
ಸುರಕ್ಷಿತ ಒಲಿಂಪಿಕ್ಸ್ : ಜಪಾನ್ ಪ್ರಧಾನಿ ಅಭಯ
Team Udayavani, Jul 20, 2021, 10:43 PM IST

ಟೋಕಿಯೊ: ಇಡೀ ಜಗತ್ತು ಸುರಕ್ಷಿತ ಒಲಿಂಪಿಕ್ಸ್‌ಗಾಗಿ ಹಾರೈಸುತ್ತಿದೆ, ಮತ್ತು ಜಪಾನ್ ಇದನ್ನು ಸಂಪೂರ್ಣವಾಗಿ ಸಾಕಾರಗೊಳಿಸಲಿದೆ ಎಂಬುದಾಗಿ ಪ್ರಧಾನಿ ಯೊಶಿಹಿಡೆ ಸುಗ ಅಭಯ ನೀಡುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಒಂದು ಹಂತದ ಚಾಲನೆ ಲಭಿಸಿತು.
ಮಂಗಳವಾರ ಇಲ್ಲಿನ ಪಂಚತಾರಾ ಹೊಟೇಲಿನ ಮುಚ್ಚಿದ ಕೊಠಡಿಯಲ್ಲಿ ಕ್ರೀಡಾ ಅಧಿಕಾರಿಗಳು ಮತ್ತು ಒಲಿಂಪಿಕ್ಸ್ ಸಂಘಟಕರೊಂದಿಗೆ ನಡೆದ ಸಭೆಯಲ್ಲಿ ಯೊಶಿಹಿಡೆ ಸುಗ ಸುರಕ್ಷಿತ ಕ್ರೀಡಾಕೂಟದ ಭರವಸೆಯನ್ನಿತ್ತರು.
“ವಿಶ್ವವೀಗ ತೀರಾ ಸಂಕಟ ಸ್ಥಿತಿಯಲ್ಲಿದೆ. ಕೊರೊನಾ ತಾಂಡವವಾಡುತ್ತಿರುವ ಈ ಆತಂ ಕದ ಕಾಲಘಟ್ಟದಲ್ಲಿ ಜಪಾನ್ ಮಹೋನ್ನತ ಜಾಗತಿಕ ಕ್ರೀಡಾಕೂಟವನ್ನು ಹಮ್ಮಿಕೊಂಡಿದೆ. ಜಗತ್ತು ಇದನ್ನು ಆತಂಕದಿಂದಲೇ ನೋಡುತ್ತಿದೆ. ಆದರೆ ನಾವು ಎಲ್ಲ ಆತಂಕವನ್ನು ನಿವಾರಿಸಿ ಮುಂದಡಿ ಇಡುವ ವಿಶ್ವಾಸದಲ್ಲಿದ್ದೇವೆ. ಜಪಾನ್ ಜನತೆಯದ್ದಷ್ಟೇ ಅಲ್ಲ, ಇಲ್ಲಿ ಆಗಮಿಸಿರುವ ವಿಶ್ವದೆಲ್ಲೆಡೆಯ ಜನರ ಆರೋಗ್ಯ ಹಾಗೂ ಸುರಕ್ಷೆಯನ್ನು ಸವಾಲಾಗಿ ಸ್ವೀಕರಿಸಲಿದೆ. ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ’ ಎಂದು ಸುಗ ಹೇಳಿದರು.
ವಿಶ್ವವೇ ಕೊಂಡಾಡಲಿದೆ
ಸಭೆಯಲ್ಲಿ ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಕೂಡ ಹಾಜರಿದ್ದರು. “ಜಪಾನ್ ಏನು ಸಾಧಿಸಿದೆ ಎಂಬುದನ್ನು ಇನ್ನು ಕೆಲವೇ ದಿನಗಳಲ್ಲಿ ಇಡೀ ವಿಶ್ವವೇ ಕೊಂಡಾಡಲಿದೆ. ಅಷ್ಟರ ಮಟ್ಟಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಯಶಸ್ವಿಯಾಗಲಿದೆ. ಒಲಿಂಪಿಕ್ಸ್ ಕೂಟವನ್ನು ರದ್ದುಗೊಳಿಸುವುದು ಎಂದೂ ನಮ್ಮ ಮುಂದಿರುವ ಆಯ್ಕೆ ಆಗಿರಲಿಲ್ಲ. ಭವಿಷ್ಯದಲ್ಲಿ ನಾವು ಮಾನವೀಯ ವಿಶ್ವಾಸ ಒದಗಿಸಲಿದ್ದೇವೆ’ ಎಂದು ತಿಳಿಸಿದರು.

**EDS: IMAGE POSTED BY @manpreetpawar07 ON TUESDAY, JULY 20, 2021** Tokyo: Indian hockey team poses near the Olympics rings, ahead of the Summer Olympics 2020, in Tokyo, Tuesday, July 20, 2021. (PTI Photo) (PTI07_20_2021_000033B)
ಒಲಿಂಪಿಕ್ಸ್ ಗುರಿಯೆಡೆಗೆ ಜತೆಗೂಡಿ ಸಾಗಬೇಕಿದೆ
ಟೋಕಿಯೊ ಒಲಿಂಪಿಕ್ಸ್ ಈ ವರೆಗೆ ಮೂರು ಧ್ಯೇಯ ಹಾಗೂ ಗುರಿಗಳನ್ನು ಹೊಂದಿತ್ತು-ವೇಗ, ಉತ್ಕೃಷ್ಟ ಹಾಗೂ ಬಲಿಷ್ಠ. ಈಗ ಇದರೊಂದಿಗೆ “ಜತೆಗೂಡುವಿಕೆ’ಯನ್ನೂ ಸೇರಿಸಲಾಗಿದೆ. ಈ ನಾಲ್ಕು ಗುರಿಗಳೊಂದಿಗೆ ಜಪಾನ್ ಕ್ರೀಡಾಕೂಟ ಜು. 23ರಿಂದ ಅಧಿಕೃತವಾಗಿ ಜಗತ್ತಿಗೆ ತೆರೆದುಕೊಳ್ಳಲಿದೆ.
ಎಪ್ರಿಲ್‌ನಲ್ಲಿ ನಡೆದ ಐಒಸಿ ಕಾರ್ಯಕಾರಿ ಸಭೆಯಲ್ಲಿ “ಜತೆಗೂಡುವಿಕೆ’ ಪದವನ್ನು ಸೇರ್ಪಡೆಗೊಳಿಸುವ ಪ್ರಸ್ತಾವವನ್ನು ಅಧ್ಯಕ್ಷ ಥಾಮಸ್ ಬಾಕ್ ಮುಂದಿರಿಸಿದ್ದರು. ಇದನ್ನೀಗ ಅಧಿಕೃತಗೊಳಿಸಲಾಗಿದೆ.
“ನಾವು ವೇಗವಾಗಿ ಸಾಗಬೇಕು, ಉನ್ನತ ಗುರಿಯನ್ನು ಹೊಂದಿರಬೇಕು, ಹೆಚ್ಚು ಉತ್ಕೃಷ್ಟಗೊಳ್ಳಬೇಕು. ಇದೆಲ್ಲವನ್ನು ಸಾಧಿಸಲು ಒಗ್ಗಟ್ಟಾಗಿರಬೇಕು’ ಎಂದು ಬಾಕ್ ಹೇಳಿದ್ದರು.
ಬೇಸ್‌ಬಾಲ್ ತಂಡದಲ್ಲಿ ಕೊರೊನಾ
ಪದಕ ಭರವಸೆಯೊಂದಿಗೆ ಟೋಕಿಯೋಗೆ ಆಗಮಿಸಿ ಎಲ್ಲ ಸಿದ್ದತೆಯೊಂದಿಗೆ ಇನ್ನೇನು ಅಖಾಡಕ್ಕೆ ಇಳಿಯಬೇನ್ನುವಷ್ಟರಲ್ಲಿ ಕ್ರೀಡಾಪಟುಗಳಿಗೆ ಕೊರೊನಾ ಸೋಂಕು ತಗಲುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಂಗಳವಾರ ಮೆಕ್ಸಿಕೋದ ಬೇಸ್‌ಬಾಲ್ ತಂಡದ ಇಬ್ಬರಿಗೆ ಹಾಗೂ ಕೂಟದ ಸ್ವಯಂಸೇವಕರೊಬ್ಬರಿಗೆ ಸೋಂಕು ತಗುಲಿದೆ.
“ಎಲ್ಲ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಯನ್ನು ಪಾಲಿಸಿ ಕ್ರೀಡಾಕೂಟಕ್ಕೆ ಆಗಮಿಸಿದರೂ ನಮ್ಮ ಬೇಸ್‌ಬಾಲ್ ತಂಡದ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಇವರ ಸಂಪರ್ಕಕ್ಕೆ ಬಂದ ಎಲ್ಲ ಕ್ರೀಡಾಪಟುಗಳ ಮೇಲೆ ನಿಗಾ ಇರಿಸಲಾಗಿದೆ’ ಎಂದು ಮೆಕ್ಸಿಕನ್ ಒಲಿಂಪಿಕ್ಸ್ ಸಮಿತಿ ತಿಳಿಸಿದೆ.
ಮೆಕ್ಸಿಕೊ ತನ್ನ ಮೊದಲ ಪಂದ್ಯವನ್ನು ಡೊಮಿನಿಕ್ ರಿಪಬ್ಲಿಕ್ ವಿರುದ್ಧ ಜು. 30ರಂದು ಯೊಕೊಹಾಮದಲ್ಲಿ ಆಡಲಿದೆ.
