ದೂರವಾಣಿ ಕದ್ದಾಲಿಕೆ ಸದ್ದು! ಅಂದು ಹೆಗಡೆ V/s ಗೌಡರು; ಇಂದು ಬಿಎಸ್ ವೈ V/S HDK

3 ದಶಕದ ಬಳಿಕ ದೂರವಾಣಿ ಕದ್ದಾಲಿಕೆ ಸದ್ದು

Team Udayavani, Aug 19, 2019, 5:32 PM IST

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಇದೀಗ ದೂರವಾಣಿ ಕದ್ದಾಲಿಕೆ ಪ್ರಕರಣ ಸಿಬಿಐಗೆ ವಹಿಸಿದ ಬಳಿಕ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಆರೋಪ, ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿದೆ. ಏತನ್ಮಧ್ಯೆ ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರ ಸಲಹೆ ಮೇರೆಗೆ ದೂರವಾಣಿ ಕದ್ದಾಲಿಕೆ ಪ್ರಕರಣ ಸಿಬಿಐಗೆ ವಹಿಸಲಾಗಿದೆ ಎಂಬ ಅಂಶ ಕೂಡಾ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಮಧ್ಯೆ ಪರ, ವಿರೋಧದ ಹೇಳಿಕೆಗಳ ಜಟಾಪಟಿ ಮುಂದುವರಿದಿದೆ. ರಾಜ್ಯ ರಾಜಕೀಯದಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣ ಇದೇ ಮೊದಲಲ್ಲ. ಆದರೆ ಮೂರು ದಶಕಗಳ ಹಿಂದೆ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ್ದ ದೂರವಾಣಿ ಕದ್ದಾಲಿಕೆ ಎಂಬ ಗುಮ್ಮ ಇದೀಗ ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ಹೆಗಲೇರಿದೆ!

ದೂರವಾಣಿ ಕದ್ದಾಲಿಕೆ ಅಂದು ಹೆಗಡೆ ವರ್ಸಸ್ ದೇವೇಗೌಡ; ಇಂದು ಬಿಎಸ್ ವೈ ವರ್ಸಸ್ ಕುಮಾರಸ್ವಾಮಿ!

1988ರಲ್ಲಿ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ್ದ ದೂರವಾಣಿ ಪ್ರಕರಣದಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಎಚ್.ಡಿ.ಕುಮಾರಸ್ವಾಮಿ ಸರದಿ. ಆದರೆ ಎಚ್ ಡಿಕೆ ಅಧಿಕಾರದಲ್ಲಿ ಇಲ್ಲದೇ ಇರುವುದರಿಂದ ರಾಜೀನಾಮೆಯ ಪ್ರಮೇಯ ಇಲ್ಲ. ಸಿಬಿಐನ ಕಾನೂನು ಪ್ರಕ್ರಿಯೆ ಮೇಲೆ ಮುಂದಿನ ನಡೆ ನಿರ್ಧಾರವಾಗಲಿದೆ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ.

ಕುತೂಹಲಕಾರಿ ವಿಷಯವೆಂದರೆ ಅಂದು ದೂರವಾಣಿ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ವಿಲನ್ ಆಗಿದ್ದವರು ಎಚ್.ಡಿ.ದೇವೇಗೌಡ, ಇಂದು ಮಗ ಎಚ್.ಡಿ.ಕುಮಾರಸ್ವಾಮಿ! ಮೂರು ದಶಕಗಳ ಹಿಂದೆ ಸಂವಹನ ನಡೆಯುತ್ತಿದ್ದದ್ದು ಲ್ಯಾಂಡ್ ಲೈನ್ ದೂರವಾಣಿ ಮೂಲಕ. ಇದರಿಂದಾಗಿ ಸಮಾಜಘಾತುಕ ಶಕ್ತಿಗಳು ಹಾಗೂ ರಾಷ್ಟ್ರ ದ್ರೋಹಿ ಚಟುವಟಿಕೆ ಮೇಲೆ ನಿಗಾ ವಹಿಸಲು ಗೃಹ ಕಾರ್ಯದರ್ಶಿ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ (ಗುಪ್ತಚರ) ಆಫ್ ಪೊಲೀಸ್ ಗೆ ದೂರವಾಣಿ ಕದ್ದಾಲಿಸಲು ಅನುಮತಿ ನೀಡುತ್ತಿದ್ದರು ಎಂದು ವರದಿ ವಿವರಿಸಿದೆ.

ಆದರೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಮಾಜಘಾತುಕ, ಭೂಗತ ಪಾತಕಿಗಳ ದೂರವಾಣಿ ಜತೆಗೆ ರಾಜಕಾರಣಿಗಳ ಮತ್ತು ಕೆಲವು ಖಾಸಗಿಯವರ ದೂರವಾಣಿಯನ್ನು ಕದ್ದಾಲಿಸಲಾಗಿತ್ತು ಎಂಬ ಸುದ್ದಿ ಇಡೀ ಸರಕಾರವನ್ನೇ ಅಲುಗಾಡಿಸಿತ್ತು.

