ಮೊಟೆತ್ತಡ್ಕದ ಎನ್‌ಆರ್‌ಸಿಸಿ ಮುಂಭಾಗ ಶಾಶ್ವತ ಹೆಲಿಪ್ಯಾಡ್ ನಿರ್ಮಾಣ
Team Udayavani, Feb 9, 2023, 9:46 AM IST
ಪುತ್ತೂರು: ಗ್ರಾಮಾಂತರ ಜಿಲ್ಲಾ ಕೇಂದ್ರದ ಕನಸಿನಲ್ಲಿರುವ ಪುತ್ತೂರಿನ ಬಹು ಬೇಡಿಕೆಯಾಗಿದ್ದ ಶಾಶ್ವತ ಹೆಲಿಪ್ಯಾಡ್‌ನ ಕನಸು ನನಸಾಗುತ್ತಿದೆ. ಹೆಲಿಪ್ಯಾಡ್ ನಿರ್ಮಾಣ ಕಾರ್ಯವು ಮೊಟ್ಟೆತ್ತಡ್ಕದಲ್ಲಿ ಅನುಷ್ಠಾನದ ಹಂತದಲ್ಲಿದೆ. ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಪ್ರಥಮ ಬಾರಿಗೆ ಪುತ್ತೂರು ಭೇಟಿ ನೀಡುತ್ತಿದ್ದು ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣದ ಯೋಜನೆಯು ಶಾಶ್ವತ ಹೆಲಿಪ್ಯಾಡ್ ನಿರ್ಮಾಣಕ್ಕೆ ಬದಲಾವಣೆಗೊಂಡ ಪರಿಣಾಮ ಸುದೀರ್ಘ ಕಾಲದ ಬೇಡಿಕೆಯೊಂದು ಈಡೇರಲಿದೆ.
ಎಲ್ಲಿ ಜಾಗ?
ಮೊಟ್ಟೆತ್ತಡ್ಕ ಗೇರು ಸಂಶೋಧನ ನಿರ್ದೇಶನಾಲಯದ ಮುಂಭಾಗ ಸುಮಾರು 2.17 ಎಕ್ರೆ ಜಾಗವನ್ನು ಹೆಲಿಪ್ಯಾಡ್‌ಗೆಂದು ನಿಗದಿ ಮಾಡಲಾಗಿದೆ. ಹೆಲಿಪ್ಯಾಡ್‌ಗೆ ಮೀಸಲಿಡುವ ಮೊದಲು 1986ರಲ್ಲಿ ಗೇರು ಸಂಶೋಧನ ನಿರ್ದೇಶನಾಲಯಕ್ಕೆ ರಾಜ್ಯ ಸರಕಾರ ಈ ಜಾಗವನ್ನು ಮಂಜೂರು ಮಾಡಿತ್ತು. ಇದಕ್ಕೆ ನಿಗದಿಪಡಿಸಿದ್ದ ಮೊತ್ತವನ್ನು ಪಾವತಿಸಿಯೂ ಆಗಿತ್ತು. ಇದಾಗಿ ಕೆಲ ದಿನದಲ್ಲೇ, ಮಂಜೂರು ಮಾಡಿದ ಜಾಗ ಹೆಲಿಪ್ಯಾಡ್‌ಗೆ ನೀಡುವಂತೆ ಜಿಲ್ಲಾಡಳಿತ ತಿಳಿಸಿತು. ಈ ಹಿನ್ನೆಲೆಯಲ್ಲಿ ಡಿಸಿಆರ್ ನಿರ್ದೇಶಕ ಹಾಗೂ ಜಿಲ್ಲಾಧಿಕಾರಿ ನಡುವೆ ಒಪ್ಪಂದ ನಡೆಸಲಾಯಿತು. ಪರ್ಯಾಯ ಜಾಗ ನೀಡುವ ಷರತ್ತಿನ ಮೇಲೆ ಡಿಸಿಆರ್, ಜಿಲ್ಲಾಧಿಕಾರಿ ಮಾತಿಗೆ ಒಪ್ಪಿಗೆಯನ್ನು ಸೂಚಿಸಿತು. ಅದಾದ ಬಳಿಕ ಸಹಾಯಕ ಆಯುಕ್ತರು ಹೆಲಿಪ್ಯಾಡ್‌ಗೆ ಈ ಜಾಗ ಕಾದಿರಿಸಿ ಪ್ರಕ್ರಿಯೆ ನಡೆಸಲಾಯಿತು. ಆದರೆ ಡಿಸಿಆರ್‌ಗೆ ಪರ್ಯಾಯ ಜಾಗ ಒದಗಿಸಿದೆಯೇ ಅನ್ನುವ ಬಗ್ಗೆ ಯಾವುದೇ ಇಲಾಖೆ ಕೂಡ ಸ್ಪಷ್ಟ ಉತ್ತರ ನೀಡಿಲ್ಲ.
ಶಾಶ್ವತ ಹೆಲಿಪ್ಯಾಡ್ ಪುತ್ತೂರಿಗೆ ಶಾಶ್ವತ ಹೆಲಿಪ್ಯಾಡ್ ಬೇಕು ಎನ್ನುವ ಬೇಡಿಕೆಗೆ ಪೂರಕವಾಗಿ ಮೊಟ್ಟೆತ್ತಡ್ಕದಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸಿ ಹೊಸ ಹೆಲಿಪ್ಯಾಡ್‌ನಲ್ಲಿ ಇಳಿದು ಪುತ್ತೂರು ನಗರಕ್ಕೆ ಬರಲಿದ್ದಾರೆ.
-ಸಂಜೀವ ಮಠಂದೂರು,ಶಾಸಕರು, ಪುತ್ತೂರು
2.17 ಎಕ್ರೆ ಜಾಗ ಮೊಟ್ಟೆತ್ತಡ್ಕದಲ್ಲಿ 2.17 ಎಕ್ರೆ ಜಾಗವು ಹೆಲಿಪ್ಯಾಡ್ ನಿರ್ಮಾಣಕ್ಕೆ ಕಾದಿರಿಸಲಾಗಿತ್ತು. ಈ ಹಿಂದೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಾಗ ಕಾದಿರಿಸುವ ಕಾರ್ಯ ಆಗಿತ್ತು.
-ರಮೇಶ್ ಬಾಬು, ತಹಶೀಲ್ದಾರ್, ಪುತ್ತೂರು
ಕಾಮಗಾರಿಗೆ ವೇಗ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ತುರ್ತು ಕಾಮಗಾರಿ ಆಗಿರುವ ಕಾರಣ ಒಟ್ಟು ವೆಚ್ಚ ನಿರ್ಧರಿಸಿಲ್ಲ. ಗೃಹ ಸಚಿವರು ಈ ಹೆಲಿಪ್ಯಾಡ್ ಮೂಲಕ ಆಗಮಿಸಲಿರುವುದರಿಂದ ಕಾಮಗಾರಿಗೆ ವೇಗ ನೀಡಲಾಗಿದೆ.
-ಬಿ.ರಾಜರಾಮ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಪುತ್ತೂರು
ಹೆಲಿಪ್ಯಾಡ್ ಏಕೆ ಬೇಕು?
ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು ಎನ್ನುವ ಪ್ರಸ್ತಾವ ಸರಕಾರದ ಹಂತದಲ್ಲಿದೆ. ವಿವಿಧ ಕಾರಣಗಳಿಗಾಗಿ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಪುತ್ತೂರಿಗೆ ಭೇಟಿ ನೀಡುತ್ತಿದ್ದು ಗಣ್ಯರು ಹೆಲಿಕಾಪ್ಟರ್ ಅನ್ನು ಅವಲಂಬಿಸುತ್ತಿದ್ದಾರೆ. ಈಗ ಪ್ರತೀ ಬಾರಿಯೂ ಫಿಲೋಮಿನಾ, ವಿವೇಕಾನಂದ ಕಾಲೇಜಿನ ಆಟದ ಮೈದಾನವನ್ನು ಬಳಸಿಕೊಳ್ಳುವ ಅನಿವಾರ್ಯ ಉಂಟಾಗುತ್ತದೆ. ಹೀಗಾಗಿ, ಶಾಶ್ವತ ಹೆಲಿಪ್ಯಾಡ್‌ಗೆ ಬೇಡಿಕೆ ಕೇಳಿ ಬಂದಿತ್ತು.
ನಿರ್ಮಾಣ ಕಾರ್ಯ ಬಿರುಸು
ಮುಕ್ರಂಪಾಡಿಯಿಂದ ಕೇವಲ ಒಂದು ಕಿ.ಮೀ. ದೂರದಲ್ಲಿ ಈ ಹೆಲಿಪ್ಯಾಡ್ ಜಾಗ ಇದೆ. ಫೆ. 11ರಂದು ಅಮಿತ್ ಶಾ ಪುತ್ತೂರು ಭೇಟಿಗೆ ದಿನ ನಿಗದಿ ಪಡಿಸಲಾಗಿದೆ. ಗೃಹ ಸಚಿವರ ಭೇಟಿಗಾಗಿ ತಾತ್ಕಾಲಿಕ ನೆಲೆಯಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಆಟದ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಶಾಸಕರ ಸೂಚನೆ ಮೇರೆಗೆ ಸರಕಾರದಿಂದ ಹೆಲಿಪ್ಯಾಡ್‌ಗೆ ಕಾದಿರಿಸಿದ ಸ್ಥಳದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ತುರ್ತು ಕೆಲಸ ಆಗಿರುವ ಕಾರಣ ಒಟ್ಟು ಖರ್ಚು ಇನ್ನಷ್ಟೇ ಅಂತಿಮಗೊಳ್ಳಲಿದೆ. ಪಿಡಬ್ಲ್ಯುಡಿಯು ಇದರ ಕಾಮಗಾರಿಯ ನಿರ್ವಹಣೆ ಹೊಣೆ ಹೊತ್ತಿದೆ. ಕಾರು ಕಲಿಕೆಗೆ, ಆಟದ ಮೈದಾನವಾಗಿ, ವೇದಿಕೆಯಾಗಿ ಬಳಕೆಯಾಗುತ್ತಿದ್ದ ಜಾಗ ಇನ್ನೂ ಮುಂದೆ ಹೆಲಿಪ್ಯಾಡ್ ಆಗಿ ಗುರುತಿಸಿಕೊಳ್ಳಲಿದೆ.
-ಕಿರಣ್ ಪ್ರಸಾದ್ ಕುಂಡಡ್ಕ