ಮಹಿಳಾ ದಿನದಂದು BMTCಯಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್:ಮಹಿಳೆಯರಿಗೆ ಫ್ರೀ ಪ್ರಯಾಣದ ಆಫರ್
Team Udayavani, Mar 7, 2023, 6:49 PM IST
ಬೆಂಗಳೂರು: ಮಹಿಳಾ ದಿನಾಚರಣೆಯ ಪ್ರಯುಕ್ತ ಮಾ.8 ರಂದು ಬಿಎಂಟಿಸಿ ಬಸ್ನಲ್ಲಿ ಮಹಿಳೆಯರು ಎಲ್ಲಿಂದ ಎಲ್ಲಿಗೆ ಬೇಕಾದರೂ ಸಂಪೂರ್ಣ ಉಚಿತವಾಗಿ ಪ್ರಯಾಣಿಸಬಹುದು!
ನಿಜ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಬಿಎಂಟಿಸಿ ಸಿಲಿಕಾನ್ ಸಿಟಿ ಮಹಿಳೆಯರಿಗೆ ಭರ್ಜರಿ ಆಫರ್ ನೀಡಿದೆ. ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೆ ಮಹಿಳೆಯರಿಗೆ ಬಿಎಂಟಿಸಿ ಬಸ್ ಪ್ರಯಾಣ ಕಂಪ್ಲೀಟ್ ಫ್ರೀ.
ಅಂದ ಹಾಗೆ, ಈ ಉಚಿತ ಪ್ರಯಾಣ ಬಿಎಂಟಿಸಿಯ ಎಲ್ಲಾ ಮಾದರಿ ಬಸ್ಸುಗಳಿಗೂ ಅನ್ವಯವಾಗಲಿದೆ. ಎಸಿ, ವೋಲ್ವೋ, ವಜ್ರವಾಯು ಹೀಗೆ ಎಲ್ಲಾ ಬಸ್ಸುಗಳಲ್ಲೂ ಮಾ.8 ರಂದು ಮಹಿಳೆಯರಿಗೆ ಉಚಿತ ಪ್ರಯಾಣವಿರಲಿದೆ. ಅದೂ ಅಲ್ಲದೇ ಬಸ್ನಲ್ಲಿ ಸಂಚರಿಸುವುದಕ್ಕೆ ಯಾವುದೇ ದಾಖಲಾತಿ, ಗುರುತಿನ ಚೀಟಿಯ ಅವಶ್ಯಕತೆಯೂ ಇಲ್ಲ ಎಂದು ಬಿಎಂಟಿಸಿ ಹೇಳಿದೆ.
ಅಂತರರಾಷ್ಟೀಯ ಮಹಿಳಾ ದಿನಾಚರಣೆಯ ಅಂಗವಾಗಿ ದಿ.08-03-2023 ರಂದು ಮಹಿಳೆಯರಿಗೆ ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ ಉಚಿತ ಪ್ರಯಾಣ ಕಲ್ಪಸಿದೆ. pic.twitter.com/FjCJCx6STq
— BMTC (@BMTC_BENGALURU) March 7, 2023
ಕಳೆದ ವರ್ಷ ಜ.15 ರಂದು ಬಿಎಂಟಿಸಿ ತನ್ನ ಬೆಳ್ಳಿ ಹಬ್ಬ ಆಚರಿಸಿಕೊಂಡಿತ್ತು. ಅಂದು ಕೂಡಾ ಬಿಎಂಟಿಸಿ ಇದೇ ರೀತಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿತ್ತು.
ಬೆಂಗಳೂರಲ್ಲಿ ಬಿಎಂಟಿಸಿ ಬಸ್ಗಳಲ್ಲಿ ದಿನಂಪ್ರತಿ ಸುಮಾರು 10 ಲಕ್ಷ ಮಹಿಳೆಯರು ಪ್ರಯಾಣ ಮಾಡುತ್ತಾರೆ. ಹೀಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎಲ್ಲಾ ಮಹಿಳೆಯರೂ ಉಚಿತ ಪ್ರಯಾಣದ ಸೌಲಭ್ಯ ಪಡೆದುಕೊಳ್ಳಲಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ನೆಲದ ಸೊಗಡಿನ ಪ್ರಿ ವೆಡ್ಡಿಂಗ್ ಫೋಟೋ ಶೂಟ್; ನೋಡಿದವರಿಗೆ ಮೋಡಿ ಮಾಡಿದ ಜೋಡಿ