ಸ್ವಯಂಸೇವಕರಿಗೆ ಪಾಸಿಟಿವ್
ಕ್ರೀಡಾಕೂಟದ ಸ್ವಯಂ ಸೇವಕರೊಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಅವರನ್ನು ಐಸೊಲೇಶನ್‌ನಲ್ಲಿ ಇರಿಸಲಾಗಿದೆ. ಕ್ರೀಡಾಗ್ರಾಮದಲ್ಲಿ ಸ್ವಯಂ ಸೇವಕರೊಬ್ಬರಲ್ಲಿ ಪತ್ತೆಯಾದ ಮೊದಲ ಕೇಸ್ ಇದಾಗಿದೆ.
ಉಗಾಂಡ ವೇಟ್‌ಲಿಫ್ಟರ್ ಪತ್ತೆ
ಒಲಿಂಪಿಕ್ಸ್ ಅಭ್ಯಾಸ ಶಿಬಿರದಿಂದ ನಾಪತ್ತೆಯಾಗಿದ್ದ ಉಗಾಂಡದ ವೇಟ್‌ಲಿಫ್ಟರ್ ಜೂಲಿಯಸ್ ಸೆಕಿಟೋಲೆಕೊ ಅವರನ್ನು ಜಪಾನ್ ಪೊಲೀಸರು ಪತ್ತೆಹಚ್ಚಿದ್ದಾರೆ. “ತವರಲ್ಲಿ ಹೊಟ್ಟೆಪಾಡು ಕಷ್ಟ. ಹೀಗಾಗಿ ನಾನಿಲ್ಲಿ ಕೆಲಸ ಹುಡುಕಲು ಬಯಸಿದ್ದೇನೆ’ ಎಂದು ಸೆಕಿಟೋಲೆಕೊ ಪತ್ರ ಬರೆದಿಟ್ಟು ಕಾಣೆಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದಿಂದಾಗಿ ಸೆಕಿಟೋಲೆಕೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಶುಕ್ರವಾರ ಸ್ಪರ್ಧೆ ಆರಂಭವಾಗಲಿದ್ದು, ಅಷ್ಟರಲ್ಲಿ ಕೊರೊನಾ ಮಾರ್ಗಸೂಚಿಯನ್ನು ಪಾಲಿಸಲು ಸಾಧ್ಯವಾಗದು. ಹೀಗಾಗಿ ಸೆಕಿಟೋಲೆಕೊ ಮತ್ತು ಅವರ ಕೋಚ್ ಉಗಾಂಡಕ್ಕೆ ವಾಪಸಾಗಬೇಕಾದ ಸಂಕಟಕ್ಕೆ ಸಿಲುಕಿದ್ದಾರೆ.
ಹಿಂದೆ ಸರಿದ ಟೊಯೊಟಾ
ಟೆಲಿವಿಷನ್ ಜಾಹೀರಾತು ಮೂಲಕ ಒಲಿಂಪಿಕ್ಸ್ ಪ್ರಚಾರಾಭಿಯಾನ ನಡೆಸುವ ಯೋಜನೆಯಿಂದ ಹಿಂದೆ ಸರಿದಿರುವುದಾಗಿ ಜಪಾನಿನ ಖ್ಯಾತ ವಾಹನ ಕಂಪೆನಿ ಟೊಯೊಟಾ ಹೇಳಿದೆ. ಜತೆಗೆ ಉದ್ಘಾಟನಾ ಸಮಾರಂಭಕ್ಕೂ ಅಧಿಕಾರಿಗಳನ್ನು ಕಳುಹಿಸುವುದಿಲ್ಲ ಎಂದಿದೆ.
ಕೋವಿಡ್ ಸಾಂಕ್ರಾಮಿಕದ ಕಾರಣ ಕ್ರೀಡಾಕೂಟಕ್ಕೆ ಭಾರೀ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಕಂಪೆನಿ ಈ ನಿರ್ಧಾರ ಪ್ರಕಟಿಸಿದೆ. ಇದರಿಂದಾಗಿ ಒಲಿಂಪಿಕ್ಸ್ ಜಾಹೀರಾತು ವ್ಯವಹಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಜೆಕ್ ಕೋಚ್‌ಗೂ ಕೊರೊನಾ
ಒಲಿಂಪಿಕ್ಸ್ ಬೀಚ್ ವಾಲಿಬಾಲ್‌ನಲ್ಲಿ ಸ್ಪರ್ಧಿಸಲಿರುವ ಜೆಕ್ ತಂಡದ ಆಂಡ್ರೆಜ್ ಪೆರುಸಿಕ್ ಅವರಿಗೆ ಸೋಮವಾರ ಕೊರೊನಾ ಸೋಂಕು ದೃಢಪಟ್ಟ ಬೆನ್ನಲೇ ಇದೀಗ ಕೋಚ್ ಸಿಮೋನ್ ನೌಸ್ ಅವರಿಗೂ ಕೋವಿಡ್ ಪಾಸಿಟಿವ್ ಫಲಿತಾಂಶ ಕಂಡುಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
