ಶೀಘ್ರದಲ್ಲೇ ಬಿಜೆಪಿ “ಸಾವರ್ಕರ್ ದೇಶದ ರಾಷ್ಟ್ರಪಿತ” ಎಂದು ಘೋಷಿಸುತ್ತೆ: ಒವೈಸಿ
ಗಾಂಧಿ ಹೆಸರನ್ನು ಕಿತ್ತೆಸೆದು ಸಾವರ್ಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸುತ್ತಾರೆ.
Team Udayavani, Oct 13, 2021, 1:24 PM IST
ಹೈದರಾಬಾದ್:ಮಹಾತ್ಮ ಗಾಂಧಿ ಕೋರಿಕೆ ಮೇರೆಗೆ ಸಾರ್ವಕರ್ ಅವರು ಬಿಡುಗಡೆಗಾಗಿ ಕ್ಷಮಾಪಣೆ ನೀಡುವಂತೆ ಬ್ರಿಟಿಷರಿಗೆ ಪತ್ರ ಬರೆದಿದ್ದರು ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಬಿಜೆಪಿ ಶೀಘ್ರದಲ್ಲಿಯೇ ವಿನಾಯಕ್ ದಾಮೋದರ್ ಸಾರ್ವಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸಲಿದೆ ಎಂದು ಆರೋಪಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಚೇರಿಯಲ್ಲೇ ಡಿಕೆಶಿ ವಿರುದ್ಧ ಮಾತು: ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಅಮಾನತು
ಎಎನ್ ಐ ಜೊತೆ ಮಾತನಾಡಿರುವ ಒವೈಸಿ, ಭಾರತೀಯ ಜನತಾ ಪಕ್ಷ ತಿರುಚಿದ ಇತಿಹಾಸವನ್ನು ಪ್ರಸ್ತುತಪಡಿಸುತ್ತಿದೆ. ಒಂದು ವೇಳೆ ಇದು ಮುಂದುವರಿದರೆ, ಅವರು ಮಹಾತ್ಮ ಗಾಂಧಿ ಹೆಸರನ್ನು ಕಿತ್ತೆಸೆದು ಸಾವರ್ಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸುತ್ತಾರೆ. ಮಹಾತ್ಮ ಗಾಂಧಿ ಹತ್ಯೆಯಲ್ಲಿ ಆರೋಪಿ ಎನ್ನಲಾಗಿದ್ದ ಸಾವರ್ಕರ್ ಅವರನ್ನು ಜಸ್ಟೀಸ್ ಜೀವನ್ ಲಾಲ್ ಕಪೂರ್ ಸಮಿತಿ ತನಿಖೆಗೊಳಪಡಿಸಿತ್ತು ಎಂದು ಒವೈಸಿ ದೂರಿದ್ದಾರೆ.
ಮಹಾತ್ಮ ಗಾಂಧಿ ಅವರ ಕೋರಿಕೆ ಮೇರೆಗೆ ಸಾವರ್ಕರ್ ಅವರು ಕ್ಷಮಾಪಣೆ ನೀಡುವಂತೆ ಬ್ರಿಟಿಷರಿಗೆ ಪತ್ರ ಬರೆದಿದ್ದರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು.