲ್ಲ ಎಂಬಂತಿತ್ತು ಅವರ ಮಾತಿನ ಧಾಟಿ.

ಬದಿಯಲ್ಲಿದ್ದು ಇದನ್ನೆಲ್ಲ ಕೇಳಿಸಿಕೊಂಡ ನಾನು ತಕ್ಷಣ “ನಿಮ್ಮ ಊರಿನ ಪಕ್ಕದಲ್ಲಿಯೇ ಉತ್ತಮ ಸರಕಾರೀ ಶಾಲೆ ಇದೆಯಲ್ವಾ? ಯಾವ ಶುಲ್ಕವೂ ಇಲ್ಲದೆ, ಸಮವಸ್ತ್ರ, ಪುಸ್ತಕ, ಕೊಡೆ, ಬ್ಯಾಗ್, ಶೂಸ್, ಹಾಲು, ಮಧ್ಯಾಹ್ನದ ಊಟ ,ಮೊಟ್ಟೆ, ಚಿಕ್ಕಿ, ಬಾಳೆಹಣ್ಣು, ಇತ್ಯಾದಿ ಎಲ್ಲಾ ಸೌಲಭ್ಯಗಳನ್ನು ಒಂದು ರೂಪಾಯಿ ಖರ್ಚಿಲ್ಲದೆ ವಿದ್ಯಾರ್ಥಿಗಳಿಗೆ ಸರಕಾರ ಒದಗಿಸುತ್ತದೆ. ಮೇಲು, ಕೀಳು, ಉಳ್ಳವರು, ಇಲ್ಲದವರು ಎಂಬ ಯಾವ ನಿಯಮಗಳೂ ಅಲ್ಲಿ ಇಲ್ಲ. ಜೊತೆಗೆ ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ, ದೈಹಿಕ ಶಿಕ್ಷಣ ಶಿಕ್ಷಕರು ಎಲ್ಲವೂ ಇದೆ.

ಅಷ್ಟೇ ಅಲ್ಲ. ಕನ್ನಡ ಮಾಧ್ಯಮವಲ್ಲದೆ , ಅಲ್ಲಿ ಆಂಗ್ಲ ಮಾಧ್ಯಮ ವಿಭಾಗವೂ ಇದೆ. ಇಷ್ಟೆಲ್ಲಾ ಖರ್ಚು ಎಂದು ಗೋಳಾಡುವ ಬದಲು ನೀವು ಯಾಕೆ ಸರ್ಕಾರಿ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸಬಾರದು? ” ಅಂತ ಅಂದದ್ದೆ ತಡ….”ಅಯ್ಯೋ ಸರ್ಕಾರಿ ಶಾಲೆಗೆ ಸೇರಿಸಲು ಮನಸ್ಸು ಬರುವುದಾ ? ಎಂದಾಗ ನಾನು ಕೂಡಲೇ ಅಯ್ಯೋ “ನಾವೆಲ್ಲ ಕಲಿತದ್ದು ಸರ್ಕಾರಿ ಶಾಲೆಯಲ್ಲಿಯೆ ಅಲ್ವಾ…? ಅದೂ ಕನ್ನಡ ಮಾಧ್ಯಮದಲ್ಲಿ, ಸರ್ಕಾರಿ ಶಾಲೆಯಲ್ಲಿ ಕಲಿತವರೆಲ್ಲಾ ಬಹಳಷ್ಟು ಸಂಖ್ಯೆಯಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದಾರೆ ತಾನೆ ?. ಎಂದಾಗ ” ಅದೆಲ್ಲಾ ನಮ್ಮ ಕಾಲಕ್ಕೆ ಮುಗಿಯಿತು!!.ಈಗ ಸ್ಪರ್ಧಾತ್ಮಕ ಯುಗ.. ಮಕ್ಕಳು ಒಬ್ಬರಿಗಿಂತ ಒಬ್ಬರು ಹೆಚ್ಚು ಅಂಕ ಪಡೆಯುವ ಕಾಲ!!. ಮಕ್ಕಳು ಉತ್ತಮ ಕಾಲೇಜುಗಳಲ್ಲಿ ಸೀಟು ಗಳಿಸಿ ಓದಿ ಮುಂದೆ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕಾದರೆ ನಾವು ಈಗಿಂದಲೇ ಉತ್ತಮ ಖಾಸಗಿ ಶಾಲೆಗೆ ಸೇರಿಸಬೇಕು” ಎಂದಾಗ ಇನ್ನು ಈ ಬಗ್ಗೆ ಚರ್ಚೆ ಮಾಡಿ ಉಪಯೋಗವಿಲ್ಲವೆಂದು ಮನಸ್ಸು ಪಿಚ್ಚೆನಿಸಿ ಸುಮ್ಮನಾಗಿ ಬಿಟ್ಟೆ.