ಆದರೆ ದೂರವಾಣಿ ಕದ್ದಾಲಿಕೆ ಆರೋಪವನ್ನು ದಿ.ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಾರಸಗಟಾಗಿ ತಳ್ಳಿಹಾಕಿದ್ದರು. ಈ ಕದ್ದಾಲಿಕೆ ಪ್ರಕರಣ ರಾಜ್ಯದಿಂದ, ರಾಷ್ಟ್ರರಾಜಕಾರಣದಲ್ಲಿಯೂ ದೊಡ್ಡ ಸಂಚಲನವೇ ಮೂಡಿಸಿತ್ತು. ಆ ಕಾಲಕ್ಕೆ ದೂರವಾಣಿ ಕದ್ದಾಲಿಕೆ ಪ್ರಕರಣ ಹೊಸದಾಗಿತ್ತು.

ದೂರವಾಣಿ ಕದ್ದಾಲಿಕೆಯ ರಾಜಕೀಯ ಜಿದ್ದಾಜಿದ್ದಿನ ನಡುವೆ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷವನ್ನು ವಿಪಿ ಸಿಂಗ್ ಹುಟ್ಟುಹಾಕಿದ್ದ ಜನ್ ಮೋರ್ಚಾ ಜತೆ ವಿಲೀನಗೊಳಿಸಿದ್ದರು. ಜನತಾದಳದ ದೇವೇಗೌಡರು ಅಜಿತ್ ಸಿಂಗ್ ಜತೆಗೆ ಜನತಾ ಪಕ್ಷದಲ್ಲಿಯೇ ಉಳಿದುಕೊಂಡಿದ್ದರು. ಎಚ್.ಡಿ.ದೇವೇಗೌಡರು ಮತ್ತು ಅಜಿತ್ ಸಿಂಗ್ ನಡುವಿನ ಸಂಭಾಷಣೆಯನ್ನೇ ಅಂದು ಕದ್ದಾಲಿಸಲಾಗಿತ್ತು..ಈ ಸುದ್ದಿ ರಾಷ್ಟ್ರಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾಗುವ ಮೂಲಕ ರಾಜ್ಯರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.

ದೂರವಾಣಿ ಕದ್ದಾಲಿಕೆ ಪ್ರಕರಣ ಸಂಸತ್ ನಲ್ಲಿ ಪ್ರತಿಧ್ವನಿಸಿ ದಾಖಲೆ ಬಿಡುಗಡೆಯಾಗಿತ್ತು!

ಕರ್ನಾಟಕದ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ವಿರೋಧ ಪಕ್ಷದ ನಾಯಕರು ಅಂದು ಸಂಸತ್ ನಲ್ಲಿ ಪ್ರಸ್ತಾಪಿಸಿ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಉತ್ತರ ನೀಡಿದ್ದ ಕೇಂದ್ರ ಕಮ್ಯೂನಿಕೇಷನ್ ಸಚಿವ ಬೀರ್ ಬಹಾದೂರ್, ಕರ್ನಾಟಕದಲ್ಲಿ 50 ಸಂಖ್ಯೆಗಳ ದೂರವಾಣಿ ಕರೆಯನ್ನು ಕದ್ದಾಲಿಸಲಾಗಿತ್ತು ಎಂದು ಮಾಹಿತಿ ನೀಡಿ ದಾಖಲೆ ಬಿಡುಗಡೆ ಮಾಡಿದ್ದರು. ರಾಮಕೃಷ್ಣ ಹೆಗಡೆ ಅವರು ದೂರವಾಣಿ ಕದ್ದಾಲಿಸುವಂತೆ ಡಿಐಜಿಗೆ ಆದೇಶ ನೀಡಿದ್ದ ಪ್ರತಿಯನ್ನೂ ಸಂಸತ್ ನಲ್ಲಿ ಬಹಿರಂಗಗೊಳಿಸಿದ್ದರು.

1988ರಲ್ಲಿ ದೂರವಾಣಿ ಕದ್ದಾಲಿಕೆ ಬಗ್ಗೆ ಕೇಂದ್ರ ಸಚಿವರು ಲೋಕಸಭೆಯಲ್ಲಿ ದಾಖಲೆ ಸಹಿತ ಮಾಹಿತಿ ನೀಡಿದ್ದ ಬೆನ್ನಲ್ಲೇ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಹೆಗಡೆ ಅವರ ಸಹೋದ್ಯೋಗಿ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿ ಗದ್ದುಗೆ ಏರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