ಒಮ್ಮೆ ಗೆದ್ದ 156 ಕ್ಷೇತ್ರಗಳೇ ಬಿಜೆಪಿ ಟಾರ್ಗೆಟ್.! – ಗುಜರಾತ್ ಚುನಾವಣೆ ಬೆನ್ನಲ್ಲೇ ಪಕ್ಷದಿಂದ ವಾರ್ ರೂಂ ರಚನೆ
Team Udayavani, Nov 22, 2022, 7:05 AM IST
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಿ ಕೆಲಸ ಆರಂಭಿಸಲು ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದು, ಡಿಸೆಂಬರ್‌ನಲ್ಲಿ ಗುಜರಾತ್ ಚುನಾವಣೆ ಫಲಿತಾಂಶದ ಅನಂತರ “ವಾರ್ ರೂಂ’ ಪ್ರಾರಂಭವಾಗಲಿದೆ.
ರಾಜ್ಯದ 224 ಕ್ಷೇತ್ರಗಳ ಪೈಕಿ 156 ಕ್ಷೇತ್ರಗಳಲ್ಲಿ ಬಿಜೆಪಿ ಒಂದಲ್ಲ ಒಂದು ಬಾರಿ ಗೆಲುವು ಸಾಧಿಸಿದ್ದು, ಆ ಕ್ಷೇತ್ರಗಳನ್ನೇ ಪ್ರಮುಖ ಗುರಿ ಆಗಿ ಪರಿಗಣಿಸಲಾಗಿದೆ. ಜತೆಗೆ ಇದುವರೆಗೆ ಗೆಲುವು ಸಾಧಿಸದ ಕ್ಷೇತ್ರಗಳಲ್ಲಿ ಇತರ ಪಕ್ಷಗಳ ಪ್ರಭಾವಿಗಳನ್ನು ಸೆಳೆಯುವ ಕಾರ್ಯತಂತ್ರವನ್ನೂ ರೂಪಿಸಲಾಗಿದೆ. ಈಗಾಗಲೇ ಇಂಥ 20 ಕ್ಷೇತ್ರಗಳನ್ನು ಗುರುತಿಸಿ, ಅಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಪ್ರಭಾವಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಎರಡು ಸುತ್ತಿನ ಮಾತುಕತೆ ನಡೆಸಿದ್ದು, ಜನವರಿಯಲ್ಲಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಹೊಸದಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವವರ ಬಗ್ಗೆ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೂ ಮಾಹಿತಿ ನೀಡಿದ್ದು, ಸ್ಥಳೀಯವಾಗಿ ಎದುರಾಗಬಹುದಾದ ಸಮಸ್ಯೆ, ಅದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮೂರನೇ ಸಮೀಕ್ಷೆ:
ಮತ್ತೂಂದೆಡೆ ವಿಧಾನಸಭೆ ಚುನಾವಣೆಗೆ ಮತದಾರರ ನಾಡಿಮಿಡಿತ ಹಾಗೂ ಹಾಲಿ ಶಾಸಕರು, ಮಾಜಿ ಶಾಸಕರ ವರ್ಚಸ್ಸು ತಿಳಿಯುವ ನಿಟ್ಟಿನಲ್ಲಿ ಬಿಜೆಪಿ ಮೂರನೇ ಬಾರಿಗೆ ಸಮೀಕ್ಷೆ ಆರಂಭಿಸಿದೆ.
ಕಳೆದ ಬಾರಿ ನಡೆಸಿದ್ದ ಸಮೀಕ್ಷೆಯಲ್ಲಿ ಗೆಲ್ಲಲು ಇರುವ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಸರಿಪಡಿಸಿಕೊಳ್ಳುವಂತೆ ಹಾಲಿ ಮತ್ತು ಮಾಜಿ ಶಾಸಕರಿಗೆ ಸೂಚನೆ ನೀಡಲಾಗಿತ್ತು. ಈ ಬಾರಿ ಸಮೀಕ್ಷೆಯಲ್ಲಿ ಹಿಂದಿನ ಮಾರ್ಗದರ್ಶನ ಪಾಲಿಸದ ಹಾಗೂ ಇನ್ನೂ ಸುಧಾರಿಸದ ಕಡೆ ನೇರವಾಗಿಯೇ “ಟಿಕೆಟ್ ನೀಡಲಾಗದು’ ಎಂಬ ಸಂದೇಶ ರವಾನೆ ಮಾಡಿ ಹೊಸ ಮುಖಗಳಿಗೆ ಅವಕಾಶ ಕೊಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಸರಣಿ ಸಮಾವೇಶಗಳು:
ಜನಸ್ಪಂದನ ಯಾತ್ರೆಯ ಜತೆಗೆ ಸಮುದಾಯಗಳ ಸಮಾವೇಶಕ್ಕೂ ಚಾಲನೆ ನೀಡುವ ನಿರ್ಧಾರದಂತೆ ಈಗಾಗಲೇ ಎಸ್‌ಟಿ ಮೋರ್ಚಾ ಸಮಾವೇಶ ಮುಗಿಸಿರುವ ಬಿಜೆಪಿ, ಶಿವಮೊಗ್ಗದಲ್ಲಿ ಯುವ ಮೋರ್ಚಾ, ರಾಯಚೂರಿನಲ್ಲಿ ಎಸ್‌ಸಿ ಮೋರ್ಚಾ, ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ, ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ ನಡೆಸಲಿದೆ. ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವ ಸಾಧ್ಯತೆಯಿದೆ.