ಸರ್ಕಾರಿ ಶಾಲೆಯ ಮಕ್ಕಳಿಗೆ ಭವಿಷ್ಯವಿಲ್ಲವೇ?
ನಾವೆಲ್ಲ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿತವರು. ಆಟದ ಮೈದಾನದಲ್ಲಿ ಕುಣಿದು, ಕುಪ್ಪಳಿಸುತ್ತಾ ಬಾನೆತ್ತರಕ್ಕೆ ಹಾರುವ ಕನಸು ಕಂಡವರು. ಶಾಲೆಯ ಸ್ವಚ್ಛತೆಯನ್ನು ಸರದಿಯಂತೆ ಮಾಡುತ್ತಾ ಜೀವನದ ಪಾಠ ಕಲಿತವರು. ಕೆಸರು ಮಣ್ಣಲ್ಲಿ ಆಡುತ್ತಾ ಕೃಷಿಯನ್ನು ಉಸಿರಾಗಿಸಿದವರು. ಮೇಲು -ಕೀಳಿನ ಪರಿವೆಯಿಲ್ಲದೆ ಕೈ ಕೈ ಹಿಡಿದು ಓಡಾಡಿದವರು. ನೀಲಿ ಬಿಳಿ ಸಮವಸ್ತ್ರ ತೊಟ್ಟು ದಾರಿಯಲ್ಲಿ ಸಾಗುವಾಗ ಓಹೋ ನಿಮ್ಮದು ಸರ್ಕಾರಿ ಶಾಲೆಯಾ ? ಎನ್ನುವ ಕುಹಕದ ಪ್ರಶ್ನೆಗಳಿಗೂ ಏನೂ ಉತ್ತರಿಸದೆ ಮುಂದೆ ಸಾಗಿದವರು. ಇಂದು ಅದೇ ಮಾತು ಆಡಿದವರ ಮುಂದೆ ಅವರೇ ಆಶ್ಚರ್ಯಪಟ್ಟು ಹುಬ್ಬೇರಿಸುವಂತೆ ಬೆಳೆದು ನಿಂತವರು. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ, ಎನ್ನುವುದರ ಅರಿವು ಉಂಟು ಮಾಡಲು ಅಷ್ಟೇ . ಇಲ್ಲಿ ತರಗತಿಗೊಬ್ಬ,ವಿಷಯಕ್ಕೊಬ್ಬ ಶಿಕ್ಷಕರು ಇಲ್ಲದಿರಬಹುದು. ಆದರೆ ಇರುವ ಒಬ್ಬ ಶಿಕ್ಷಕ ಎಲ್ಲವನ್ನು ನಿಭಾಯಿಸಬಲ್ಲ ಯೋಗ್ಯತೆ ಉಳ್ಳವರು.ಇಲ್ಲಿ ಸ್ವಚ್ಛತೆಗೆ ಕೆಲಸದವರು ಇಲ್ಲದಿರಬಹುದು. ಆದರೆ ನಮ್ಮ ಕೆಲಸ ನಾವೇ ಮಾಡಿಕೊಳ್ಳುವ ಕರ್ತವ್ಯ ಪ್ರಜ್ಞೆ ಬೆಳೆಸಿದವರು. ಇಂದು ಸಮಾಜದಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದವರೆಲ್ಲಾ ಸರ್ಕಾರಿ ಶಾಲೆಯಲ್ಲಿಯೆ ಕಲಿತವರು. ಕಲಿಯುವ ಆಸಕ್ತಿ ಹಾಗೂ ಶ್ರದ್ಧೆ ಇರುವವರಿಗೆ ಯಾವ ಶಾಲೆಯಾದರೇನಂತೆ ? ಚೆನ್ನಾಗಿ ಕಲಿತೇ ಕಲಿಯುತ್ತಾರೆ. ಪ್ರತಿಭೆಯೆನ್ನುವುದು ಯಾರ ಸ್ವತ್ತೂ ಅಲ್ಲ. ಅವರವರ ಸಾಮರ್ಥ್ಯ, ವೈಯಕ್ತಿಕ ಭಿನ್ನತೆ , ಚಾತುರ್ಯಕ್ಕೆ ತಕ್ಕಂತೆ ಅವರವರು ತಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾರೆ. ತಮ್ಮ ಭವಿಷ್ಯವನ್ನು ನಿರ್ಣಯಿಸುವ ಹಕ್ಕು ಅನ್ಯರಿಗೆ ಸರ್ವಥಾ ಇಲ್ಲ.

