
ಎಲಾನ್ ಮಸ್ಕ್ ಮತ್ತೆ ವಿಶ್ವದ ನಂ.1 ಕುಬೇರ
Team Udayavani, Feb 28, 2023, 1:45 PM IST

ನವದೆಹಲಿ: ವಿಶ್ವದ ಶ್ರೀಮಂತ ಉದ್ಯಮಿ, ಟೆಸ್ಲಾ ಮತ್ತು ಟ್ವಿಟರ್ ಸಿಇಒ ಎಲಾನ್ ಮಸ್ಕ್ ವಿಶ್ವ ಕುಬೇರರ ಪಟ್ಟಿಯಲ್ಲಿ ಮತ್ತೊಮ್ಮೆ ನಂ.1 ಪಟ್ಟಕ್ಕೇರಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ವರದಿ ಮಾಡಿದೆ.
ಕಳೆದ ಡಿಸೆಂಬರ್‌ನಲ್ಲಿ ಫ್ರೆಂಚ್ ಮೂಲದ ಫ್ಯಾಷನ್ ಬ್ರಾಂಡ್ ʻಲೂಯಿ ವಿಟಾನ್ʼನ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರು ಮಸ್ಕ್‌ನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದರು.
ಎರಡು ತಿಂಗಳ ಕಾಲ ಎರಡನೇ ಸ್ಥಾನದಲ್ಲಿದ್ದ ಮಸ್ಕ್ ಇದೀಗ ತಮ್ಮ ಟೆಸ್ಲಾದ ಷೇರುಗಳ ಹೆಚ್ಚಳದಿಂದಾಗಿ ಮೊದಲ ಸ್ಥಾನಕ್ಕೆ ಏರಿದ್ದಾರೆ.
ಸೋಮವಾರ ಷೇರು ಪೇಟೆ ಮುಕ್ತಾಯವಾದ ಬಳಿಕ ಮಸ್ಕ್ ಸಂಪತ್ತು 187.1 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಆ ಮೂಲಕ 185.3 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ.
ಈ ವರ್ಷ ಟೆಸ್ಲಾ ಷೇರು ಮೌಲ್ಯ ಶೇ.70 ಹೆಚ್ಚಾಗಿದ್ದು, ಇದರಿಂದಲೇ ಮಸ್ಕ್ ಕುಬೇರರ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ತಲುಪಿದ್ದಾರೆ ಎಂದು ಹೇಳಲಾಗಿದೆ.
ಟ್ವಿಟರ್ ಅನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಬಳಿಕ ಮಸ್ಕ್ ಅವರು ಭಾರೀ ಕುಸಿತ ಕಂಡಿದ್ದರು. ನವೆಂಬರ್, ಡಿಸೆಂಬರ್ ನಡುವಿನಲ್ಲಿ ಅವರ ಸಂಪತ್ತಿನ ಮೌಲ್ಯವು 200 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿತ್ತು.ಇದು ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ಕುಸಿತ ಎಂದು ವರದಿಗಳು ತಿಳಿಸಿವೆ.
2022 ಎಲಾನ್ ಮಸ್ಕ್‌ಗೆ ಅತ್ಯಂತ ಕೆಟ್ಟ ವರ್ಷವಾಗಿತ್ತು. ಕೋವಿಡ್-19 ಹಿನ್ನಲೆ, ಟ್ವಿಟರ್ ಖರೀದಿ , ವಿವಾದಗಳು, ದುಬಾರಿ ಯೋಜನೆಗಳು ಇತ್ಯಾದಿಗಳಿಂದಾಗಿ ಮಸ್ಕ್‌ಗೆ ವಾಲ್‌ಸ್ಟ್ರೀಟ್ ಶಾಕ್ ನೀಡಿತ್ತು. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಮಸ್ಕ್ ಮತ್ತೊಮ್ಮೆ ವಿಶ್ವದ ನಂ.1 ಕುಬೇರರಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: ಪ್ರಮುಖ ಇಸ್ಲಾಮಿಕ್ ಕಮಾಂಡರ್ ಗಳನ್ನು ಹತ್ಯೆ ಮಾಡಿದ ತಾಲಿಬಾನ್
ಟಾಪ್ ನ್ಯೂಸ್
