3.17 ಲಕ್ಷಕ್ಕೇರಿದ ಕೋವಿಡ್-19 ಸೋಂಕು
Team Udayavani, Jun 14, 2020, 6:40 AM IST
ಹೊಸದಿಲ್ಲಿ: ದೇಶ ಮಟ್ಟದಲ್ಲಿ ಶುಕ್ರವಾರ 3.06 ಲಕ್ಷ ದಾಟಿದ್ದ ಸೋಂಕುಪೀಡಿತರ ಸಂಖ್ಯೆ ಶನಿವಾರದ ವೇಳೆಗೆ 3.17 ಲಕ್ಷಕ್ಕೆ ಏರಿದೆ. ಮಹಾರಾಷ್ಟ್ರದಲ್ಲೇ ಅತೀ ಹೆಚ್ಚು, ಅಂದರೆ 3,427 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, ಇಲ್ಲಿ ಒಟ್ಟಾರೆ ಸಂಖ್ಯೆ 1,04,568ಕ್ಕೆ ಏರಿದೆ.
ಕಳೆದ 24 ತಾಸುಗಳಲ್ಲಿ ಮಹಾರಾಷ್ಟ್ರದಲ್ಲಿ 113 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ನಾಲ್ವರು ಪೊಲೀಸರು ಸೇರಿದ್ದು, ಮೃತಪಟ್ಟ ಪೊಲೀಸರ ಒಟ್ಟು ಸಂಖ್ಯೆ 25ಕ್ಕೇರಿದೆ.
ಶನಿವಾರ ರಾತ್ರಿ ವೇಳೆಗೆ ಚೇತರಿಸಿಕೊಂಡವರ ಪ್ರಮಾಣವೂ ಹೆಚ್ಚಾಗಿರುವುದು ಸಮಾಧಾನಕರ ವಿಚಾರ. ಶುಕ್ರವಾರ ರಾತ್ರಿಯಿಂದ ಶನಿವಾರ ರಾತ್ರಿಯ ವರೆಗೆ 6 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಚೇತರಿಕೆ ಪ್ರಮಾಣವೂ ಮಹಾರಾಷ್ಟ್ರದಲ್ಲೇ ಹೆಚ್ಚಿದ್ದು, ಇಲ್ಲಿ 1,550 ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ತಮಿಳುನಾಡಿನಲ್ಲೂ 1,362 ಮಂದಿ ಗುಣಮುಖರಾಗಿದ್ದಾರೆ.