ಸರ್ಕಾರಿ ಶಾಲೆ ಮಕ್ಕಳು ಪಾಪದವರು ಅಲ್ವಾ?
ಹೀಗೊಬ್ಬರು ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ ಹೇಳಿದ್ದು ಕೇಳಿ ಕಸಿವಿಸಿ ಉಂಟಾಯಿತು. ಇಲ್ಲಿ “ಪಾಪದವರು” ಅಂದರೆ ಖಾಸಗಿ ಶಾಲೆಯ ಶಿಕ್ಷಣ ಶುಲ್ಕವನ್ನು ನೀಡಲಾಗದೆ ಸರ್ಕಾರಿ ಶಾಲೆಗೆ ಹೋಗುವ “ಬಡವರು” ಎಂಬುದಾಗಿ ಅರ್ಥೈಸ ಬಹುದಾಗಿದೆ. ಇದು ಕೇಳಲು ಕಹಿಯಾದರೂ ಅಷ್ಟೇ ಸತ್ಯ. ಯಾರೇ ಆಗಲಿ ಕೈಯಲ್ಲಿ ಒಂದೊಳ್ಳೆಯ ಉದ್ಯೋಗ ಇರುವವರು ಮೊದಲು ಮಕ್ಕಳನ್ನು ಸೇರಿಸುವುದು ಖಾಸಗಿ ಶಾಲೆಗೆ.

