
Manipur ದಲ್ಲಿ ಸೇನೆ ಸರ್ಪಗಾವಲು
Team Udayavani, May 28, 2023, 7:29 AM IST

ಇಂಫಾಲ್: ಪದೇಪದೆ ಹಿಂಸಾಚಾರಕ್ಕೆ ಗುರಿಯಾಗಿ, ದೇಶಾದ್ಯಂತ ಭೀತಿ ಹೆಚ್ಚಿಸು ತ್ತಿದ್ದ ಮಣಿಪುರವನ್ನು ಹತೋಟಿಗೆ ತರಲು ಸೇನಾಸ್ತ್ರವನ್ನು ಬಳಸಲು ರಾಜ್ಯ ಸರಕಾರ ಮುಂದಾಗಿದೆ. ರಾಜ್ಯದಲ್ಲಿನ ಹಿಂಸಾಚಾರವನ್ನು ಮಟ್ಟಹಾಕಿ, ಶಾಂತಿ -ಸುವ್ಯವಸ್ಥೆ ಕಾಪಾಡಿಕೊಳ್ಳಲು ಸ್ವತಃ ಸೇನೆಯೇ ಕಣಕ್ಕೆ ಇಳಿದಿದ್ದು, ಮಣಿಪುರದಾದ್ಯಂತ ಸೇನಾಪಡೆಗಳಿಂದ ಬಿಗಿಭದ್ರತೆ ಹೆಚ್ಚಿಸಲಾಗಿದೆ.
ಈಶಾನ್ಯ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇ 29ರಂದು ಭೇಟಿ ನೀಡಲಿದ್ದು, ರಾಜ್ಯದ ಆಂತರಿಕ ಸಮಸ್ಯೆಯನ್ನು ಶಮನಗೊಳಿಸುವ ಪ್ರಮುಖ ಕ್ರಮವನ್ನು ಕೈಗೊಳ್ಳಲಿದ್ದಾರೆ. ಈ ನಡುವೆಯೇ ಕೆಲವು ದುಷ್ಕರ್ಮಿಗಳು ಮತ್ತೆ ಗಲಭೆ ಸೃಷ್ಟಿಸಿ, ಹಿಂಸಾಚಾರಕ್ಕೆ ಪ್ರಚೋದಿಸಿ, ಮಣಿಪುರವನ್ನು ಹೊತ್ತಿ ಉರಿಸುವ ಹುನ್ನಾರ ರೂಪಿಸಿದ್ದಾರೆ.
ಈಗಾಗಲೇ ತಿಂಗಳ ಆರಂಭದಲ್ಲೇ ಸ್ಥಳೀಯ ಸಮುದಾಯಗಳ ನಡುವಿನ ಸಂಘರ್ಷದಿಂದಾಗಿ 60ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹತ್ತಾರು ಮನೆ ಗಳು ಹೊತ್ತಿ ಉರಿದಿದ್ದು, ನಡು ರಸ್ತೆಯಲ್ಲೇ ಜನರು ಒಬ್ಬರನ್ನೊಬ್ಬರು ಪರಸ್ಪರ ಗುಂಡಿಕ್ಕಿ ಹತ್ಯೆಗೈಯುತ್ತಿದ್ದಾರೆ. ಈ ಹಿನ್ನೆಲೆ ಪರಿಸ್ಥಿತಿ ಹತೋಟಿಗೆ ತರಲು ಸಿಎಪಿಎಫ್, ಐಆರ್‌ಬಿ, ವಿಡಿಎಫ್ ಸೇರಿದಂತೆ ಭದ್ರತಾಪಡೆಗಳ ಹಲವು ವಿಭಾಗದ ತುಕಡಿಗಳು ಹಾಗೂ ಖುದ್ದು ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉಗ್ರರ ಕೈವಾಡಕ್ಕೆ ಸೇನಾ ಕಡಿವಾಣ
ಮೈತೇಯಿ ಸಮುದಾಯಕ್ಕೆ ಬುಡಕಟ್ಟು ಪಂಗಡಗಳ ಸ್ಥಾನಮಾನ ನೀಡುವಂತೆ ರಾಜ್ಯ ಸರಕಾರಕ್ಕೆ ಮಣಿಪುರ ಹೈಕೋರ್ಟ್ ನಿರ್ದೇಶಿಸಿದ ಬಳಿಕ ಬುಡಕಟ್ಟು ಸಮು ದಾಯಗಳ ನಡುವಿನ ಸಂಘರ್ಷ ಉಲ್ಬಣ ಗೊಂಡಿದೆ. ಈ ಸಂಘರ್ಷದ ಲಾಭವನ್ನು ಉಗ್ರರು ಪಡೆದುಕೊಳ್ಳುತ್ತಿದ್ದು ಹಿಂಸಾಚಾರ ಉತ್ತೇಜಿಸುತ್ತಿದ್ದಾರೆಂದು ಗುಪ್ತಚರ ಮೂಲಗಳು ತಿಳಿಸಿವೆ. ಈ ಹಿನ್ನೆಲೆ ಸೇನಾ ಸಿಬಂದಿ ಭದ್ರತೆ ಹೆಚ್ಚಿಸುವುದರ ಜತೆಗೆ ಸ್ವತಃ ತಾವೇ ಗ್ರಾಮಗಳಿಗೆ ತೆರಳಿ, ಜನರ ಮನವೊಲಿಸಿ ಶಾಂತಿ ಕಾಪಾಡಿಕೊಳ್ಳಲು ಮಾತುಕತೆ ನಡೆಸುತ್ತಿದ್ದಾರೆ.
ಕಾರ್ಗತ್ತಲ ಕಾರ್ಯಾಚರಣೆ
ಹಿಂಸಾಚಾರ ಪ್ರಚೋದಿಸುವ ನಿಟ್ಟಿನಲ್ಲಿ ಹಳ್ಳಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವ ಗುಮಾನಿ ಹಿನ್ನೆಲೆ ಸೇನಾಪಡೆಗಳು ರಾತೋರಾತ್ರಿ ಮಣಿಪುರದ ಹಳ್ಳಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಈಗಾಗಲೇ ಹಲವು ಭಾಗದಿಂದ ಸ್ಫೋಟಕಗಳು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೂಲ ಜಾಲಾಡಲು ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಅನಾಮಧೇಯ ಅಧಿಕಾರಿ ಹೇಳಿದ್ದಾರೆ.
ಮಹಿಳೆಯ ಕೂದಲು ಜಗ್ಗಾಡಿದ ಪೇದೆ
ಸೂರಜ್‌ಪುರ: ಛತ್ತೀಸ್‌ಗಢದ ಸೂರಜ್‌ಪುರ ತಿಲಿಸಿವ ಗ್ರಾಮದಲ್ಲಿ ನಡೆದ ಒತ್ತುವರಿ ತೆರವು ಅಭಿಯಾನದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಮಹಿಳೆಯ ಕೇಶವನ್ನು ಹಿಡಿದು ಎಳೆದಾಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದಿಂದ ಒತ್ತುವರಿ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು. ಇದನ್ನು ಖಂಡಿಸಿ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದ್ದಾಗ ಮೇಲಿನ ಘಟನೆ ನಡೆದಿದೆ.
ಟಾಪ್ ನ್ಯೂಸ್
