ಅನುಮತಿ ರಹಿತ ಪ್ರವಾಸ ಆಯೋಜನೆ: ಶಿಕ್ಷಕಿಯ ಪರ ನಿಂತ ಪೋಷಕರು
Team Udayavani, Feb 8, 2023, 7:25 AM IST
ಪುತ್ತೂರು: ಶಾಲೆಗೆ ಸಂಬಂಧಿಸಿದವರಿಗೆ ಮಾಹಿತಿ ನೀಡದೆ ಸಹಶಿಕ್ಷಕಿಯೋರ್ವರು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ದರೆಂಬ ವಿಚಾರಕ್ಕೆ ಸಂಬಂಧಿಸಿ ಕೆಲವು ಪೋಷಕರು ಶಾಲೆಯ ಮುಂಭಾಗದಲ್ಲಿ ಜಮಾ ಯಿಸಿ ಸಹಶಿಕ್ಷಕಿಯ ಪರ ನಿಂತ ವಿದ್ಯಮಾನವು ಚಿಕ್ಕಮುಟ್ನೂರು ಗ್ರಾಮದ ಬೀರ್ನಹಿತ್ಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶನಿವಾರದ ಪ್ರವಾಸಕ್ಕೆ ಸಂಬಂಧಿಸಿ ಸೋಮವಾರ ಶಾಲೆಗೆ ಬಂದ ಪೋಷಕರು, ಸಹಶಿಕ್ಷಕಿಯ ಮೇಲಿನ ಆರೋಪ ಸುಳ್ಳು. ಅಂದು ಸ್ಥಳೀಯ ಜಾತ್ರೆಯ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಎಂದು ನಿರ್ಣಯವಾಗಿದ್ದರಿಂದ ನಾವೇ ಸ್ವತಃ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಿದ್ದೇವೆ. ಶಾಲೆಗೂ ಪ್ರವಾಸಕ್ಕೂ ಸಂಬಂಧವಿಲ್ಲ. ಆದರೆ ಎಸ್‌ಡಿಎಂಸಿ ಅಧ್ಯಕ್ಷರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದರು.
ಏನಿದು ಘಟನೆ
ಚಿಕ್ಕಮುಟ್ನೂರು ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಭಾರತಿ ಫೆ. 4 ರಂದು 20ಕ್ಕೂ ಅಧಿಕ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದಿದ್ದರು. ಈ ಬಗ್ಗೆ ಎಸ್‌ಡಿಎಂಸಿ, ಮುಖ್ಯಗುರುವಿಗೆ ಮಾಹಿತಿ ಇರಲಿಲ್ಲ ಎನ್ನಲಾಗಿತ್ತು. ವಿದ್ಯಾರ್ಥಿಗಳು ಗೈರಾಗಿದ್ದಾರೆ ಎನ್ನುವ ವಿಚಾರ ಊರಿಗೆ ಹಬ್ಬಿದ ಕಾರಣ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಭಾರತಿ ಅವರನ್ನು ಸಂಪರ್ಕಿಸಿ ತತ್‌ಕ್ಷಣ ಮಕ್ಕಳನ್ನು ಕರೆತರುವಂತೆ ಮಾಡಿದ್ದರು.
ಪೋಷಕರ ಪರವಾಗಿ ಹರೀಶ್ ಮಾತನಾಡಿ, ಪ್ರತೀ ವರ್ಷ ಗ್ರಾಮ ದೇವಸ್ಥಾನದ ಜಾತ್ರೆಗೆ ರಜೆ ನೀಡಲಾಗುತ್ತಿತ್ತು. ಈ ವರ್ಷ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದರು. ಎಸ್‌ಡಿಎಂಸಿ ಸಭೆಯಲ್ಲಿ ಫೆ. 4ರಂದು ರಜೆ ಎಂದು ನಿರ್ಣಯ ಆಗಿದೆ. ಆದರೆ ತಿದ್ದುಪಡಿಗಾಗಿ ಸಭೆ ಕರೆದಿಲ್ಲ. ಏಕಾ ಏಕಿ ರಾತ್ರಿ ರಜೆ ಇಲ್ಲ ಎಂದಿರು ವುದು ಸರಿಯಲ್ಲ ಎಂದರು. ಇತರ ಪೋಷಕರು ದನಿ ಗೂಡಿಸಿ ನಾವು ಮಕ್ಕಳನ್ನು ಶಾಲೆಯ ಮೂಲಕ ಪ್ರವಾಸಕ್ಕೆ ಕಳುಹಿಸಿದ್ದೇ ಅಲ್ಲ; ರಜೆ ಎಂದಾದ ಮೇಲೆ ಪ್ರವಾಸಕ್ಕೂ ಶಾಲೆಗೂ ಸಂಬಂಧವಿಲ್ಲ ಎಂದರು. ಎಸ್‌ಡಿಎಂಸಿ ಅಧ್ಯಕ್ಷರು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ವಿನಾಕಾರಣ ಗೊಂದಲ ಸೃಷ್ಟಿಸಿರುವುದಕ್ಕೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.
ಪೋಷಕರನ್ನು ಉದ್ದೇಶಿಸಿ ಬಿಆರ್‌ಪಿ ನವೀನ್ ಸ್ಟೀಫನ್ ವೇಗಸ್ ಮಾತನಾಡಿ, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಿದ್ದೇವೆ ಎಂದರು. ಗ್ರಾ.ಪಂ. ಅಧ್ಯಕ್ಷೆ ಜಯ ಏಕ ಮಾತನಾಡಿ, ಮೇಲಧಿಕಾರಿ ಅವರ ಮೂಲಕ ಮುಂದಿನ ಕ್ರಮ ನಡೆಯಬೇಕಾಗಿದೆ ಎಂದರು.
ಸಹಶಿಕ್ಷಕಿಗೆ ನೋಟಿಸ್
ಮಕ್ಕಳನ್ನು ಅನಧಿಕೃತವಾಗಿ ಕರೆದುಕೊಂಡು ಹೋಗಿರುವ ಬಗ್ಗೆ 3 ದಿನ ದೊಳಗೆ ಲಿಖೀತ ಉತ್ತರ ನೀಡಬೇಕು ಎಂದು ಸಹಶಿಕ್ಷಕಿಗೆ ಬಿಇಒ ಕಚೇರಿ ಯಿಂದ ನೋಟಿಸ್ ನೀಡಲಾಗಿದೆ.