ಆದರೆ ಇಂದು ಕಾಲ ಬದಲಾಗಿದೆ. ಸರ್ಕಾರಿ ಶಾಲೆಗಳು ನಿಧಾನವಾಗಿ ಉನ್ನತ ದರ್ಜೆಗೆ ಏರುತ್ತಿವೆ. ಎಲ್ಲಾ ಸೌಕರ್ಯಗಳೊಂದಿಗೆ ಸರ್ಕಾರಿ ಶಾಲೆಗಳು ಪುನರ್ ರೂಪುಗೊಳ್ಳುತ್ತಿದೆ. ಪ್ರತಿಭಾವಂತ ಶಿಕ್ಷಕರ ನೇಮಕಾತಿ ಆಗುತ್ತಿದೆ. ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಹತ್ತು,ಹಲವು ಯೋಜನೆಗಳು ರೂಪುಗೊಳ್ಳುತ್ತಿವೆ. ಕೆಲವು ಸರಕಾರಿ ಶಾಲೆಗಳಲ್ಲಿ 700 ಕ್ಕಿಂತ ಹೆಚ್ಚು ಮಕ್ಕಳು ದಾಖಲಾಗಿದ್ದು, ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮದ ಅವಕಾಶವೂ ಇದೆ. ಸದ್ಯ ಈ ರೀತಿಯ ವ್ಯವಸ್ಥೆ ಇರುವಾಗ ತಲಾ ಒಂದು ಮಗುವಿಗೆ Lkg ಇಂದ 10 ನೇ ತರಗತಿಯ ತನಕ ವರ್ಷವೊಂದಕ್ಕೆ ಲಕ್ಷದಂತೆ ಕನಿಷ್ಠ 10 ಲಕ್ಷ ರೂಪಾಯಿಯನ್ನು ವಿದ್ಯಾಭ್ಯಾಸಕ್ಕೆ ವ್ಯಯ ಮಾಡುವುದರ ಪ್ರತಿಫಲವಾಗಿ ಗಳಿಸುವುದೇನಿದೆ ? ಅಷ್ಟು ಶುಲ್ಕ ನೀಡಿಯುೂ ಮತ್ತೆ ಮಕ್ಕಳನ್ನು ಟ್ಯೂಷನ್ ತರಗತಿಗೂ ಕಳಿಸುವುದನ್ನು ನಾವು ಕಾಣುತ್ತೇವೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಸೌಲಭ್ಯಗಳ ಕೊರತೆ ಇತ್ಯಾದಿ ಇದ್ದರೂ ಎಲ್ಲಾ ಕಡೆಯಲ್ಲಿ ಈ ಪರಿಸ್ಥಿತಿ ಇಲ್ಲ. ಎಲ್ಲಾ ಸೌಕರ್ಯಗಳಿರುವ ಶಾಲೆ ಆಯ್ಕೆ ಮಾಡಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ಪಡೆಯಬಹುದಲ್ಲವೇ? ಖಾಸಗಿ ಶಾಲೆಯಲ್ಲಿ ಒಂದು ಮಗುವಿನ ವಿದ್ಯಾಭ್ಯಾಸಕ್ಕೆ ವ್ಯಯಿಸುವ ಹಣವನ್ನು ಠೇವಣಿಯಾಗಿಟ್ಟರೆ ಮುಂದೆ ಆ ಮಗುವಿಗೆ ಪಿ.ಯು.ಸಿ ನಂತರದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಬಹುದಲ್ಲ . ಜೊತೆಗೆ ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್ , ಅಬಾಕಸ್ ಇತ್ಯಾದಿ ಕೋರ್ಸ್ ಗಳನ್ನು ಎಲ್ಲಿ ಬೇಕಾದರೂ ಮಾಡಬಹುದು.