ಗುಜರಾತ್ ಫಲಿತಾಂಶದ ನಂತರ ರಾಷ್ಟ್ರ ನಾಯಕರು ಕರ್ನಾಟಕದತ್ತ ಚಿತ್ತ ಹರಿಸಲಿದ್ದು, ಒಂದಷ್ಟು ಬದಲಾವಣೆಗಳೊಂದಿಗೆ ಚುನಾವಣಾ ಹೋರಾಟ ಪ್ರಾರಂಭವಾಗಲಿದೆ. ಈಗಾಗಲೇ ಕೇಂದ್ರ ನಾಯಕರ ಸೂಚನೆಯಂತೆ ನಾವು ನಮ್ಮ ಕೆಲಸ ಆರಂಭಿಸಿದ್ದೇವೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.
ಎಪ್ಪತ್ತು ವರ್ಷ ದಾಟಿದವರಿಗೆ ಟಿಕೆಟ್ ನಿರಾಕರಣೆ, ಸಾಧ್ಯವಿರುವ ಕಡೆ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಿರುವುದು, ಹಿಂದುತ್ವ ಪ್ರತಿಪಾದನೆ ಹಾಗೂ ವೈಚಾರಿಕ ಬದ್ಧತೆ ಹೊಂದಿರುವವರಿಗೆ ಅವಕಾಶ ನೀಡುವ ಬಗ್ಗೆ ನಿರಂತರವಾಗಿ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಪ್ರಯೋಗವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸಿ.ಟಿ.ರವಿ, ವಿಜಯೇಂದ್ರ ಒಳಗೊಂಡ ಉಸ್ತುವಾರಿ ಸಮಿತಿ? ;
ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಕೇಂದ್ರ ಸಚಿವರ ತಂಡವನ್ನು ಒಳಗೊಂಡ ವಾರ್ ರೂಂ’ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಯಾವ್ಯಾವ ಸಚಿವರಿಗೆ ಯಾವ್ಯಾವ ಹೊಣೆಗಾರಿಕೆ ಎಂಬುದು ಈಗಾಗಲೇ ತೀರ್ಮಾನವಾಗಿದೆ. ಇದರ ಜತೆಗೆ ಸಿ.ಟಿ.ರವಿ, ವಿಜಯೇಂದ್ರ ಸೇರಿದಂತೆ ಪ್ರಮುಖ ಚುನಾವಣಾ ಉಸ್ತುವಾರಿ ಸಮಿತಿ ಸಹ ರಚನೆಯಾಗಲಿದೆ. ವಾರ್ ರೂಂ ಹಾಗೂ ಉಸ್ತುವಾರಿ ಸಮಿತಿಯ ತಂಡ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ.
-ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೇಂದ್ರ ಗುತ್ತಿಗೆ ಪ್ರಕಟಿಸಿದ ಬಿಸಿಸಿಐ: ಜಡೇಜಾಗೆ ಬೋನಸ್, ರಾಹುಲ್ ಗೆ ಭಾರೀ ಹಿನ್ನಡೆ
“ನೀವು ಯಾರನ್ನಾದರೂ ಡೇಟ್ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್
ಚಿಕ್ಕಮಗಳೂರು: ಕಾರಿನಲ್ಲಿ ಮದ್ಯದ ಬಾಟಲ್, ಸಿ.ಟಿ.ರವಿ ಕ್ಯಾಲೆಂಡರ್, ಲಾಂಗ್ ಪತ್ತೆ
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