Ashes: ಗೆಲುವಿನ ಹಾದಿಯಲ್ಲಿ ಇಂಗ್ಲೆಂಡ್
Team Udayavani, Jun 21, 2023, 7:38 AM IST
ಬರ್ಮಿಂಗ್ಹ್ಯಾಮ್: ಮಳೆಯ ಹೊಡೆತಕ್ಕೆ ಸಿಲುಕಿರುವ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನತ್ತ ಸಾಗುತ್ತಿದೆ. 281 ರನ್ ಟಾರ್ಗೆಟ್ ಪಡೆದಿರುವ ಆಸ್ಟ್ರೇಲಿಯ 7 ವಿಕೆಟಿಗೆ 212 ರನ್ ಮಾಡಿ ಅಂತಿಮ ದಿನದ ಅಂತಿಮ ಅವಧಿಯ ಆಟ ಮುಂದುವರಿಸುತ್ತಿದೆ.
ಭಾರೀ ಮಳೆಯಿಂದ ಮೊದಲ ಅವಧಿಯ ಆಟ ಸಂಪೂರ್ಣ ನಷ್ಟವಾಗಿತ್ತು. ಪಂದ್ಯ 2.15ಕ್ಕೆ ಆರಂಭಗೊಂಡಿತು. 67 ಓವರ್ಗಳ ಆಟವನ್ನು ನಿಗದಿಗೊಳಿಸಲಾಗಿದೆ. ಆಸ್ಟ್ರೇಲಿಯ 3 ವಿಕೆಟಿಗೆ 107 ರನ್ ಮಾಡಿದಲ್ಲಿಂದ ಆಟ ಮುಂದುವರಿಸಿತು. ಮೊದಲು ನೈಟ್ ವಾಚ್ಮನ್ ಸ್ಕಾಟ್ ಬೋಲ್ಯಾಂಡ್ (20) ವಿಕೆಟ್ ಬಿತ್ತು. ಅನಂತರ ಟ್ರ್ಯಾವಿಸ್ ಹೆಡ್ (16) ಔಟಾದರು. ಬ್ರಾಡ್ ಮತ್ತು ಮೊಯಿನ್ ಅಲಿ ಈ ವಿಕೆಟ್ ಹಾರಿಸಿದರು. ಟೀ ಬಳಿಕ ಕ್ಯಾಮರಾನ್ ಗ್ರೀನ್ (28) ವಿಕೆಟ್ ಉರುಳಿತು. ಕ್ರೀಸ್ ಆಕ್ರಮಿಸಿಕೊಂಡಿದ್ದ ಆರಂಭಕಾರ ಉಸ್ಮಾನ್ ಖ್ವಾಜಾ 65 ರನ್ ಮಾಡಿ 7ನೆಯವರಾಗಿ ಪೆವಿಲಿಯನ್ ಸೇರಿಕೊಂಡರು. ಆಸ್ಟ್ರೇಲಿಯ ಅಪಾಯಕ್ಕೆ ಸಿಲುಕಿತು.
4ನೇ ದಿನದಾಟದ ಕೊನೆಯಲ್ಲಿ ಆಸೀಸ್ ಕ್ಷಿಪ್ರ ಕುಸಿತವೊಂದನ್ನು ಕಂಡಿತ್ತು. ಡೇವಿಡ್ ವಾರ್ನರ್ (36), ಮಾರ್ನಸ್ ಲಬುಶೇನ್ (13) ಮತ್ತು ಸ್ಟೀವನ್ ಸ್ಮಿತ್ (6) ಪೆವಿಲಿಯನ್ ಸೇರಿದ್ದರು.