ಕೊನೆಯದೊಂದು ಮಾತು
ದೊಡ್ಡ ದೊಡ್ಡ ವಿದ್ಯಾಸಂಸ್ಥೆಗಳಲ್ಲಿ ಸೇರಿಸಿ ನಮ್ಮ ಮಕ್ಕಳನ್ನು ಆರಂಭದಿಂದಲೇ ಯಾಂತ್ರಿಕತೆಗೆ ದೂಡುತ್ತಿದ್ದೇವೆ. ಒತ್ತಡಯುಕ್ತ ಶಿಕ್ಷಣವು ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತಿದೆ. ಅಪ್ಪ , ಅಮ್ಮ, ಅಜ್ಜ, ಅಜ್ಜಿ ಎಂಬ ಕೂಡುಕುಟುಂಬದ ಬಾಂಧವ್ಯದ ಕೊಂಡಿ ನಿಧಾನವಾಗಿ ಕಳಚಿಕೊಳ್ಳುತ್ತಾ ಬೇರೊಂದು ಲೋಕವೇ ಸೃಷ್ಟಿಯಾಗುತ್ತಿದೆ. ಇಲ್ಲಿ ಭಾವನೆ, ಸಂಬಂಧಗಳಿಗೆ ಬೆಲೆಯಿಲ್ಲ. ಶಿಕ್ಷಣ, ಉದ್ಯೋಗಕ್ಕಾಗಿ ಯಾವುದೋ ಹೊರದೇಶಕ್ಕೆ ತೆರಳಿ ಮುಂದೆ ವಯಸ್ಸಾದ ತಂದೆ ತಾಯಿಯರ ಜೊತೆ ಆನಂದದಿಂದ ಕಳೆಯಲು ಒಂದು ದಿನದ ಸಮಯವೂ ದೊರಕಲಾರದ ಪರಿಸ್ಥಿತಿ ಉಂಟಾಗಿದೆ. ಜೀವನದ ಮುಂಜಾವಲ್ಲಿ ಕೈಗೊಂಡ ಈ ನಿರ್ಧಾರಗಳು ಜೀವನದ ಮುಸ್ಸಂಜೆಯ ಹೊತ್ತಿಗೆ ಫಲ ಕೊಡಲು ಆರಂಭವಾಗುವುದು. ಹೀಗಾಗಿ ನಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಕೊಡಿಸಬೇಕು ಎಂದು ನಿರ್ಧರಿಸಲು ಇದು ಸಕಾಲ. ಒಂದು ವ್ಯಾಪ್ತಿಯಲ್ಲಿ ಇಂತಿಷ್ಟೇ ಶಾಲೆಗಳಿಗೆ ಅನುಮತಿ ಎಂದು ಕಡ್ಡಾಯಗೊಳಿಸಿ ಸರ್ಕಾರಿ ಶಾಲೆಯ ಉಳಿವಿಗೆ ಹೋರಾಡಬೇಕಾಗಿದೆ. ಸರ್ಕಾರಿ ನೌಕರರು, ರಾಜಕಾರಣಿಗಳು, ಅಧಿಕಾರಿಗಳು ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಅದರ ಅಭಿವೃದ್ಧಿಗೆ ಕೈ ಜೋಡಿಸಿದಾಗ ಮಾತ್ರ ಇದೆಲ್ಲವೂ ಸಾಧ್ಯ. ಸರ್ಕಾರಿ ನೌಕರಿ ಬೇಕು.. ಆದರೆ ಸರ್ಕಾರಿ ಶಾಲೆ ಬೇಡ ಎನ್ನುವ ಅಪವಾದಕ್ಕೆ ಹೊರತಾಗಿ ನಾನು ಶಿಕ್ಷಕಿಯಾಗಿ ನನ್ನ ಇಬ್ಬರು ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸಿದ್ದೇನೆ.

*ಪ್ರಜ್ವಲಾ ಶೆಣೈ
ಶಿಕ್ಷಕಿ, ಕಾರ್ಕಳ

ಟಾಪ್ ನ್ಯೂಸ್

1-madi-a

Hill Collapse ಭೀತಿ: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

BYR-joga-Visit

Jog Falls: ಜೋಗ ಜಲಪಾತಕ್ಕೆ ವಿಶ್ವದರ್ಜೆಯ ಸ್ಪರ್ಶ: ಸಂಸದ ಬಿ.ವೈ.ರಾಘವೇಂದ್ರ

Byndoor  ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

Byndoor ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

ICC suffered a loss of Rs 167 crore from T20 World Cup 2024

T20 World Cup 2024 ಆಯೋಜನೆಯಿಂದ 167 ಕೋಟಿ ರೂ ನಷ್ಟ ಅನುಭವಿಸಿದ ಐಸಿಸಿ; ಆಗಿದ್ದೇನು?

Untitled-123

Kannappa: ಇದೇ ವರ್ಷ ತೆರೆಗೆ ಬರಲಿದೆ ವಿಷ್ಣು ಮಂಚು ಪ್ಯಾನ್‌ ಇಂಡಿಯಾ ʼಕಣ್ಣಪ್ಪʼ

1-sadsa-d

Independence Day; ಈ ಬಾರಿ ಕೆಂಪು ಕೋಟೆಯಲ್ಲಿ ಭದ್ರತೆ ವೈಶಿಷ್ಟ್ಯವೇನು?

Heavy Rain; Holiday announcement till PUC in Udupi district on July 19

Heavy Rain; ಜುಲೈ 19ರಂದು ಉಡುಪಿ ಜಿಲ್ಲೆಯಲ್ಲಿ ಪಿಯುಸಿವರೆಗೆ ರಜೆ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kambala; ಮೊದಲ ಓಟದಲ್ಲೇ ಪ್ರಶಸ್ತಿ ಗೆದ್ದಿದ್ದ ‘ಲಕ್ಕಿ’ ಅದೇ ಅವರಸರದಲ್ಲಿ ಹೊರಟು ಹೋದ

Kambala; ಮೊದಲ ಓಟದಲ್ಲೇ ಪ್ರಶಸ್ತಿ ಗೆದ್ದಿದ್ದ ‘ಲಕ್ಕಿ’ ಅದೇ ಅವರಸರದಲ್ಲಿ ಹೊರಟು ಹೋದ

14

ಒಂದು ಸಿನಿಮಾ ಮಾಡಿ ಮುಂದಿನ ಸಲ್ಮಾನ್‌, ಶಾರುಖ್‌ ಎನ್ನಿಸಿಕೊಂಡಿದ್ದಾತ ದಿಢೀರ್‌ ನಾಪತ್ತೆ..!

1-p-O

K9; ಪ್ಯಾರಿಸ್ ಒಲಿಂಪಿಕ್ಸ್ ಭದ್ರತೆಯಲ್ಲಿ ಭಾರತದ ಎರಡು ಶ್ವಾನಗಳೂ ಇವೆ!

1-dengue

Dengue: ಸೊಳ್ಳೆ ನಿಯಂತ್ರಣದೊಂದಿಗೆ ಈ ಆಹಾರ ಕ್ರಮಗಳನ್ನು ಪಾಲಿಸಿ

Highest-paid lyricist: ಇವರು ಬರೆಯುವ ಒಂದು ಹಾಡಿಗೆ 25 ಲಕ್ಷ ರೂ. ಸಂಭಾವನೆ.. ಯಾರಿವರು?

Highest-paid lyricist: ಇವರು ಬರೆಯುವ ಒಂದು ಹಾಡಿಗೆ 25 ಲಕ್ಷ ರೂ. ಸಂಭಾವನೆ.. ಯಾರಿವರು?

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-madi-a

Hill Collapse ಭೀತಿ: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

Manipal ಬಹುಮುಖಿ ವೈದ್ಯ ವಿದ್ವಾಂಸ ಡಾ| ಎಂ.ಎಸ್‌.ವಲಿಯತ್ತಾನ್‌ ಇನ್ನಿಲ್ಲ

Updated ಬಹುಮುಖಿ ವೈದ್ಯ ವಿದ್ವಾಂಸ ಡಾ| ಎಂ.ಎಸ್‌.ವಲಿಯತ್ತಾನ್‌ ಇನ್ನಿಲ್ಲ

BYR-joga-Visit

Jog Falls: ಜೋಗ ಜಲಪಾತಕ್ಕೆ ವಿಶ್ವದರ್ಜೆಯ ಸ್ಪರ್ಶ: ಸಂಸದ ಬಿ.ವೈ.ರಾಘವೇಂದ್ರ

Byndoor  ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

Byndoor ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

ICC suffered a loss of Rs 167 crore from T20 World Cup 2024

T20 World Cup 2024 ಆಯೋಜನೆಯಿಂದ 167 ಕೋಟಿ ರೂ ನಷ್ಟ ಅನುಭವಿಸಿದ ಐಸಿಸಿ; ಆಗಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.